ಎಲ್ಲರನ್ನೂ ಆಕ್ಸಿಜನ್ ಕೇಳುತ್ತಿರುವ ದೆಹಲಿ ಸರ್ಕಾರ ಮಂಜೂರಾದ ಪ್ಲ್ಯಾಂಟ್​ಗಳನ್ನು ಇನ್ನೂ ಸ್ಥಾಪಿಸಿಲ್ಲ !

dehli
Published on

ನವದೆಹಲಿ : ಹೆಚ್ಚುತ್ತಿರುವ ಕರೊನಾ ರೋಗಿಗಳಿಗೆ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್​ಅನ್ನು ಪಡೆಯಲು ದೆಹಲಿ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿಯ ಮೇಲೆ ಮನವಿ ಮಾಡುತ್ತಿದೆ. ದೆಹಲಿಯ ಹಲವು ಆಸ್ಪತ್ರೆಗಳು ಆಕ್ಸಿಜನ್ ಒದಗಿಸುವಂತೆ ಸರ್ಕಾರಕ್ಕೆ ನಿರ್ದೇಶನ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿವೆ. ಇದೀಗ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್ ಎಲ್ಲಾ ರಾಜ್ಯಗಳಿಗೂ ಪತ್ರ ಬರೆದು ದೇಶದ ರಾಜಧಾನಿಯ ಜನರಿಗೆ ಆಕ್ಸಿಜನ್ ಒದಗಿಸಲು ಸಹಾಯ ಕೋರಿದ್ದಾರೆ.

ಇಷ್ಟೆಲ್ಲದರ ನಡುವೆ ದೆಹಲಿ ಸರ್ಕಾರ ದೆಹಲಿಯಲ್ಲಿ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಏಕೆ ಸ್ಥಾಪಿಸಿಲ್ಲ ಎಂಬ ಪ್ರಶ್ನೆ ಮೂಡಿ ಬಂದಿದೆ. ಪಿಎಂ-ಕೇರ್ಸ್ ಫಂಡ್​ ಅಡಿಯಲ್ಲಿ ಕಳೆದ ವರ್ಷ 8 ಆಕ್ಸಿಜನ್ ಪ್ಲ್ಯಾಂಟ್​​ಗಳನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿದ್ದರೂ, ಆಕ್ಸಿಜನ್ ಪ್ಲ್ಯಾಂಟ್​​ಗಳನ್ನು ಸ್ಥಾಪಿಸಲು ದೆಹಲಿ ಸರ್ಕಾರ ವಿಫಲವಾಗಿದೆ. ಆದ್ದರಿಂದ ದೆಹಲಿಯ ಆಸ್ಪತ್ರೆಗಳಲ್ಲಿ ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಉಂಟಾಗುತ್ತಿರುವ ತೊಂದರೆಗೆ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಕಾರಣವಾಗಿದೆ ಎಂದು ಬಿಜೆಪಿ ಹೇಳಿದೆ.

"2020 ರ ಡಿಸೆಂಬರ್​ನಲ್ಲಿ ಕೇಂದ್ರ ಸರ್ಕಾರವು ದೆಹಲಿ ಸರ್ಕಾರಕ್ಕೆ 8 ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಹಣ ಮಂಜೂರು ಮಾಡಿತ್ತು. ಆದರೆ ಈವರೆಗೆ ಸರ್ಕಾರ ಒಂದು ಘಟಕವನ್ನಷ್ಟೇ ಆರಂಭಿಸಿದೆ. ದೆಹಲಿ ಸರ್ಕಾರಕ್ಕೆ ಕೆಲಸ ಮಾಡುವ ಉದ್ದೇಶ ಇಲ್ಲದಿರುವುದರಿಂದ ದೆಹಲಿಯ ಜನರು ಇಂದು ನರಳಬೇಕಾಗುತ್ತಿದೆ" ಎಂದು ದೆಹಲಿ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಸರ್ಕಾರದ ಮೇಲೆ ಕ್ರಿಮಿನಲ್ ನಿರ್ಲಕ್ಷ್ಯದ ಕೇಸು ದಾಖಲಿಸಬೇಕು. ನಗರದಲ್ಲಿ ಆಕ್ಸಿಜನ್ ಪ್ಲ್ಯಾಂಟ್​ಗಳನ್ನು ಸ್ಥಾಪಿಸದಿರುವುದಕ್ಕೆ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿದೆ. "ದೆಹಲಿಯಲ್ಲಿ ಉಂಟಾಗಿರುವ ಆಕ್ಸಿಜನ್ ಸಮಸ್ಯೆಗೆ ದೆಹಲಿ ಸರ್ಕಾರವೇ ಕಾರಣ. ದೆಹಲಿಯಲ್ಲಿ ಯಾಕೆ ಆಕ್ಸಿಜನ್ ಘಟಕವನ್ನು ಸ್ಥಾಪಿಸಿಲ್ಲ ಎಂದು ದೆಹಲಿ ಹೈಕೋರ್ಟ್​ ಕೂಡ ಸರ್ಕಾರವನ್ನು ಪ್ರಶ್ನಿಸಿತು. ಆದರೆ ಅದಕ್ಕೆ ಸರ್ಕಾರದ ಬಳಿ ಯಾವುದೇ ಉತ್ತರ ಇರಲಿಲ್ಲ" ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ನಾಯಕ ಹಾಗೂ ಅಸ್ಸಾಂ ಆರೋಗ್ಯ ಸಚಿವರಾದ ಹಿಮಂತ ಬಿಸ್ವ ಸರ್ಮ ಅವರು, "ಕರೊನಾ ಸಮಸ್ಯೆ ಎದುರಾದ ಮೇಲೆ ಅಸ್ಸಾಂ 8 ಆಕ್ಸಿಜನ್ ಘಟಕಗಳನ್ನು ಸ್ಥಾಪಿಸಿದ್ದು, ಇನ್ನೂ ಐದು ಘಟಕಗಳ ಕೆಲಸ ನಡೆಯುತ್ತಿದೆ. ಪ್ರಧಾನಿ ಮೋದಿ ಅವರು ದೆಹಲಿಗೆ 8 ಘಟಕಗಳಿಗಾಗಿ ಡಿಸೆಂಬರ್ 2020 ರಲ್ಲೇ ಹಣ ನೀಡಿದ್ದಾರೆ. ಆದರೆ ಎಂಟರಲ್ಲಿ ಒಂದೇ ಘಟಕವನ್ನು ಸ್ಥಾಪಿಸಲಾಗಿದೆ. ನಿಮ್ಮ ಸರ್ಕಾರ ವಿಫಲವಾಗಿರುವಾಗ ಮೋದಿ ಅವರನ್ನು ಏಕೆ ದೂಷಿಸುತ್ತೀರಾ ?" ಎಂದು ಕೇಜ್ರಿವಾಲ್​ರನ್ನು ಪ್ರಶ್ನಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net