

ಬೆಂಗಳೂರು: ಕೋವಿಡ್ ಸೋಂಕಿನ ಪ್ರಕರಣಗಳು ಏರುಗತಿ ಕಾಣುತ್ತಿರುವುದರಿಂದ ಇನ್ಫೋಸಿಸ್ ಕಂಪೆನಿ ಎಕ್ಸ್ಕ್ಲೂಸಿವ್ಲಿ ತನ್ನ ಉದ್ಯೋಗಿಗಳಿಗೆ ಹಾಗೂ ಅವರ ಕುಟುಂಬದವರಿಗೆ ಬೆಂಗಳೂರಿನಲ್ಲಿ ಕೋವಿಡ್ ಕೇರ್ ಸೆಂಟರ್ (ಸಿಸಿಸಿ) ಆರಂಭಿಸಿದೆ.
ಈ ಕೋವಿಡ್ ಕೇರ್ ಸೆಂಟರ್ ಮಣಿಪಾಲ್ ಆಸ್ಪತ್ರೆಯ ಸಹಯೋಗದಲ್ಲಿ ಕೆಲಸ ಮಾಡಲಿದ್ದು, ಸುಮಾರು 500 ಬೆಡ್ಗಳುಳ್ಳ ತಾತ್ಕಾಲಿಕ ಆಸ್ಪತ್ರೆ ಹಳೇ ವಿಮಾನ ನಿಲ್ದಾಣ ರಸ್ತೆಯ ಹೋಟೆಲ್ ರಾಯಲ್ ಆರ್ಕೆಡ್ ಬಳಿ ತಲೆ ಎತ್ತಿದೆ. ಶನಿವಾರದಿಂದಲೇ ಇದು ಕಾರ್ಯಾರಂಭ ಮಾಡಿದೆ.
ಕೋವಿಡ್ ಸೋಂಕಿಗೆ ಒಳಗಾದವರಿಗೆ ಆರೈಕೆ ಮಾಡಲು ಹಾಗೂ ಚಿಕಿತ್ಸೆ ನೀಡಲು ಈ ಕೋವಿಡ್ ಕೇರ್ ಸೆಂಟರ್ ಬಳಸಲಾಗುವುದು. ಮಣಿಪಾಲ್ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಇದು ಕೆಲಸ ಮಾಡಲಿದೆ ಎಂದು ಇನ್ಫೋಸಿಸ್ ಪ್ರಕಟಣೆ ತಿಳಿಸಿದೆ. ಸಣ್ಣಪುಟ್ಟ ಲಕ್ಷಣಗಳು ಕಂಡು ಬಂದವರು ಮನೆಯಲ್ಲಿ ಐಸೋಲೆಷನ್ ಮಾಡಿಕೊಳ್ಳಲು ಆಗದವರು ಇಲ್ಲಿ ದಾಖಲಾಗಬಹುದು. ದಾಖಲಾತಿ ಹಾಗೂ ಬಿಡುಗಡೆ ಸಂಪೂರ್ಣ ಮಣಿಪಾಲ್ ಆಸ್ಪತ್ರೆ ನೀಡುವ ವರದಿಯನ್ನು ಆಧರಿಸಿ ಇರುತ್ತದೆ. ದಾಖಲಾಗುವ ರೋಗಿಗಳಿಗೆ ಊಟ, ವಸತಿ ಹಾಗೂ ವೈದ್ಯರ ಸಲಹೆ ವೆಚ್ಚವನ್ನು ಕಂಪೆನಿ ಭರಿಸುತ್ತದೆ. ಉಳಿದಂತೆ ವೈದ್ಯಕೀಯ ತಪಾಸಣೆ ಹಾಗೂ ಔಷಧಿಯ ವೆಚ್ಚವನ್ನು ದಾಖಲಾಗುವ ರೋಗಿಯ ಕಡೆಯಿಂದ ಭರಿಸಿಕೊಳ್ಳಲಾಗುವುದು. ವೆಂಟಿಲೇಟರ್ ಅವಶ್ಯಕತೆ ಬಿದ್ದರೆ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುವುದು ಎಂದು ತಿಳಿಸಿದೆ.
ಇನ್ನು ಕೋವಿಡ್ ಹಿನ್ನೆಲೆಯಲ್ಲಿ ಶೇ 75 ರಷ್ಟು ಸಿಬ್ಬಂದಿ ಈಗಾಗಲೇ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ನಿಯಮಾವಳಿಗಳನ್ನು ಪಾಲಿಸುವಂತೆ ಪ್ರತಿಯೊಬ್ಬರಿಗೂ ಮನವಿ ಮಾಡಿದ್ದೇವೆ ಎಂದು ಕಂಪನಿಯ ಮುಖ್ಯ ಆಪರೇಟಿಂಗ್ ಅಧಿಕಾರಿ ಪ್ರವೀಣಕುಮಾರ್ ತಿಳಿಸಿದ್ದಾರೆ.