ಸರ್ಕಾರದಿಂದ ಆಕ್ಸಿಜನ್​ ಪೂರೈಕೆಯಲ್ಲಿ ವಿಳಂಬ; ಒಂದೇ ಆಸ್ಪತ್ರೆಯಲ್ಲಿ 25 ರೋಗಿಗಳ ಸಾವು

oxygen
Published on

ನವದೆಹಲಿ: ಸರ್ಕಾರದಿಂದ ಆಕ್ಸಿಜನ್​ ಪೂರೈಕೆಯಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಒಂದೇ ಆಸ್ಪತ್ರೆಯ 25 ಕರೊನಾ ಸೋಂಕಿತರು ಆಕ್ಸಿಜನ್​ ಕೊರತೆಯಿಂದಾಗಿ ಸಾವನ್ನಪ್ಪಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ. ಸಂಜೆಯೇ ಬರಬೇಕಾಗಿದ್ದ ಆಕ್ಸಿಜನ್​ ರಾತ್ರಿ ಬಂದ ಕಾರಣದಿಂದಾಗಿ ಜೀವಗಳನ್ನು ಕಳೆದುಕೊಳ್ಳಬೇಕಾಯಿತು ಎಂದು ಆಸ್ಪತ್ರೆ ತಿಳಿಸಿದೆ.

ದೆಹಲಿಯ ಜೈಪುರ ಗೋಲ್ಡನ್ ಆಸ್ಪತ್ರೆಯಲ್ಲಿ ಇಂತಹ ಘಟನೆ ನಡೆದಿದೆ. ಆಸ್ಪತ್ರೆಯಲ್ಲಿ ಆಕ್ಸಿಜನ್​ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಸರ್ಕಾರವು 3.5 ಮೆಟ್ರಿಕ್​ ಟನ್​ ಆಕ್ಸಿಜನ್​ನನ್ನು ಶುಕ್ರವಾರ ಸಂಜೆ 5 ಗಂಟೆಯೊಳಗೆ ಕಳುಹಿಸಿಕೊಡುವುದಾಗಿ ಹೇಳಿತ್ತು. ಆದರೆ ಅದು ರಾತ್ರಿ ಆಸ್ಪತ್ರೆಗೆ ಬಂದು ತಲುಪಿದೆ. ಈ ವಿಳಂಬದಿಂದ ಆಸ್ಪತ್ರೆಯಲ್ಲಿ ಆಕ್ಸಿಜನ್​ ಅವಶ್ಯಕತೆ ಇದ್ದ 25 ಸೋಂಕಿತರು ಸಾವನ್ನಪ್ಪಿದ್ದಾರೆ.

ಜೈಪುರ ಗೋಲ್ಡನ್​ ಆಸ್ಪತ್ರೆಯಲ್ಲಿ 215 ಸೋಂಕಿತರ ಸ್ಥಿತಿ ಗಂಭೀರವಾಗಿದೆ. ಅವರೆಲ್ಲರಿಗೂ ಆಕ್ಸಿಜನ್​ ಅವಶ್ಯಕತೆ ಇದೆ. ಇನ್ನು ಕೆಲ ಗಂಟೆಗಳಲ್ಲಿ ಆಸ್ಪತ್ರೆಯ ಪರಿಸ್ಥಿತಿ ಚಿಂತಾಜನಕವಾಗಲಿದೆ ಎಂದು ಆಸ್ಪತ್ರೆಯ ಮೆಡಿಕಲ್​ ಡೈರೆಕ್ಟರ್​ ಡಾ.ಡಿಕೆ ಬಾಲುಜ ತಿಳಿಸಿದ್ದಾರೆ.

ಇದೀಗ ಈ ಆಸ್ಪತ್ರೆಯು ಆಕ್ಸಿಜನ್​ ಪೂರೈಸುವಂತೆ ಮನವಿ ಮಾಡಿ ದೆಹಲಿ ಹೈ ಕೋರ್ಟ್​ಗೆ ಅರ್ಜಿ ಸಲ್ಲಿಸಿದೆ. ಶನಿವಾರದಂದು ಆಕ್ಸಿಜನ್​ ಕೋರಿ ದೆಹಲಿ ಹೈ ಕೋರ್ಟ್​ಗೆ ಅರ್ಜಿ ಸಲ್ಲಿಸಿದ ಎರಡನೇ ಆಸ್ಪತ್ರೆ ಇದಾಗಿದೆ. ಮಂಗಳವಾರ ಬೆಳಗ್ಗೆಯೇ ಮೂಲ್​ಚಾಂದ್​ ಆಸ್ಪತ್ರೆ ಆಕ್ಸಿಜನ್​ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net