More

  ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಗೆ ಕಳಪೆ ಫಲಿತಾಂಶ: ಬಿಇಒ, ಮುಖ್ಯಶಿಕ್ಷಕರು, ಬಿಆರ್‌ಸಿಗಳಿಗೆ ಡಿಸಿ ಸ್ಪೆಷಲ್ ಕ್ಲಾಸ್

  ಮಂಡ್ಯ: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ 2ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ 19ನೇ ಸ್ಥಾನಕ್ಕೆ ಕುಸಿತ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ನೇತೃತ್ವದಲ್ಲಿ ಮಹತ್ವದ ಸಭೆ ಆಯೋಜಿಸಲಾಗಿತ್ತು. ಅದರಂತೆ ಶಿಕ್ಷಕರ ಜವಾಬ್ದಾರಿಯ ಬಗ್ಗೆ ವಿಸ್ತೃತವಾಗಿ ತಿಳಿ ಹೇಳಿದ ಹಿರಿಯ ಅಧಿಕಾರಿಗಳು, ಮುಖ್ಯಶಿಕ್ಷಕರಿಗೆ ಹೊಸ ಟಾಸ್ಕ್ ನೀಡಿದ್ದು ‘ಮತ್ತೆ ಫೇಲ್ ಆದರೆ ಶಿಸ್ತು ಕ್ರಮ’ದ ಎಚ್ಚರಿಕೆ ನೀಡಲಾಯಿತು.
  ನಗರದ ಜಿಪಂ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ ಸಭೆಯಲ್ಲಿ ಬರೋಬರಿ ಎರಡೂವರೆ ಗಂಟೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದ ಬಗ್ಗೆ ಚರ್ಚೆ ನಡೆಸಲಾಯಿತು. ಇದಕ್ಕಾಗಿ ಪೂರ್ವಸಿದ್ಧತೆ ಮಾಡಿಕೊಂಡು ಬಂದಿದ್ದ ಡಿಸಿ, ಸಿಇಒ ಅವರು ಡಿಡಿಪಿಐ, ಬಿಇಒ, ಬಿಆರ್‌ಸಿ, ಬಿಆರ್‌ಪಿ, ಡಯಟ್ ಉಪನ್ಯಾಸಕರು ಹಾಗೂ ಕಳಪೆ ಫಲಿತಾಂಶ ಬಂದಿರುವ ಶಾಲೆಗಳ ಮುಖ್ಯಶಿಕ್ಷಕರಿಗೆ ಸರಿಯಾಗಿಯೇ ತರಾಟೆ ತೆಗೆದುಕೊಂಡರು.
  ಸಭೆಯ ಪ್ರಾರಂಭದಿಂದಲೇ ಚಾಟಿ ಬೀಸಿದ ಡಿಸಿ, ಬಿಆರ್‌ಸಿ ಮತ್ತು ಡಯಟ್ ಉಪನ್ಯಾಸಕರು, ಮುಖ್ಯಶಿಕ್ಷಕರಿಗೆ ಕಳಪೆ ಫಲಿತಾಂಶದಿಂದಾಗುವ ಅನಾಹುತದ ಬಗ್ಗೆ ಹೇಳಿದರು. ಸರ್ಕಾರ ಉತ್ತಮ ವೇತನ ಸೇರಿದಂತೆ ಸೌಲಭ್ಯ ಕೊಟ್ಟಿದೆ. ನಿಮ್ಮ ಮಕ್ಕಳು ಚೆನ್ನಾಗಿ ಓದಿಕೊಳ್ಳಲಿ. ಅದೇ ಸರ್ಕಾರಿ ಶಾಲೆಗೆ ಬರುವ ಮಕ್ಕಳು ಏನಾದರೆ ನಿಮಗೇನು?. ಶಿಕ್ಷಕ ವೃತ್ತಿಗೆ ತನ್ನದೇ ಆದ ಗೌರವವಿದೆ. ಸಮಾಜದಲ್ಲಿ ಸುಧಾರಣೆ ಮಾಡಲು ಸಾಧ್ಯವಾದರೆ ಅದು ಶಿಕ್ಷಕರಿಂದ ಮಾತ್ರ. ಆದರೆ ನಿಮಗ್ಯಾರಿಗೂ ಆ ರೀತಿ ಮನಸ್ಸಿಲ್ಲ. ಸರ್ಕಾರಿ ಹಾಗೂ ಮಕ್ಕಳಿಂದ ಜೀವನ ನಡೆಸುತ್ತಿದ್ದೀರಿ. ಅದಕ್ಕಾದರೂ ಆತ್ಮತೃಪ್ತಿಯಿಂದ ಕೆಲಸ ಮಾಡಿ. ನೀವ್ಯಾರೂ ಉಚಿತವಾಗಿ ಕೆಲಸ ಮಾಡುತ್ತಿಲ್ಲ. ಪ್ರತಿ ತಿಂಗಳ ವೇತನ ಬರುತ್ತದೆ. ಅದಕ್ಕೆ ತಕ್ಕಂತೆ ಸರಿಯಾಗಿ ಕೆಲಸ ಮಾಡಬೇಕು ಎಂದು ಟೀಕಾ ಪ್ರಹಾರ ನಡೆಸಿದರು.

  ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಗೆ ಕಳಪೆ ಫಲಿತಾಂಶ: ಬಿಇಒ, ಮುಖ್ಯಶಿಕ್ಷಕರು, ಬಿಆರ್‌ಸಿಗಳಿಗೆ ಡಿಸಿ ಸ್ಪೆಷಲ್ ಕ್ಲಾಸ್

  ಬಾಯಲ್ಲಿ ಮಾತ್ರ ನಮ್ಮ ಮಕ್ಕಳು ಎನ್ನುತ್ತೀರಿ. ಆದರೆ ಫಲಿತಾಂಶ ನೋಡಿದರೆ ನಿಮ್ಮ ಪ್ರೀತಿ ಎಷ್ಟಿದೆ ಎನ್ನುವುದು ಗೊತ್ತಾಗುತ್ತದೆ. ನಿಮಗೆ ಪ್ರೀತಿ ಬರುವುದು ಸಂಬಳ ಬರುವ ಸಮಯದಲ್ಲಿ ಮಾತ್ರ. ಫಲಿತಾಂಶ ಏನಾದರೆ ನಮಗೇನು?. ಸಂಬಳ ಬಂದರೆ ಸಾಕು ಎನ್ನುವ ಮನೋಭಾವ ಬದಲಾಯಿಸಿ. ಫಲಿತಾಂಶದಿಂದಾಗಿ ಜಿಲ್ಲೆಯಲ್ಲಿ ಎರಡು ಅಮೂಲ್ಯ ಜೀವಗಳು ಹೋಗಿವೆ. ಇದಕ್ಕೆ ಯಾರೂ ಹೊಣೆ. ಫಲಿತಾಂಶದಲ್ಲಿ ರಾಜ್ಯದಲ್ಲಿಯೇ ಉತ್ತಮ ಸ್ಥಾನ ಬರಬೇಕೆಂದು ನಾವು ಬಯಸಿಲ್ಲ. ಆದರೆ ಕನಿಷ್ಟ ಉತ್ತೀರ್ಣರಾಗುವಷ್ಟು ಶಿಕ್ಷಣ ಕೊಡದಿದ್ದರೆ ವೃತ್ತಿಯಲ್ಲಿದ್ದರೆ ಪ್ರಯೋಜನವಾದರೂ ಏನು?. ಕೇವಲ ಗುಂಪುಗಾರಿಕೆ ಮಾಡಿಕೊಂಡು, ಸಂಬಳ ಪಡೆದುಕೊಂಡು ನಿಮ್ಮ ಕುಟುಂಬದವರನ್ನು ನೋಡಿಕೊಂಡು ಹೋಗಬಹುದು. ನಿಮ್ಮನ್ನೇ ನಂಬಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿದವರ ಕಥೆ ಏನಾಗಬೇಕು. ಮಕ್ಕಳಲ್ಲಿ ಒಮ್ಮೆ ತಾನು ಫೇಲ್ ಎನ್ನುವ ನಕಾರಾತ್ಮಕ ಅಂಶ ಮನಸ್ಸಿಗೆ ಬಂದರೆ ಅದನ್ನು ಹೋಗಿಸುವುದು ಕಷ್ಟ. ಮಾತ್ರವಲ್ಲದೆ ಅವರ ಭವಿಷ್ಯವೇ ಹಾಳಾಗುತ್ತದೆ ಎನ್ನುವ ಪ್ರಜ್ಞೆ ಶಿಕ್ಷಕರಿಗೆ ಇರಬೇಕು. ಸೇವೆಯಲ್ಲಿ ನಿಷ್ಠೆ, ಪ್ರಾಮಾಣಿಕತೆ ಇರಬೇಕು. ಇಲ್ಲದಿದ್ದರೆ ಮುಂದೆ ಇದರ ಫಲವನ್ನು ನೀವು ಅನುಭವಿಸಬೇಕಾಗುತ್ತದೆ. ಜತೆಗೆ ಪಾಪ ಪ್ರಜ್ಞೆಯೂ ನಿಮ್ಮನ್ನು ಕಾಡಲಿದೆ ಎಂದು ಎಚ್ಚರಿಕೆ ನೀಡಿದರು.
  ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಡಿಡಿಪಿಐ ಶಿವರಾಮೇಗೌಡ, ಡಯಟ್ ಪ್ರಾಂಶುಪಾಲ ವಿ.ಸಿ.ಬಸವರಾಜೇಗೌಡ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts