

ವಿಜಯಪುರ: ಸಿಂದಗಿ ಶಾಸಕರಾಗಿದ್ದ ಎಂ.ಸಿ. ಮನಗೂಳಿ ಅವರ ಅಂತ್ಯಕ್ರಿಯೆ ವೇಳೆ ಕೈಚಳಕ ತೋರಿಸಿದ ದುಷ್ಕರ್ಮಿಗಳು ಸಾವಿರಾರು ನಗದು, ಮೊಬೈಲ್ ಹಾಗೂ ಬೈಕ್ ಕಳ್ಳತನ ಮಾಡಿದ್ದಾರೆ.
ಜೆಡಿಎಸ್ ಹಿರಿಯ ಶಾಸಕ ಎಂ.ಸಿ. ಮನಗೂಳಿ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ನಿಧನರಾದರು. ಶುಕ್ರವಾರ ಸಿಂದಗಿಯ ಎಂ.ಸಿ. ಮನಗೂಳಿ ಕಾಲೇಜು ಆವರಣದಲ್ಲಿ ಅಂತಿಮ ದರ್ಶನಕ್ಕೆ ಜನಸಾಗರ ಹರಿದು ಬಂದಿತ್ತು. ಗಣ್ಯಾತಿ ಗಣ್ಯರೂ ಮನಗೂಳಿಯ ಅಂತಿಮ ದರ್ಶನ ಪಡೆದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಬಿಸಿಲು ಲೆಕ್ಕಿಸದೇ ಸಾವಿರಾರು ಜನ ಮೈದಾನದಲ್ಲಿ ಜಮಾಯಿಸಿದ್ದರು. ಇದನ್ನೂ ಓದಿರಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹಿಸುತ್ತಿದ್ದವರ ಮೇಲೆ ಕಲ್ಲು ತೂರಾಟ: ಪೊಲೀಸ್ ಬಂದೋಬಸ್ತ್
ಮನಗೂಳಿ ಅಂತ್ಯಕ್ರಿಯೆ ವೇಳೆ ಸೇರಿದ್ದ ಜನಸ್ತೋಮದಲ್ಲಿ ಸೇರಿಕೊಂಡ ಕಳ್ಳರ ಗುಂಪು, ತಮ್ಮ ಕೈಚಳಕ ತೋರಿಸಿ ಸಾರ್ವಜನಿಕರ ಜೇಬಲ್ಲಿದ್ದ ಹಣ, ಮೊಬೈಲ್ ಹಾಗೂ ಬೈಕ್ ಕಳ್ಳತನ ಮಾಡಿ ಪರಾರಿಯಾಗಿದೆ. ಈ ವೇಳೆ ಓರ್ವ ಕಳ್ಳನ್ನು ಹಿಡಿದ ಸ್ಥಳೀಯರು ಸಿಂದಗಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆಲಮೇಲ ಪಟ್ಟಣದ ಮೂವರು ನಿವಾಸಿಗಳ ಜೇಬು ಕತ್ತಿರಿಸಿದ ಕಳ್ಳರು ಹಣ ದೋಚಿ ಎಸ್ಕೇಪ್ ಆಗಿದ್ದಾರೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.