ಬಂಟ್ವಾಳ: ಬಡಗಬೆಳ್ಳೂರು ಗ್ರಾಮದ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ 2004ರ ನ.7ರಂದು ನಡೆದ ಕಳ್ಳತನ ಪ್ರಕರಣದ ಆರೋಪಿ ಸುಮಾರು 20 ವರ್ಷಗಳಿಂದ ತಲೆಮರೆಸಿಕೊಂಡು ಕರ್ನಾಟಕದ ಕೇರಳದ ಹಲವಾರು ಜಾಗಗಳಲ್ಲಿ ವಿಳಾಸ ಬದಲಾಯಿಸಿಕೊಂಡು ತಲೆಮರೆಸಿಕೊಂಡಿದ್ದ ಪಾಣಾಜೆ ಗ್ರಾಮದ ಪುತ್ತೂರು ನಿವಾಸಿ ಮೊಹಮ್ಮದ್ ಶರೀಫ್(44) ಎಂಬಾತನನ್ನು ನ.6ರಂದು ಕಾಸರಗೋಡಿನಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿ ಇತ್ತೀಚೆಗೆ ಕೊಲೆ ಪ್ರಕರಣವೊಂದರಲ್ಲಿ ಕೇರಳದ ಮಂಜೇಶ್ವರ ಠಾಣಾ ಪೊಲೀಸರಿಂದ ಬಂಧನಕ್ಕೆ ಒಳಗಾಗಿ ಬಳಿಕ ಜಾಮೀನಿನಲ್ಲಿ ಬಿಡುಗಡೆಯಾಗಿದ್ದ. ಬಂಟ್ವಾಳ ಪೊಲೀಸ್ ಉಪಾಧೀಕ್ಷಕ ವಿಜಯಪ್ರಸಾದ್ ಮಾರ್ಗದರ್ಶನದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್ ನಿರೀಕ್ಷಕ ಶಿವಕುಮಾರ್ ನೇತೃತ್ವದಲ್ಲಿ ಪಿಎಸ್‌ಐ ಹರೀಶ್ ಎಂ.ಆರ್., ಮೂರ್ತಿ ಹಾಗೂ ಸಿಬ್ಬಂದಿ ಹರಿಶ್ಚಂದ್ರ ಮತ್ತು ಗಣೇಶ ಇವರು ಆರೋಪಿಯ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.