

ನ್ಯೂಯಾರ್ಕ್: ಜಗತ್ತಿನಲ್ಲೇ ಅತ್ಯಂತ ನಿಗೂಢ ಹಾಗೂ ವಿಚಿತ್ರವಾದ ಪುಸ್ತಕ ಬಗ್ಗೆ ನೀವು ತಿಳಿಯಲೇ ಬೇಕು. ಈ ನಿಗೂಢ ಪುಸ್ತಕವನ್ನು 1912ರಲ್ಲಿ ದಿ ವ್ಯೋನಿಕ್ ಎಂಬ ಇಟಾಲಿಯನ್ ಪುಸ್ತಕ ವ್ಯಾಪಾರಿ ಎಲ್ಲಿಂದಲೋ ಖರೀದಿಸಿದ್ದ. ಆದ್ದರಿಂದ ಈ ಪುಸ್ತಕಕ್ಕೆ 'ವ್ಯೋನಿಕ್ ಹಸ್ತಪ್ರತಿ' ಎಂದೇ ಕರೆಯಲಾಗುತ್ತದೆ. ಅಸಲಿಗೆ ಈ ಪುಸ್ತಕದ ನಿಜವಾದ ಹೆಸರು ಮಾತ್ರ ಇಂದಿಗೂ ನಿಗೂಢವಾಗಿಯೇ ಉಳಿದಿದೆ.
ಈ ಪುಸ್ತಕದ ರಹಸ್ಯವನ್ನು ಭೇದಿಸಲು 19ನೇ ಶತಮಾನದ ತಜ್ಞರು ಸಾಕಷ್ಟು ಪ್ರಯತ್ನಗಳನ್ನು ಮಾಡಿದಾದರೂ ಅದನ್ನು ಅರ್ಥೈಸುವಲ್ಲಿ ಸಂಪೂರ್ಣ ವಿಫಲರಾದರು. ಈ ಪುಸ್ತಕವನ್ನು ಕೈಯಿಂದ ಬರೆಯಲಾಗಿದೆ. ಆದರೆ, ಯಾವ ಭಾಷೆಯಲ್ಲಿ ಬರೆಯಲಾಗಿದೆ? ಏನು ಬರೆಯಲಾಗಿದೆ? ಎಂಬುದು ಈವರೆಗೂ ಯಾರಿಗು ಅರ್ಥವಾಗಿಲ್ಲ. ಇತ್ತಿಚಿಗೆ ಕಾರ್ಬನ್ ಡೇಟಿಂಗ್ ತಂತ್ರಜ್ಞಾನವನ್ನು ಬಳಸಿ 15 ಅಥವಾ 16ನೇ ಶತಮಾನದಲ್ಲಿ ಬರೆದಿರಬಹುದು ಎಂದು ಅಂದಾಜಿಸಲಾಗಿದೆ.
ಇಂತಹ ನಿಗೂಢ ಪುಸ್ತಕದಲ್ಲಿ ಸಾಕಷ್ಟು ಪುಟಗಳಿದ್ದವು, ಕಾಲಾನಂತರದಲ್ಲಿ ಅದರ ಹಲವು ಪುಟಗಳು ಹಾಳಾದವು. ಪ್ರಸ್ತುತ 240 ಪುಟಗಳು ಮಾತ್ರ ಉಳಿದಿವೆ. ಇದರಲ್ಲಿ ಮನುಷ್ಯರಿಂದ ಹಿಡಿದು ಸಸ್ಯಗಳವರೆಗೆ ಅನೇಕ ಚಿತ್ರಗಳನ್ನು ಬಿಡಿಸಲಾಗಿದೆ. ಇಲ್ಲಿ ಬಿಡಿಸಲಾದ ಗಿಡ-ಮರಗಳ ಚಿತ್ರಗಳಲ್ಲಿ ಕೆಲವು ಈ ಭೂಮಿ ಮೇಲಿರುವ ಯಾವುದೇ ಗಿಡ ಮರಗಳನ್ನು ಸ್ವಲ್ಪವೂ ಹೋಲುವುದಿಲ್ಲ. ಹೀಗಾಗಿ ಇದನ್ನು ಅನ್ಯಗ್ರಹ ಜೀವಿಗಳು ಬರೆದಿರಬುಹುದು ಎನ್ನುವುದು ಕೆಲವರ ವಾದವಾಗಿದೆ.
ಆದರೆ, ಈ ಪುಸ್ತಕದಲ್ಲಿರುವ ವಿಷಯಗಳನ್ನು ಸಾಮಾನ್ಯ ಜನರಿಂದ ಮರೆಮಾಚುವ ರೀತಿಯಲ್ಲಿ ಬರೆಯಲಾಗಿದೆ. ವ್ಯೋನಿಕ್, ಹಸ್ತಪ್ರತಿಯನ್ನು 6 ವಿಭಿನ್ನ ಭಾಗಗಳಾಗಿ ವಿಂಗಡಿಸಿದ್ದಾನೆ ಮತ್ತು ಪ್ರತಿ ಭಾಗವು ಒಂದೊಂದು ವಿಷಯವನ್ನು ವಿವರಿಸುತ್ತದೆ.
ಮೊದಲ ಭಾಗವು ಖಗೋಳಶಾಸ್ತ್ರಕ್ಕೆ ಸಂಬಂಧಿಸಿದೆ ಮತ್ತು ಎರಡನೇ ಭಾಗವು ಜೀವಶಾಸ್ತ್ರಕ್ಕೆ ಸಂಬಂಧಿಸಿದೆ. ಮೂರನೆಯ ಭಾಗವು ವಿಶ್ವವಿಜ್ಞಾನಕ್ಕೆ ಸಂಬಂಧಿಸಿದರೆ, ನಾಲ್ಕನೆಯ ಭಾಗವು ಮರಗಳು ಮತ್ತು ಸಸ್ಯಗಳಿಗೆ ಸಂಬಂಧಿಸಿದೆ. ಐದನೇ ಭಾಗವು ಗಿಡಮೂಲಿಕೆಗಳಿಗೆ ಸಂಬಂಧಿಸಿದೆ ಮತ್ತು ಆರನೇ ಭಾಗವು ಬಹುಶಃ ಪಾಕಪದ್ಧತಿಗೆ ಸಂಬಂಧಿಸಿದೆ ಎಂದು ಊಹಿಸಲಾಗಿದೆ. ಆದರೆ ಇದಕ್ಕೆ ಯಾವುದೇ ದೃಢವಾದ ಪುರಾವೆಗಳು ಇನ್ನೂ ಬಹಿರಂಗಗೊಂಡಿಲ್ಲ.
ಇದನ್ನು ಓದಲು ಹೋದ ವ್ಯೂನಿಕ್ ತನ್ನ ಜೀವನದ ಅರ್ಧಾಂಶವನ್ನು ಇದರ ಅಧ್ಯಯನದಲ್ಲೆ ಕಳೆದನು. ಆತನ ಮರಣದ ನಂತರ ಅವನ ಹೆಂಡತಿಯು ಸಹ ಪುಸ್ತಕವನ್ನು ಡಿಕೋಡ್ ಮಾಡಲಾಗದೆ ಸಾಯಬೇಕಾಯಿತು. ಇಂದಿಗೂ ಈ ಪುಸ್ತಕ ಅಮೆರಿಕದ ಗ್ರಂಥಾಲಯದಲ್ಲಿ ಸಂರಕ್ಷಿಸಿ ಇಡಲಾಗಿದ್ದು, ಇದರ ಮೇಲಿನ ಸಂಶೋಧನೆ ಮುಂದುವರಿದೇ ಇದೆ. ಆದರೆ, ಇಂದಿಗೂ ಸಹ ಈ ಪುಸ್ತಕವನ್ನು ಡಿಕೋಡ್ ಮಾಡಲು ಸಾಧ್ಯವಾಗಿಲ್ಲ. (ಏಜೆನ್ಸೀಸ್)