

Supreme Court: ಯಾವುದೇ ಸಕಾರಣವಿಲ್ಲದೇ ಹೈಕೋರ್ಟ್ ನ್ಯಾಯಾಧೀಶರನ್ನು ಟೀಕಿಸುವ ಪ್ರವೃತ್ತಿ ವಕೀಲರಲ್ಲಿ ಹೆಚ್ಚುತ್ತಿದೆ. ಸಂವಿಧಾನದ ಅಡಿಯಲ್ಲಿ ಹೈಕೋರ್ಟ್ ಅಥವಾ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಸುಪ್ರೀಂ ಕೋರ್ಟ್ನ ನ್ಯಾಯಾಧೀಶರಿಗಿಂತ ಯಾವುದೇ ರೀತಿಯಲ್ಲಿ ಕೆಳಮಟ್ಟದಲ್ಲಿಲ್ಲ ಎಂದು ಸುಪ್ರೀಂಕೋರ್ಟ್ ಮಂಗಳವಾರ(ಆಗಸ್ಟ್ 12) ಹೇಳಿತು.
ನ್ಯಾಯಾಂಗ ನಿಂದನೆಯ ಸುಮೋಟೋ ಪ್ರಕರಣದ ವಿಚಾರಣೆ ನಡೆಸಿದ ಸಿಜೆಐ ಬಿ.ಆರ್.ಗವಾಯಿ, ನ್ಯಾ.ಕೆ.ವಿನೋದ್ ಚಂದ್ರನ್ ಹಾಗೂ ನ್ಯಾ. ಅತುಲ್.ಎಸ್.ಚಂದೂರ್ಕರ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ತೆಲಂಗಾಣ ಹೈಕೋರ್ಟ್ ನ್ಯಾಯಾಧೀಶರಿಗೆ ಬೇಷರತ್ತಾಗಿ ಕ್ಷಮೆಯಾಚಿಸಲು, ದೂರುದಾರ ಮತ್ತು ವಕೀಲರಿಗೆ ನಿರ್ದೇಶನ ನೀಡಿತು.
ರಾಜಕೀಯ ವ್ಯಕ್ತಿಯೊಬ್ಬರು ಪ್ರಕರಣದಲ್ಲಿ ಭಾಗಿಯಾಗಿರುವಾಗ ಅರ್ಜಿದಾರರಿಗೆ ನ್ಯಾಯ ಸಿಕ್ಕಿಲ್ಲ ಎಂದು ಭಾವಿಸಿ ವಿಚಾರಣೆಯನ್ನು ವರ್ಗಾವಣೆ ಕೋರುವುದು ಒಂದು ಪ್ರವೃತ್ತಿಯಾಗುತ್ತಿದೆ. ಹೈಕೋರ್ಟ್ನ ನ್ಯಾಯಾಧೀಶರು ಸಹ ಸುಪ್ರೀಂ ಕೋರ್ಟ್ ನ್ಯಾಯಾಧೀಶರಂತೆಯೇ ವಿನಾಯಿತಿ ಪಡೆಯುತ್ತಾರೆ ಎಂದು ಪೀಠ ತಿಳಿಸಿತು.
ದೂರುದಾರರನ್ನು ತರಾಟೆಗೆ ತೆಗದುಕೊಂಡ ಸಿಜೆಐ, ಹೈಕೋರ್ಟ್ ನ್ಯಾಯಾಧೀಶರ ವಿರುದ್ಧದ ಆರೋಪಗಳು ತಿರಸ್ಕಾರಾರ್ಹವಾಗಿದ್ದು, ಅವುಗಳನ್ನು ಕ್ಷಮಿಸಲು ಸಾಧ್ಯವಿಲ್ಲ. ನ್ಯಾಯಾಧೀಶರನ್ನು ಪೆಟ್ಟಿಗೆಯಲ್ಲಿ ಹಾಕಲು, ಇಲ್ಲ ದೂರುದಾರರು ನ್ಯಾಯಾಧೀಶರ ವಿರುದ್ಧ ಆರೋಪಗಳನ್ನು ಮಾಡಲು ಅನುಮತಿಸಲು ಸಾಧ್ಯವಿಲ್ಲ ಎಂದು ಕೇಸ್ ವರ್ಗಾವಣೆ ಕೋರಿದ್ದ ಅರ್ಜಿಯನ್ನು ವಜಾಗೊಳಿಸಿದರು.
ಪ್ರಕರಣದ ಹಿನ್ನೆಲೆ ಏನು?
ತೆಲಂಗಾಣ ಸಿಎಂ ರೇವಂತ್ ರೆಡ್ಡಿ ವಿರುದ್ಧ ಎಸ್ಸಿ, ಎಸ್ಟಿ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣವೊಂದು ದಾಖಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ್ದ ಹೈಕೋರ್ಟ್ ನ್ಯಾಯಾಧೀಶರೊಬ್ಬರು ಪ್ರಕರಣವನ್ನು ರದ್ದುಗೊಳಿಸಿದ್ದರು. ಪ್ರಕರಣದಲ್ಲಿ ನ್ಯಾಯ ಸಿಗದ ಹಿನ್ನೆಲೆ ದೂರುದಾರ ಎನ್.ಪೆದ್ದಿರಾಜು ಎಂಬುವರು ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ಪಕ್ಷಪಾತ ಮತ್ತು ಅನುಚಿತ ವರ್ತನೆ ಆರೋಪ ಮಾಡಿ ಪ್ರಕರಣದ ವಿಚಾರಣೆಯನ್ನು ಬೇರೊಂದು ಪೀಠಕ್ಕೆ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದರು. (ಏಜೆನ್ಸೀಸ್)