ಜಮ್ಮು-ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ; ಮಧ್ಯ ಕಾಶ್ಮೀರದ ಹಲವೆಡೆ ಎಸ್​ಐಎ ದಾಳಿ, ಶೋಧ|SIA Raid

SIA Raid
Published on

SIA Raid: ಜಮ್ಮು-ಕಾಶ್ಮೀರದಲ್ಲಿ 35 ವರ್ಷಗಳ ಹಿಂದೆ ನಡೆದ ಕಾಶ್ಮೀರಿ ಪಂಡಿತ ಮಹಿಳೆಯೊಬ್ಬರ ಹತ್ಯೆಯ ತನಿಖೆಗೆ ಸಂಬಂಧಿಸಿ ಮಂಗಳವಾರ(ಆಗಸ್ಟ್ 12) ಮಧ್ಯ ಕಾಶ್ಮೀರದ ಹಲವಾರು ಸ್ಥಳಗಳಲ್ಲಿ ರಾಜ್ಯ ತನಿಖಾ ಸಂಸ್ಥೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.

ಪಂಡಿತ ಕುಟುಂಬದ ಸರಳ ಭಟ್ ಎಂಬ ಮಹಿಳೆ ಹತ್ಯೆಗೆ ಸಂಬಂಧಿಸಿದಂತೆ ನಿಷೇಧಿತ ಜಮ್ಮು-ಕಾಶ್ಮೀರ ಲಿಬರೇಷನ್ ಫ್ರಂಟ್ (ಜೆಕೆಎಲ್​ಎಫ್​)ನೊಂದಿಗೆ ಈ ಹಿಂದೆ ಸಂಪರ್ಕ ಹೊಂದಿದ ವ್ಯಕ್ತಿಗಳ ನಿವಾಸಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

1990 ಏಪ್ರಿಲ್​ನಲ್ಲಿ ಸೌರಾದಲ್ಲಿರುವ ಶೇರ್-ಎ-ಕಾಶ್ಮೀರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಹಾಸ್ಟೆಲ್​ನಿಂದ ನಾಪತ್ತೆಯಾಗಿದ್ದ ಸರಳ ಭಟ್, ಬಳಿಕ ಶ್ರೀನಗರದಲ್ಲಿರುವ ಡೌನ್​ ಟೌನ್​ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಇತ್ತೀಚೆಗೆ ಪ್ರಕರಣದ ತನಿಖೆಯನ್ನು ವಹಿಸಿಕೊಂಡಿರುವ ಏಜೆನ್ಸಿಯ ಅಧಿಕಾರಿಗಳು, ಜೆಕೆಎಲ್‌ಎಫ್‌ನ ಮಾಜಿ ನಾಯಕ ಪೀರ್ ನೂರುಲ್ ಹಕ್ ಶಾ ಅಲಿಯಾಸ್ ಏರ್ ಮಾರ್ಷಲ್ ಅವರ ಮನೆಗಳ ಮೇಲೂ ದಾಳಿ ನಡೆಸಿದ್ದಾರೆ.

ಮೈಸುಮಾದಲ್ಲಿರುವ ಜೆಕೆಎಲ್‌ಎಫ್​​ನ ಮಾಜಿ ಮುಖ್ಯಸ್ಥ ಯಾಸಿನ್ ಮಲಿಕ್ ಅವರ ಮನೆ ಮೇಲೂ ದಾಳಿ ನಡೆದಿದ್ದು, ಡೆಪ್ಯೂಟಿ ಎಸ್‌ಪಿ ಅಬಿದ್ ಹುಸೇನ್, ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮತ್ತು ಇತರ ಪೊಲೀಸರು ಆಗಮಿಸಿದ್ದಾರೆ. ಪ್ರಕರಣದ ಸಂಬಂಧ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ಯಾಸಿನ್ ಮಲಿಕ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾನೆ. ಯಾಸಿನ್ ಅವರ ಮಗ ಗುಲಾಮ್ ಖಾದಿರ್ ಮಲಿಕ್ ಕೂಡ ತಿಹಾರ್ ಜೈಲಿನಲ್ಲಿದ್ದಾನೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net