ಶಾರೂಖ್​ ಅಷ್ಟೊಂದು ಹಣ ಹೇಗೆ ಸಂಪಾದಿಸ್ತಾರೆ ಗೊತ್ತಾ?

Shahrukh Khan - Final
Published on

ಬಾಲಿವುಡ್ ಬಾದ್‌ಷಾ ಶಾರೂಖ್ ಖಾನ್ ಬಗ್ಗೆ ಜನರಲ್ಲಿ ಒಂದು ಕುತೂಹಲ ಮತ್ತು ಪ್ರಶ್ನೆ ಯಾವತ್ತೂ ಇದ್ದೇ ಇದೆ. ಶಾರೂಖ್ ಖಾನ್ ನಟಿಸುವ ಚಿತ್ರಗಳ ಸಂಖ್ಯೆ ಬಹಳ ಕಡಿಮೆ. ವರ್ಷಕ್ಕೆ ಒಂದು ಚಿತ್ರದಲ್ಲಿ ನಟಿಸಿದರೆ ಹೆಚ್ಚು. ಕಳೆದ ಎರಡು ವರ್ಷಗಳಿಂದ ಅವರ ಒಂದು ಚಿತ್ರ ಸಹ ಬಿಡುಗಡೆಯಾಗಿಲ್ಲ. ಹೀಗಿರುವಾಗ, ಅವರು ಬಾಲಿವುಡ್‌ನ ಅತ್ಯಂತ ಶ್ರೀಮಂತ ನಟರಲ್ಲಿ ಅವರೂ ಒಬ್ಬರು. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಸಹಜ.

ಇದಕ್ಕೆ ಉತ್ತರವೇನೆಂದರೆ, ಶಾರೂಖ್ ಯಾವತ್ತೂ ಚಿತ್ರರಂಗವನ್ನೇ ನಂಬಿಕೊಂಡಿಲ್ಲ. ಅವರು ಬೇರೆಬೇರೆ ವ್ಯವಹಾರಗಳಲ್ಲಿ ಸಾಕಷ್ಟು ತೊಡಗಿಸಿಕೊಂಡಿದ್ದಾರೆ ಮತ್ತು ಅದರಿಂದ ಅವರಿಗೆ ನಿರಂತರವಾಗಿ ಹಣ ಹರಿದುಬರುತ್ತಿರುತ್ತದೆ. ಹಾಗಾಗಿ ಶಾರೂಖ್ ಖಾನ್ ಚಿತ್ರ ಮಾಡುವುದು ಕಡಿಮೆಯಾದರೂ, ಅದರಿಂದ ಅವರಿಗೆ ಹಣ ಯಾವತ್ತೂ ಕಡಿಮೆಯಾಗಿಲ್ಲ.

ಶಾರೂಖ್ ಖಾನ್ ನಟನೆಯ ಜತೆಗೆ, ರೆಡ್ ಚಿಲ್ಲೀಸ್ ಎಂಬ ನಿರ್ಮಾಣ ಸಂಸ್ಥೆಯ ಒಡೆಯರೂ ಹೌದು. ಕಳೆದ ಹಲವು ವರ್ಷಗಳಿಂದ ರೆಡ್ ಚಿಲ್ಲೀಸ್ ಮೂಲಕ ಶಾರೂಖ್ ಹಲವು ಸಿನಿಮಾಗಳನ್ನು ನಿರ್ಮಿಸಿರುವುದಷ್ಟೇ ಅಲ್ಲ, ಅದರಿಂದ ಸಾಕಷ್ಟು ಹಣವನ್ನೂ ಮಾಡಿದ್ದಾರೆ. ಅಷ್ಟೇ ಅಲ್ಲ, ನಿರ್ಮಾಣದ ಜತೆಗೆ ಗ್ರಾಫಿಕ್ಸ್ ಕೆಲಸಗಳನ್ನು ಅವರ ಸಂಸ್ಥೆ ಮಾಡಿಕೊಡುತ್ತದೆ. ಅವರ ಚಿತ್ರಗಳಲ್ಲದೆ, ಬೇರೆ ಚಿತ್ರಗಳ ಗ್ರಾಫಿಕ್ಸ್ ಮತ್ತು ವಿಷ್ಯುಯಲ್ ಎೆಕ್ಟ್ ಕೆಲಸಗಳನ್ನು ಮಾಡಿಕೊಡುವ ರೆಡ್ ಚಿಲ್ಲೀಸ್‌ನ ವಾರ್ಷಿಕ ಟರ್ನ್‌ಓವರ್ 500 ಕೋಟಿ ಎಂದು ಹೇಳಲಾಗುತ್ತದೆ.

ಇನ್ನು ಕ್ರಿಕೆಟ್ ಬಗ್ಗೆ ವಿಶೇಷ ಒಲವಿರುವ ಶಾರೂಖ್, ಐಪಿಎಲ್‌ನಲ್ಲಿ ಗುರುತಿಸಿಕೊಂಡಿರುವುದು ಗೊತ್ತೇ ಇದೆ. ಕೊಲ್ಕತ್ತಾ ನೈಟ್ ರೈಡರ್ಸ್‌ನಲ್ಲಿ ಶೇ 55ರಷ್ಟು ಹೂಡಿಕೆ ಮಾಡಿರುವ ರೆಡ್ ಚಿಲ್ಲೀಸ್, ಅದರಿಂದಲೂ ಸಾಕಷ್ಟು ಹಣ ಮಾಡುತ್ತಾರಂತೆ. ಇದರ ಜತೆಗೆ ಒಂದಲ್ಲಾ ಒಂದು ಜಾಹೀರಾತುಗಳಲ್ಲಿ ಶಾರೂಖ್ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಬೈಜೂಸ್, ಬಿಗ್ ಬಾಸ್ಕೆಟ್, ಡಿಶ್ ಟಿವಿ ... ಹೀಗೆ ಹಲವು ಜಾಹೀರಾತುಗಳಲ್ಲಿ ಶಾರೂಖ್ ಖಾನ್ ಕಾಣಿಸಿಕೊಂಡಿದ್ದು, ಕೆಲವು ಕಂಪೆನಿಗಳಲ್ಲೂ ಅವರು ಪಾರ್ಟ್‌ನರ್ ಆಗಿದ್ದಾರಂತೆ. ಇನ್ನು ಪಾಲುದಾರರಲ್ಲದ ಕೆಲವು ಸಂಸ್ಥೆಗಳ ಜಾಹೀರಾತಿನಲ್ಲೂ ಶಾರೂಖ್ ಖಾನ್ ಕಾಣಿಸಿಕೊಂಡಿದ್ದು, ದಿನವೊಂದಕ್ಕೆ ಮೂರೂವರೆ ಕೋಟಿ ಸಂಭಾವನೆ ಪಡೆಯುತ್ತಾರೆ ಎಂಬ ಮಾತಿದೆ.

ಇದೆಲ್ಲಕ್ಕಿಂತ ಮಜವೆಂದರೆ, ಶಾರೂಖ್ ಖಾನ್ ಮದುವೆಗಳಲ್ಲಿ ಡ್ಯಾನ್ಸ್ ಮಾಡಿ ದೊಡ್ಡ ಸಂಭಾವನೆ ಪಡೆಯುವುದು. ದೊಡ್ಡ ದೊಡ್ಡ ಮದುವೆಗಳಲ್ಲಿ ಬಾಲಿವುಡ್‌ನ ಕಲಾವಿದರು ಕಾಣಿಸಿಕೊಳ್ಳುವುದು ಮತ್ತು ಅಲ್ಲಿ ಕುಣಿಯುವುದು ಇದ್ದೇ ಇದೆ. ಈ ಪೈಕಿ ಶಾರೂಖ್ ಅತೀ ಹೆಚ್ಚು ಮದುವೆಗಳಲ್ಲಿ ಸಂಭಾವನೆ ಪಡೆದು ಡ್ಯಾನ್ಸ್ ಮಾಡಿದ್ದಾರೆ ಎಂದು ಹೇಳಲಾಗುತ್ತದೆ. ಹಾಗೆ ಕುಣಿಯುವುದಕ್ಕೆ ಅವರು ಪಡೆಯುವ ಸಂಭಾವನೆ ಎಷ್ಟು ಗೊತ್ತಾ? ನಾಲ್ಕರಿಂದ ಎಂಟು ಕೋಟಿ ರೂಪಾಯಿಗಳು. ಬೇರೆ ಕಲಾವಿದರೆಲ್ಲಾ ಮದುವೆಗಳಲ್ಲಿ ಡ್ಯಾನ್ಸ್ ಮಾಡಿದರೆ ತಮ್ಮ ಇಮೇಜ್ ಹಾಳಾಗುತ್ತದೆ ಎಂದು ಹೆದರಿದರೆ, ಶಾರೂಖ್ ಮಾತ್ರ ಯಾವುದೇ ಹಿಂಜರಿಕೆಯಿಲ್ಲದೆ ನೃತ್ಯ ಮಾಡುತ್ತಾರಂತೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಕೆಲವರು ಬೇಡ ಎಂದು ದೂರ ಇಟ್ಟಿದ್ದನ್ನು ನಾನು ಮಾಡುವುದಕ್ಕೆ ಮುಂದಾಗುತ್ತೇನೆ. ಉದಾಹರಣೆಗೆ, ಮದುವೆಗಳಲ್ಲಿ ಡ್ಯಾನ್ಸ್ ಮಾಡುವುದು ಅಥವಾ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದು. ಅದರಿಂದ ಸಾಕಷ್ಟು ಹಣ ಬರುತ್ತದೆ ಮತ್ತು ಅವೆಲ್ಲವನ್ನೂ ನಾನು ನನ್ನ ಸಂಸ್ಥೆಗೇ ಹಾಕುತ್ತೇನೆ’ ಎಂದು ಅವರು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net