ಕರ್ಣಂ ಮಲ್ಲೇಶ್ವರಿ ಪಾತ್ರದಲ್ಲಿ ನಟಿಸಲ್ವಂತೆ ನಿತ್ಯಾ ಮೆನನ್

nihar ameen_Web
Published on

ಹೈದರಾಬಾದ್: ಒಲಿಂಪಿಕ್ಸ್ ಇತಿಹಾಸದಲ್ಲಿ ಪದಕ ಜಯಿಸಿದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಕರ್ಣಂ ಮಲ್ಲೇಶ್ವರಿ. ಆಂಧ್ರದ ಈ ವೇಟ್‌ಲ್ಟಿರ್ 2000ದ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸುವ ಮೂಲಕ ಭಾರತದಲ್ಲಿ ಮನೆಮಾತಾಗಿದ್ದರು. ಇಂಥ ಶ್ರೇಷ್ಠ ಕ್ರೀಡಾಪಟುವಿನ ಬಯೋಪಿಕ್ ಈಗ ಬಹುಭಾಷೆಯಲ್ಲಿ ಸೆಟ್ಟೇರಲು ಸಜ್ಜಾಗಿದೆ. ಆದರೆ, ಈ ಸಿನಿಮಾದಲ್ಲಿ ಕರ್ಣಂ ಮಲ್ಲೇಶ್ವರಿ ಪಾತ್ರದಲ್ಲಿ ನಟಿಸಲು ನಿತ್ಯಾ ಮೆನನ್ ನಿರಾಕರಿಸಿದ್ದಾರೆ.

ಸೋಮವಾರ ಕರ್ಣಂ ಮಲ್ಲೇಶ್ವರಿ ಅವರಿಗೆ 45ನೇ ಜನ್ಮದಿನ. ಇದೇ ವೇಳೆ ಅವರ ಬಯೋಪಿಕ್‌ನ ಪ್ಯಾನ್-ಇಂಡಿಯಾ ಯೋಜನೆಯನ್ನು ಬಹಿರಂಗಪಡಿಸಿದ್ದು, ಸಿನಿಮಾದ ಫಸ್ಟ್ ಲುಕ್ ಕೂಡ ಬಿಡುಗಡೆಗೊಂಡಿದೆ. ಸಿನಿಮಾದಲ್ಲಿ ಕರ್ಣಂ ಮಲ್ಲೇಶ್ವರಿ ಪಾತ್ರದಲ್ಲಿ ನಟಿಸುವ ಆರ್ ಅನ್ನು ಮೊದಲಿಗೆ ನಿತ್ಯಾ ಮೆನನ್ ಅವರಿಗೆ ನೀಡಲಾಗಿತ್ತಂತೆ. ಆದರೆ ಅವರು ಈ ಪಾತ್ರವನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ.

ನಿತ್ಯಾ ಮೆನನ್ ಯಾಕೆ ಈ ಪಾತ್ರವನ್ನು ನಿರಾಕರಿಸಿದ್ದಾರೆ ಎಂಬುದು ತಿಳಿದುಬಂದಿಲ್ಲ. ಸಿನಿಮಾ ನಿರ್ಮಾಪಕರು ಫಸ್ಟ್ ಲುಕ್‌ನಲ್ಲಿ ನಿತ್ಯಾ ಅವರನ್ನೇ ತರಲು ಪ್ರಯತ್ನಿಸಿದ್ದರಂತೆ. ಆದರೆ ಅವರು ನಿರಾಕರಿಸಿದ್ದರಿಂದ ಸಿನಿಮಾ ತಂಡ ಕರ್ಣಂ ಮಲ್ಲೇಶ್ವರಿ ಪಾತ್ರಕ್ಕೆ ಬೇರೊಬ್ಬ ನಟಿಯ ಹುಡುಕಾಟದಲ್ಲಿದೆ. ಇದರ ನಡುವೆ ಬಿಡುಗಡೆ ಮಾಡಲಾಗಿರುವ ಸಿನಿಮಾದ ಫಸ್ಟ್ ಲುಕ್‌ನಲ್ಲಿ ವೇಟ್‌ಲಿಫ್ಟಿಂಗ್‌ಗೆ ಸಜ್ಜಾಗುತ್ತಿರುವ ಕೈಗಳನ್ನಷ್ಟೇ ತೋರಿಸಲಾಗಿದೆ. ಜತೆಗೆ, ‘ಇಡೀ ದೇಶವನ್ನೇ ಎತ್ತಿಹಿಡಿದ ಹುಡುಗಿಯ ಯಶೋಗಾಥೆ’ ಎಂದು ಬರೆಯಲಾಗಿದೆ.

ಮಲಯಾಳಂ ಸಿನಿಮಾ ಕ್ಷೇತ್ರ ಮೂಲದ ನಿತ್ಯಾ ಮೆನನ್ ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದು, ಮಿಷನ್ ಮಂಗಲ್ ಮೂಲಕ ಬಾಲಿವುಡ್‌ನಲ್ಲೂ ಸುದ್ದಿಮಾಡಿದ್ದಾರೆ. ಈ ನಡುವೆ ಬಾಲಿವುಡ್ ನಟಿ ಭೂಮಿ ಪಡ್ನೇಕರ್‌ಗೆ ಕರ್ಣಂ ಮಲ್ಲೇಶ್ವರಿ ಪಾತ್ರದ ಆರ್ ನೀಡುವ ಪ್ರಯತ್ನವೂ ನಡೆಯುತ್ತಿದೆ ಎನ್ನಲಾಗಿದೆ. ಸಿನಿಮಾಗೆ ಸಂಜನಾ ರೆಡ್ಡಿ ನಿರ್ದೇಶಕಿಯಾಗಿರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net