ನವಾಜುದ್ದೀನ್ ಸಿದ್ಧೀಕಿಗೆ ಎದುರಾಯ್ತು ಮತ್ತೊಂದು ಕಂಟಕ!

Nawazuddin Siddiqui - Final
Published on

ಬಾಲಿವುಡ್‌ನ ಜನಪ್ರಿಯ ನಟ ನವಾಜುದ್ದೀನ್ ಸಿದ್ಧೀಕಿ ಕೆಲವೇ ತಿಂಗಳುಗಳ ಹಿಂದೆ ತಮ್ಮ ಅಭಿನಯ ಮತ್ತು ಪಾತ್ರಪೋಷಣೆ ಬಗ್ಗೆ ಸಾಕಷ್ಟು ಜನಪ್ರಿಯರಾಗಿದ್ದರು. ಆದರೆ, ಈಗ ಬೇರೆಬೇರೆ ಕಾರಣಗಳಿಗೆ ನವಾಜುದ್ದೀನ್ ಪ್ರತಿ ದಿನ ಸುದ್ದಿಯಾಗುತ್ತಿದ್ದಾರೆ.

ಕರೊನಾ ನಡುವೆಯೂ ನವಾಜುದ್ದೀನ್ ಸಿದ್ಧೀಕಿ ಮತ್ತು ಅವರ ಪತ್ನಿ ಆಲಿಯಾ ಪಾಂಡೆ ಡೈವೋರ್ಸ್ ಪ್ರಕರಣವು ಸಾಕಷ್ಟು ಸುದ್ದಿ ಮಾಡಿದ್ದಷ್ಟೇ ಅಲ್ಲ, ದಿನದಿಂದ ದಿನಕ್ಕೆ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇದೆಲ್ಲದರ ನಡುವೆ ನವಾಜುದ್ದೀನ್‌ಗೆ ಇನ್ನೊಂದು ಸಂಕಷ್ಟ ಎದುರಾಗಿದೆ. ಅವರ ಸೋದರ ಸೊಸೆ, ನವಾಜುದ್ದೀನ್ ಸಹೋದರನ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದಾರೆ. ಅಷ್ಟೇ ಅಲ್ಲ, ಈ ವಿಷಯ ನವಾಜುದ್ದೀನ್‌ಗೆ ಗೊತ್ತಿದ್ದರೂ, ಅವರು ಸುಮ್ಮನಿದ್ದರು ಎಂದು ಹೇಳಿದ್ದಾರೆ.

ಹೌದು, ನವಾಜುದ್ದೀನ್ ಅವರ ಸೋದರ ಸೊಸೆಯೊಬ್ಬರು, ದೆಹಲಿಯ ಜಾಮಿಯ ಪೊಲೀಸ್ ಸ್ಟೇಷನ್‌ನಲ್ಲಿ ನವಾಜುದ್ದೀನ್ ಅವರ ಸಹೋದರ ಶಾಮಾಸ್ ನವಾಬ್ ಸಿದ್ಧೀಕಿ ಮೇಲೆ ದೂರು ಕೊಟ್ಟಿದ್ದಾರೆ. ‘ನಾನು ಒಂಬತ್ತು ವರ್ಷದವಳಿದ್ದಾಗ, ಶಾಮಾಸ್ ನನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಆ ಸಂದರ್ಭದಲ್ಲಿ ಅವರೇನು ಮಾಡುತ್ತಿದ್ದಾರೆ ಎಂದು ನನಗೆ ಗೊತ್ತಾಗುತ್ತಿರಲಿಲ್ಲ. ದೊಡ್ಡವಳಾದ ಮೇಲೆ, ನನಗೆ ಅರ್ಥವಾಯಿತು. ಅವರು ಎಷ್ಟೋ ಬಾರಿ ಹಿಂಸಿಸುತ್ತಿದ್ದರು ಕೂಡಾ’ ಎಂದು ಆಕೆ ತಮ್ಮ ದೂರಿನಲ್ಲಿ ಹೇಳಿಕೊಂಡಿದ್ದಾರೆ.

ಈ ವಿಷಯವನ್ನು ಒಮ್ಮೆ ಅವರು ನವಾಜುದ್ದೀನ್ ಜತೆಗೆ ಪ್ರಸ್ತಾಪ ಮಾಡಿದ್ದರಂತೆ. ಆದರೆ, ಏನು ಪ್ರಯೋಜವಾಗಲಿಲ್ಲವಂತೆ. ‘ಈ ವಿಷಯವನ್ನು ನಾನು ನವಾಜುದ್ದೀನ್ ಅವರಿಗೆ ಹೇಳಿಕೊಂಡಿದ್ದೆ. ಆದರೆ, ಅವರು ನನ್ನ ಬಾಯಿ ಮುಚ್ಚಿಸಿದರು. ‘ಅವರು ನಿನ್ನ ಚಿಕ್ಕಪ್ಪ. ಆ ರೀತಿ ಮಾಡುವುದಕ್ಕೆ ಸಾಧ್ಯವಿಲ್ಲ’ ಎಂದು ಹೇಳಿದ್ದರು’ ಎಂದು ತಮ್ಮ ದೂರಿನಲ್ಲಿ ಸೇರಿಸಿದ್ದಾರೆ.

ಅಷ್ಟೇ ಅಲ್ಲ, ನವಾಜುದ್ದೀನ್ ಮತ್ತು ಶಾಮಾಸ್ ಈಗಲೂ ತಮ್ಮ ಪತಿಯ ಕುಟುಂಬದವರಿಗೆ ಕಿರುಕುಳ ನೀಡುತ್ತಿರುತ್ತಾರೆ. ತಮ್ಮ ವಿರುದ್ಧ ಕಂಪ್ಲೇಂಟ್ ಕೊಟ್ಟು, ತೊಂದರೆ ಕೊಡುತ್ತಿರುತ್ತಾರೆ ಎಂದು ಸಹ ಆಕೆ ಹೇಳಿಕೊಂಡಿದ್ದಾರೆ. ಆದರೆ, ತಮ್ಮ ಪತಿ ತಮ್ಮ ಬೆನ್ನಿಗೆ ನಿಂತಿರುವುದರಿಂದ, ಇವೆಲ್ಲವನ್ನೂ ಸಹಿಸಿಕೊಳ್ಳುತ್ತಿರುವುದಾಗಿ ಅವರು ಹೇಳಿದ್ದಾರೆ. ಈ ದೂರಿನ ನಂತರವೂ, ನವಾಜುದ್ದೀನ್ ಮತ್ತು ಅವರ ಸಹೋದರ ತಮ್ಮ ಮೇಲೆ ಇನ್ನಷ್ಟು ಕಿರುಕುಳ ಕೊಡಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net