ಚೆನ್ನೈ: ಕಾಲಿವುಡ್ ಸೂಪರ್ಸ್ಟಾರ್ ಸೂರ್ಯ ನಟನೆಯ ಬಹುನಿರೀಕ್ಷಿತ ಸಿನಿಮಾ ಕಂಗುವಾ ( Kanguva ) ನ. 14 ರಂದು ವಿಶ್ವದಾದ್ಯಂತ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಪ್ರೀ ಬುಕ್ಕಿಂಗ್ ಆರಂಭವಾಗಿದ್ದು, ಟಿಕೆಟ್ಗಳು ಸೋಲ್ಡ್ ಆಗುತ್ತಿವೆ. ಬಿಡುಗಡೆಗೆ ಇನ್ನು ಎರಡು ದಿನ ಬಾಕಿ ಇರುವಾಗಲೇ ಚಿತ್ರತಂಡಕ್ಕೆ ಸಮಸ್ಯೆಯೊಂದು ಎದುರಾಗಿದೆ.
ಶಿವ ನಿರ್ದೇಶನದ ಕಂಗುವಾ ಚಿತ್ರವು ಭಾರಿ ಬಜೆಟ್‌ನಲ್ಲಿ ತಯಾರಾಗಿದೆ. ಚಿತ್ರತಂಡವು ತಮಿಳು ಮಾತ್ರವಲ್ಲದೆ, ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಕೆಲ ವಿದೇಶಿ ಭಾಷೆಗಳಲ್ಲಿಯೂ ಬಿಡುಗಡೆ ಮಾಡುತ್ತಿದೆ. ದೊಡ್ಡ ಚಿತ್ರವಾಗಿರುವ ಕಾರಣ ಕಳೆದ ಒಂದು ತಿಂಗಳಿಂದ ಚಿತ್ರತಂಡ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುತ್ತಿದೆ. ಈ ಮೂಲಕ ಕಂಗುವಾ ಸಿನಿಮಾವನ್ನು ಪ್ಯಾನ್ ಇಂಡಿಯಾ ಹಿಟ್ ಮಾಡಲು ಚಿತ್ರತಂಡ ಪ್ರಯತ್ನಿಸುತ್ತಿದೆ. ಬಿಡುಗಡೆಗೆ ಇನ್ನು ಎರಡು ದಿನ ಬಾಕಿ ಇರುವಾಗಲೇ ಚಿತ್ರತಂಡಕ್ಕೆ ಆಘಾತ ಎದುರಾಗಿದೆ.
ಹೌದು, ಸಿನಿಮಾ ಬಿಡುಗಡೆ ಮಾಡದಂತೆ ಮದ್ರಾಸ್ ಹೈಕೋರ್ಟ್ ಆದೇಶ ಹೊರಡಿಸಿದೆ. ಕಾರಣವೇನೆಂದರೆ, ಚೆನ್ನೈ ಮೂಲದ ಅರ್ಜುನ್ ಲಾಲ್ ಅವರಿಂದ ಸ್ಟುಡಿಯೋ ಗ್ರೀನ್ 20 ಕೋಟಿ ರೂ. ಸಾಲ ಪಡೆದಿದ್ದು, ಅದನ್ನು ನವೆಂಬರ್ 13ರ ಒಳಗೆ ಪಾವತಿ ಮಾಡದಿದ್ದರೆ ಸಿನಿಮಾ ಬಿಡುಗಡೆ ಮಾಡದಂತೆ ಆದೇಶಿಸಿದೆ.
ಉದ್ಯಮಿ ಅರ್ಜುನ್‌ಲಾಲ್ ಈಗ ಜೀವಂತವಾಗಿಲ್ಲ. ಹಣಕಾಸು, ರಿಯಲ್ ಎಸ್ಟೇಟ್ ಮತ್ತು ಇತರ ಕಂಪನಿಗಳಲ್ಲಿ ಹೂಡಿಕೆ ಮಾಡಲು ಆಮಿಷವೊಡ್ಡುವ ಮೂಲಕ ಹೂಡಿಕೆದಾರರಿಗೆ ಹಲವಾರು ಕೋಟಿ ಹಣ ವಂಚಿಸಿರುವ ಆರೋಪ ಅರ್ಜುನ್‌ಲಾಲ್ ಮೇಲಿದೆ. ಅರ್ಜುನ್‌ಲಾಲ್ ಕಂಪನಿ ಸದ್ಯ ದಿವಾಳಿಯಾಗಿದ್ದು, ಅವರ ಆಸ್ತಿಗಳು ಮದ್ರಾಸ್ ಹೈಕೋರ್ಟ್ ನಿಯಂತ್ರಣದಲ್ಲಿದೆ. ಹೀಗಾಗಿ ಸಾಲಗಾರರಿಂದ ವಸೂಲಿ ಮಾಡುವ ಕೆಲಸವನ್ನೂ ಕೋರ್ಟ್ ಮಾಡುತ್ತಿದೆ.
ಕಂಗುವಾ ನಿರ್ಮಾಣ ಸಂಸ್ಥೆ ಸ್ಟುಡಿಯೋ ಗ್ರೀನ್, ಅರ್ಜುನ್ ಲಾಲ್ರಿಂದ 20 ಕೋಟಿ ಸಾಲ ಪಡೆದಿತ್ತು. ಆದರೆ, ಸ್ಟುಡಿಯೋ ಗ್ರೀನ್ ಇನ್ನೂ 20 ಕೋಟಿ ರೂಪಾಯಿಯನ್ನು ಅರ್ಜುನ್ ಲಾಲ್ಗೆ ವಾಪಸ್ ನೀಡಿಲ್ಲ. ಈ ಹಿನ್ನೆಲೆಯಲ್ಲಿ ನವೆಂಬರ್ 13ರ ಒಳಗೆ ಹಣ ಪಾವತಿಸುವಂತೆ ಕೋರ್ಟ್ ಗಡುವು ನೀಡಿದೆ. ಇಲ್ಲವಾದಲ್ಲಿ ಸಿನಿಮಾ ಬಿಡುಗಡೆ ಮಾಡದಂತೆ ಆದೇಶ ಹೊರಡಿಸಿದೆ. ಹೀಗಾಗಿ ಸಿನಿಮಾ ತಂಡಕ್ಕೆ ಸಂಕಷ್ಟ ಎದುರಾಗಿದೆ.
ಹಲವು ಥಿಯೇಟರ್ಗಳಲ್ಲಿ ಈಗಾಗಲೇ ಟಿಕೆಟ್ ಬುಕ್ಕಿಂಗ್ ಆಗಿದೆ. ಅಲ್ಲದೆ, ಟಿಕೆಟ್ ಮಾರಾಟ ಜೋರಾಗಿ ನಡೆಯುತ್ತಿರುವಾಗಲೇ ಕಂಗುವಾ ಸಿನಿಮಾ ರಿಲೀಸ್ ಆಗುತ್ತಾ? ಎಂಬ ಪ್ರಶ್ನೆ ಎದ್ದಿದ್ದು, ಇದರಿಂದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಶಿವ ನಿರ್ದೇಶನದ ಮತ್ತು ಸೂರ್ಯ ನಟಿಸಿರುವ ಈ ಚಿತ್ರವು 350 ರಿಂದ 400 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ತಯಾರಾಗಿದೆ. ಬಾಬಿ ಡಿಯೋಲ್, ದಿಶಾ ಪಡೋನಿ, ಕೋವೈ ಸರಳಾ ಹಾಗೂ ವಿಟಿವಿ ಗಣೇಶ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್)
ಜಗ್ಗೇಶ್ ಬೈಯ್ಯೋರು ಇದನ್ನೊಮ್ಮೆ ನೋಡಿ… ಗುರುಪ್ರಸಾದ್ ಬಗ್ಗೆ ಧನಂಜಯ್ ಮಾತು, ವಿಡಿಯೋ ವೈರಲ್! Guruprasad