

student: ಇನ್ಸ್ಟಾಗ್ರಾಮ್ನಲ್ಲಿ ಕೀಟನಾಶಕ ಮಾತ್ರೆಗಳ ಛಾಯಾಚಿತ್ರ ಹಾಗೂ ಹತಾಶೆಯ ಶೀರ್ಷಿಕೆಯ ಸಂದೇಶವನ್ನು ಕಳುಹಿಸುವ ಮೂಲಕ 20 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ್ದು, ಆಕೆಯನ್ನು ಉತ್ತರ ಪ್ರದೇಶದ ಪೊಲೀಸರು ಮೆಟಾ ಅಲರ್ಟ್ ನಂತರ 16 ನಿಮಿಷಗಳಲ್ಲಿ ರಕ್ಷಿಸಿರುವ ಘಟನೆ ಬೆಳಕಿಗೆ ಬಂದಿದೆ.
ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ನಲ್ಲಿ ಆತ್ಮಹತ್ಯೆಗೆ ಸಂಬಂಧಿಸಿದ ಪೋಸ್ಟ್ಗಳ ಎಚ್ಚರಿಕೆ ಕುರಿತು ರಾಜ್ಯದಲ್ಲಿ ಜನವರಿ 2023 ರಿಂದ ಈವರೆಗೂ ಸುಮಾರು 1315 ಜನರನ್ನು ರಕ್ಷಿಸಲಾಗಿದೆ ಎಂದು ಉತ್ತರ ಪ್ರದೇಶದ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಪೊಲೀಸರ ಪ್ರಕಾರ, ಆಗಸ್ಟ್ 31 ರಂದು ಮಧ್ಯಾಹ್ನ 12:45 ರ ಸುಮಾರಿಗೆ ಮೆಟಾ ರಾಜ್ಯ ಪೊಲೀಸರ ಸಾಮಾಜಿಕ ಮಾಧ್ಯಮ ಕೇಂದ್ರಕ್ಕೆ ಇಮೇಲ್ ಎಚ್ಚರಿಕೆಯನ್ನು ಕಳುಹಿಸಿದಾಗ, ವಿದ್ಯಾರ್ಥಿಯೊಬ್ಬಳು ತನ್ನ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಕೀಟನಾಶಕಗಳ ಪ್ಯಾಕೇಟ್ಗಳನ್ನು ತೋರಿಸಿ ಆತ್ಮಹತ್ಯೆ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾಳೆ.
ಈ ಮಾಹಿತಿ ತಿಳಿದ ಕೂಡಲೇ, ಹಿರಿಯ ಅಧಿಕಾರಿಗಳು ಪೊಲೀಸ್ ಮಹಾನಿರ್ದೇಶಕ ರಾಜೀವ್ ಕೃಷ್ಣ ಅವರಿಗೆ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದರು. ಈ ವೇಳೆ ಎಚ್ಚರಿಕೆ ಬಂದ 16 ನಿಮಿಷಗಳಲ್ಲಿ ವಿಶೇಷ ಪೊಲೀಸ್ ತಂಡ ಯುವತಿ ಇರುವ ಜಾಗವನ್ನು ಪತ್ತೆ ಹಚ್ಚಿದ್ದು, ಅವರ ಮನೆಗೆ ಧಾವಿಸಿದ್ದಾರೆ. ಅಲ್ಲಿ ಯುವತಿ ವಾಂತಿ ಮಾಡಿಕೊಂಡು ಅಸಹಾಯಕ ಸ್ಥಿತಿಯಲ್ಲಿ ಇದ್ದುದನ್ನು ನೋಡಿದ ಪೊಲೀಸರು ಆಕೆಯನ್ನು ತಕ್ಷಣವೇ ಆಸ್ಪ್ರತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ.
ನಂತರ, ಆಕೆಯ ಈ ನಿರ್ಧಾರದ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದು, ಆಕೆ ಇನ್ ಸ್ಟಾಗ್ರಾಮ್ನಲ್ಲಿ ಒಬ್ಬ ಯುವಕನೊಂದಿಗೆ ಸ್ನೇಹ ಬೆಳೆಸಿಕೊಂಡು ಸಂಬಂಧ ಹೊಂದಿದ್ದಳು. ಇನ್ನು ಅವನೊಂದಿಗೆ ಜಗಳ ಮಾಡಿಕೊಂಡ ನಂತರ ಆತ ಈಕೆಯ ಸಂಖ್ಯೆಯನ್ನು ನಿರ್ಬಂಧಿಸಿದ್ದನು. ಆದರಿಂದ ಖಿನ್ನತೆಗೆ ಒಳಗಾಗಿ ಕೀಟನಾಶಕವನ್ನು ಸೇವಿಸಿದೆ ಎಂದು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾಳೆ. (ಏಜೆನ್ಸೀಸ್)