

protest : ಮರಾಠರಿಗೆ ಒಬಿಸಿ ಕೋಟಾದಡಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ಅನಿರ್ದಿಷ್ಟ ಉಪವಾಸ ನಡೆಸುತ್ತಿರುವ ಕಾರ್ಯಕರ್ತ ಮನೋಜ್ ಜರಂಗೇ ಪಾಟೀಲ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಈ ವಿಚಾರದ ಬಗ್ಗೆ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರ ತೀವ್ರ ಪ್ರಯತ್ನಗಳನ್ನು ಮಾಡುತ್ತಿದ್ದು, ಮುಂಬೈನಲ್ಲಿ ಸರಣಿ ಸಭೆಗಳನ್ನು ನಿಗದಿಪಡಿಸಲಾಗಿದೆ. ಇನ್ನು ಪ್ರತಿಭಟನೆಗೆ ಸಂಬಂಧಿಸಿದ ಅರ್ಜಿಗಳನ್ನು ಬಾಂಬೆ ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಆರ್ಥಿಕವಾಗಿ ದುರ್ಬಲ ವರ್ಗದ (ಇಡಬ್ಯೂಎಸ್) ಅಡಿಯಲ್ಲಿ ಶೇ. 10 ರಷ್ಟು ಮೀಸಲಾತಿಗೆ ಅರ್ಹವಾಗಿರುವ ಮರಾಠರನ್ನು ಒಬಿಸಿ ಕೋಟಾದಡಿಯಲ್ಲಿ ಸೇರಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಇನ್ನು ಮರಾಠರನ್ನು ಸೇರಿಸುವ ಮೂಲಕ ಅಸ್ತಿತ್ವದಲ್ಲಿರುವ ಶೇ. 27 ರ ಕೋಟಾವನ್ನು ದುರ್ಬಲಗೊಳಿಸಿದರೆ ಪ್ರತಿಭಟನೆ ನಡೆಸುವುದಾಗಿ ಒಬಿಸಿ ಗುಂಪುಗಳು ಎಚ್ಚರಿಕೆ ನೀಡಿರುವುದರಿಂದ ಮಹಾಯುತಿ ಸರ್ಕಾರವು ಸಂದಿಗ್ಧ ಪರಿಸ್ಥಿತಿಯಲ್ಲಿದೆ.
ಮರಾಠ ಮೀಸಲಾತಿ ಹೋರಾಟವನ್ನು ನಾಯಕ ಜರೇಂಗ ಪಾಟೀಲ್ ಆಗಸ್ಟ್ 29ರಿಂದ ಐತಿಹಾಸಿಕ ಅಜಾದ್ ಮೈದಾನದಲ್ಲಿ ಧರಣಿ ನಡೆಸುತ್ತಿದ್ದಾರೆ. ಎಲ್ಲಾ ಅರ್ಹ ಮರಾಠರು ಒಬಿಸಿ ಅಡಿಯಲ್ಲಿ ಮೀಸಲಾತಿ ಸೌಲಭ್ಯ ಪಡೆಯಲು ಸಾಧ್ಯವಾಗುವಂತೆ ಜಾತಿ ಪ್ರಮಾಣಪತ್ರವನ್ನು ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನ್ಯಾಯಾಲಯದ ಸೂಚನೆ ನಂತರ ಅನೇಕ ಪ್ರತಿಭಟನಾಕಾರರು ಸ್ಥಳದಿಂದ ಹೊರಹೋಗಲು ಪ್ರಾರಂಭಿಸಿದ್ದಾರೆ. ಇನ್ನು ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅಜಾದ್ ಮೈದಾನವನ್ನು ಖಾಲಿ ಮಾಡುವಂತೆ ಮುಂಬೈ ಪೊಲೀಸರು ನೋಟಿಸ್ ನೀಡಿದ್ದಾರೆ. (ಏಜೆನ್ಸೀಸ್)