ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಉಳ್ಳಾಲ ಉರುಸ್‌ನಲ್ಲಿ ಭಾಗವಹಿಸಲು ಹೊರರಾಜ್ಯಗಳಿಂದಲೂ ಜನರು ಬರುವುದರಿಂದ ಯಾರಿಗೂ ತೊಂದರೆಯಾಗಬಾರದು. ಮುಖ್ಯವಾಗಿ ದರ್ಗಾ ಸಂಪರ್ಕಿಸುವ ರಸ್ತೆ ಹೊಂಡ ಮುಕ್ತಗೊಂಡು ರಸ್ತೆ ವಿಸ್ತರಣೆ ಆಗಬೇಕು. ಬಾಕಿಯಿರುವ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಲೋಕೋಪಯೋಗಿ ಇಲಾಖೆಯ ಅಭಿಯಂತರಿಗೆ ಸ್ಪೀಕರ್ ಯು.ಟಿ.ಖಾದರ್ ಸೂಚಿಸಿದರು.
ಉಳ್ಳಾಲ ಜುಮಾ ಮಸೀದಿ (402) ಹಾಗೂ ಸಯ್ಯಿದ್ ಮದನಿ ದರ್ಗಾ ಸಮಿತಿ ಆಶ್ರಯದಲ್ಲಿ 22ನೇ ಪಂಚವಾರ್ಷಿಕ ಉರುಸ್ ಮತ್ತು 432ನೇ ವಾರ್ಷಿಕ ಸಮಾರಂಭ ಏ.24ರಿಂದ ಆರಂಭಗೊಳ್ಳಲಿದ್ದು, ಆ ಪ್ರಯುಕ್ತ ಗುರುವಾರ ದರ್ಗಾ ಸಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ಮಾತನಾಡಿದರು.
ಮುಖ್ಯಮಂತ್ರಿ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಈ ಹಿನ್ನೆಲೆ ನಗರ ವ್ಯಾಪ್ತಿ ಸ್ವಚ್ಛತೆ, ಕುಡಿಯುವ ನೀರು, ಚರಂಡಿ ಇನ್ನಿತರ ವ್ಯವಸ್ಥೆ ಬಗ್ಗೆ ನಿಗಾ ಇಡಬೇಕು. ಓವರ್ ಬ್ರಿಡ್ಜ್, ಮಾಸ್ತಿಕಟ್ಟೆ ಬಳಿ ಸ್ವಾಗತ ಕಮಾನು ಅಳವಡಿಸಬೇಕು. ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಶೌಚಗೃಹ, ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಮಾಡಬೇಕು. ಉರುಸ್ ಪಾವಿತ್ರೃತೆಗೆ ದಕ್ಕೆಯಾಗುವಂಥ ಆಟಗಳಿಗೆ ಪರವಾನಗಿ ನೀಡಬಾರದು. ಹೈಮಾಸ್ಟ್ ದೀಪ ಅಳವಡಿಸಬೇಕು. ಅಗತ್ಯ ಅನುದಾನಕ್ಕಾಗಿ ಕೊಟೇಶನ್ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
*ಆಂಬುಲೆನ್ಸ್ ಸೇವೆಗೆ ಸೂಚನೆ: ಏಪ್ರಿಲ್, ಮೇ ತಿಂಗಳಲ್ಲಿ ವಿದ್ಯುತ್ ಕಡಿತ ಆಗದಂತೆ ನೋಡಿಕೊಳ್ಳಬೇಕು. ವಿದ್ಯುತ್ ಅಲಂಕಾರಗಳಿಗೆ ಉಚಿತ ವಿದ್ಯುತ್ ಪೂರೈಕೆ ಬಗ್ಗೆ ಮೇಲಧಿಕಾರಿಗಳ ಜತೆ ಚರ್ಚಿಸಿ ವರದಿ ನೀಡುವಂತೆ ಮೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು. ಆರೋಗ್ಯ ಕೇಂದ್ರದಲ್ಲಿ 50 ಹಾಸಿಗೆ ಮೀಸಲಿಡುವ ಜತೆಗೆ ಆಂಬುಲೆನ್ಸ್ ಸೇವೆ, ದರ್ಗಾ ವಠಾರದಲ್ಲಿ ಕೀಟನಾಶಕ ಸಿಂಪಡಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ದರ್ಗಾ ಅಧ್ಯಕ್ಷ ಬಿ.ಜಿ.ಹನೀಫ್ ಅಧ್ಯಕ್ಷತೆ ವಹಿಸಿದ್ದರು. ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್, ಮೆಸ್ಕಾಂ ಅಭಿಯಂತ ದಯಾನಂದ, ದರ್ಗಾ ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ ವೇ, ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕೋಶಾಧಿಕಾರಿ ನಾಝಿಮ್ ಮುಕಚ್ಚೇರಿ, ಕಾರ್ಯದರ್ಶಿ ಮುಸ್ತಫಾ ಮದನಿನಗರ, ಇಸ್ಹಾಕ್ ಮೇಲಂಗಡಿ, ನಗರಸಭೆ ಪೌರಾಯುಕ್ತ ಮತ್ತಡಿ, ತಹಸೀಲ್ದಾರ್ ಪುಟ್ಟರಾಜು, ಸಂಚಾರ ವಿಭಾಗದ ಎಸಿಪಿ ನಜ್ಮ ಫಾರೂಕಿ, ನಗರಸಭೆ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷೆ ಸಪ್ನಾ ಉಪಸ್ಥಿತರಿದ್ದರು.
ಸುಗಮ ಸಂಚಾರಕ್ಕೆ ವ್ಯವಸ್ಥೆ
ಬೆಂಗಳೂರು, ಶಿವಮೊಗ್ಗ, ಮಂಗಳೂರು ಕಡೆಯಿಂದ ಉಳ್ಳಾಲಕ್ಕೆ ಸರ್ಕಾರಿ ಬಸ್ ಒದಗಿಸುವ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದ ಯು.ಟಿ.ಖಾದರ್, ಅಹಿತಕರ ಘಟನೆ ನಡೆಯದಂತೆ ಪೂರ್ಣ ಬಂದೋಬಸ್ತ್ ಒದಗಿಸುವ ಜತೆಗೆ ತೊಕ್ಕೊಟ್ಟು ಓವರ್ ಬ್ರಿಡ್ಜ್‌ನಲ್ಲಿ ಸಂಚಾರಿ ಪೊಲೀಸ್ ವ್ಯವಸ್ಥೆ ಮಾಡಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು. ಅಗತ್ಯ ಸ್ಥಳದಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಬೇಕು, ಪರವಾನಗಿ ಇಲ್ಲದೆ ಯಾವುದೇ ಸಂತೆಗೆ ಅವಕಾಶ ನೀಡದಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.