ವಿಜಯವಾಣಿ ಸುದ್ದಿಜಾಲ ಮೂಲ್ಕಿ
2025-26ನೇ ಸಾಲಿಗೆ ಮೂಲ್ಕಿ ನಗರ ಪಂಚಾಯಿತಿಯ ಸ್ವಂತ ಪ್ರಮುಖ ಆದಾಯಗಳಾದ ಆಸ್ತಿ ತೆರಿಗೆ, ನೀರಿನ ಶುಲ್ಕ ಪರವಾನಗಿ, ಶುಲ್ಕ ಅಂಗಡಿ ಬಾಡಿಗೆ ಮತ್ತು ಮಾರುಕಟ್ಟೆ ಮತ್ತು ಪಂಚಾಯಿತಿ ಇತರ ಮೂಲಗಳಿಂದ ಬರುವ ಆದಾಯನ್ನೊಳಗೊಂಡಂತೆ 2,24,35,000 ರೂ. ಇದ್ದು, ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ನಿರೀಕ್ಷಿಸಲಾಗಿದೆ ಎಂದು ಮೂಲ್ಕಿ ನಪಂ ಅಧ್ಯಕ್ಷ ಸತೀಶ್ ಅಂಚನ್ ಹೇಳಿದರು.
ಮೂಲ್ಕಿ ನಪಂ ಸಭಾಭವನದಲ್ಲಿ ಶುಕ್ರವಾರ ಸಭೆಯಲ್ಲಿ 2025-26ನೇ ಸಾಲಿನ ಆಯವ್ಯಯ ಹಾಗೂ ಬಜೆಟ್ ಮಂಡಿಸಿ ಮಾತನಾಡಿದರು.
ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಬೇಕಾದ ಯೋಜನೆ ಅನುದಾನಗಳಾದ ವೇತನ ಅನುದಾನ, ನೀರು ಸರಬರಾಜು, ವಿದ್ಯುತ್ ಅನುದಾನ ರಾಜಸ್ವ ವೆಚ್ಚಕ್ಕಾಗಿ ನಿರ್ದಿಷ್ಟ ಅನುದಾನ 2,79,85,000 ರೂ. ಆಗಿದ್ದು ಒಟ್ಟು ಕಂದಾಯ ನಿರೀಕ್ಷಿಸಲಾಗಿದೆ. ಹಾಗೆಯೇ ಅಭಿವೃದ್ಧಿ ಕಾರ್ಯಗಳಿಗಾಗಿ ಕೇಂದ್ರ ಸರ್ಕಾರದಿಂದ 15ನೇ ಹಣಕಾಸು ಯೋಜನೆ, ಸ್ವಚ್ಛ ಭಾರತ್ ನಲ್ಮ್ ಮತ್ತು ಇತರ ಸರ್ಕಾರದ ಯೋಜನೆ ಅಡಿ ಒಟ್ಟು 1,34,75,000 ರೂ.ಅನುದಾನ ಈ ಬಾರಿಯ ಆಯವ್ಯಯದಲ್ಲಿ ನಿರೀಕ್ಷಿಸಲಾಗಿದೆ. ಅನುದಾನಗಳು ಹಾಗೂ ನಪಂ ಸ್ವಂತ ಆದಾಯಗಳು ಸೇರಿ ಒಟ್ಟು 10,27,68,000 ರೂ. ಆಗಿದೆ ಎಂದು ಹೇಳಿದರು.
ಬಜೆಟ್ ಮಂಡನೆಗೆ ಉತ್ತರಿಸುತ್ತಾ ಸದಸ್ಯ ಮಂಜುನಾಥ್ ಕಂಬಾರ ಮಾತನಾಡಿ, ತಮ್ಮ ವಾರ್ಡಿನಲ್ಲಿ ಮಳೆಗಾಲದಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ಇದೆ. ಈ ಬಗ್ಗೆ ಅಧಿಕಾರಿಗಳು ಸ್ವಲ್ಪವೂ ಸ್ಪಂದಿಸುತ್ತಿಲ್ಲ ಎಂದು ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಾಧಿಕಾರಿ ಮಧುಕರ್ ಮಾತನಾಡಿ, ನಪಂ ವ್ಯಾಪ್ತಿಯಲ್ಲಿ ಅಕ್ರಮ ಕುಡಿಯುವ ನೀರಿನ ಕನೆಕ್ಷನ್ ಬಹಳ ಇದ್ದು ಈ ಬಗ್ಗೆ ಕಠಿಣ ಕ್ರಮ ತಳೆಯಲು ಅಥವಾ ಸಕ್ರಮಗೊಳಿಸಲು ನಗರವಾಸಿಗಳ ಹಾಗೂ ಪಂಚಾಯಿತಿ ಸದಸ್ಯರ ಸಹಕಾರ ಬೇಕು ಎಂದರು.
ಬಜೆಟ್ ಮಂಡನೆ ಚರ್ಚೆಯಲ್ಲಿ ಸದಸ್ಯರಾದ ಭೀಮಾಶಂಕರ್, ವಂದನಾ ಕಾಮತ್, ಬಾಲಚಂದ್ರ ಕಾಮತ್, ಸುಭಾಷ್ ಶೆಟ್ಟಿ ಮಾತನಾಡಿದರು.
ಅಭಿವೃದ್ಧಿಗೆ ಅನುದಾನ ಹಂಚಿಕೆ
ಈ ಬಾರಿಯ ಮುಂಗಡಪತ್ರದಲ್ಲಿ ಮೂಲಸೌಕರ್ಯಗಳಾದ ದಾರಿದೀಪ, ರಸ್ತೆ, ಕುಡಿಯುವ ನೀರು ಕಲ್ಪಿಸುವ ವ್ಯವಸ್ಥೆಗಾಗಿ 14,60,47,174 ರೂ. ಹಂಚಿಕೆ ಮಾಡಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪಂಚಾಯಿತಿಗೆ ಬಿಡುಗಡೆಯಾಗುವ ಅನುದಾನದ ಜತೆಗೆ ಪಂಚಾಯಿತಿ ನಿಧಿಯಲ್ಲಿ ಕಾದಿಸಿದ ಮೊತ್ತ ಸಂಪೂರ್ಣವಾಗಿ ಮೂಲಭೂತ ಅಭಿವೃದ್ಧಿ ಕಾರ್ಯಗಳಿಗೆ ಹಂಚಿಕೆ ಮಾಡಲಾಗಿದೆ. ಬೀದಿ ನಾಯಿ ಸಂತಾನ ಹರಣ ಚಿಕಿತ್ಸೆಗೆ, ಪೌರಕಾರ್ಮಿಕರ ಆರೋಗ್ಯ ಹಿತ ದೃಷ್ಟಿ, ಸ್ಲಮ್ ಅಭಿವೃದ್ಧಿ, ಹೊಸ ರಸ್ತೆ ನಿರ್ಮಾಣ, ಚರಂಡಿ ಅಭಿವೃದ್ಧಿಗೆ ಅನುದಾನದ ನಿರೀಕ್ಷೆ, ಸರ್ಕಾರದ ಮಾರ್ಗಸೂಚಿಯಂತೆ ನಗರ ಉದ್ಯಾನವನ ಹಾಗೂ ರುದ್ರಭೂಮಿಗಳ ನಿರ್ವಹಣೆಗೆ ಅನುದಾನ ಕಾದಿರಿಸಲಾಗಿದೆ ಎಂದು ಮೂಲ್ಕಿ ನಪಂ ಅಧ್ಯಕ್ಷರು ತಿಳಿಸಿದರು.