ಮಗಳನ್ನು ಕೊಂದು ಹೊಲದಲ್ಲಿ ಎಸೆದ ಅಪ್ಪ ಅಮ್ಮ! ಇಷ್ಟಕ್ಕೆಲ್ಲ ಕಾರಣ ಆ ಯುವಕ

daughter
Published on

ಮಿರ್ಜಾಪುರ: ಹೆತ್ತು ಹೊತ್ತು ಸಾಕಿದ್ದ ಮಗಳನ್ನು ಅಪ್ಪ ಅಮ್ಮನೇ ಕೊಲೆ ಮಾಡಿ, ಜಮೀನೊಂದರಲ್ಲಿ ಆಕೆಯ ಶವವನ್ನು ಎಸೆದಿರುವ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ. ಪ್ರಕರಣದ ಬೆನ್ನತ್ತಿ ಹೊರಟ ಪೊಲೀಸರಿಗೆ ಕೊಲೆಯ ನಿಜ ಆಶಯ ತಿಳಿದುಬಂದಿದೆ.

ಅಂಜಲಿ (17) ಹೆಸರಿನ ಯುವತಿ ಪಕ್ಕದ ಮನೆಯ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಿಚಾರ ಆಕೆಯ ಕುಟುಂಬಕ್ಕೆ ಗೊತ್ತಾಗಿದೆ. ಪ್ರೀತಿಯನ್ನು ಮರೆತುಬಿಡುವಂತೆ ಅವರು ಅವಳಿಗೆ ಎಚ್ಚರಿಸಿದ್ದಾರೆ. ಆದರೆ ಅವರ ಮಾತಿಗೆ ಬೆಲೆ ಕೊಡದ ಅಂಜಲಿ ಪ್ರೀತಿಯನ್ನು ಮುಂದುವರಿಸಿದ್ದಾಳೆ. ಮೂರ್ನಾಲ್ಕು ಬಾರಿ ಪ್ರಿಯತಮನೊಂದಿಗಿದ್ದಾಗ ಅಪ್ಪ ಅಮ್ಮನಿಗೆ ಸಿಕ್ಕಿ ಬಿದ್ದಿದ್ದಾಳೆ ಕೂಡ. ಇದನ್ನು ಒಪ್ಪದ ತಂದೆ ತಾಯಿ ಯುವಕನನ್ನೂ ಕರೆಸಿ ಎಚ್ಚರಿಕೆ ನೀಡಿದ್ದಾರೆ. ಆದರೆ ಯಾವ ಪ್ರಯೋಜನವೂ ಆಗಿಲ್ಲ.

ಜನವರಿ 2ರಂದು ಪ್ರಿಯತಮನೊಂದಿಗಿದ್ದ ಅಂಜಲಿ ರಾತ್ರಿ 2 ಗಂಟೆಗೆ ಮನೆಗೆ ಬಂದಿದ್ದಾಳೆ. ಅದರಿಂದಾಗಿ ಸಿಟ್ಟಿಗೆದ್ದ ಆಕೆಯ ಅಪ್ಪ ಅಮ್ಮ ಅವಳು ತೊಟ್ಟಿದ್ದ ದುಪ್ಪಟವನ್ನು ಕುತ್ತಿಗೆಗೆ ಸುತ್ತಿ ಎಳೆದಿದ್ದಾರೆ. ಉಸಿರುಗಟ್ಟಿ ಆಕೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ನಂತರ ಮನೆಗೆ ಬೀಗ ಹಾಕಿ ಹೊರಟಿದ್ದಾರೆ. ಜನವರಿ 4ರಂದು ಅಂಜಲಿಯ ದೇಹವನ್ನು ಮಿರ್ಜಾಪುರದ ಜಮಾಲ್‌ಪುರ ಪ್ರದೇಶದ ರಾಧೇಶ್ಯಂ ಹೆಸರಿನವರ ಜಮೀನಿನಲ್ಲಿ ಬಿಸಾಕಿದ್ದಾರೆ. ನಂತರ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಅನಾಥ ಶವವನ್ನು ಕಂಡ ರಾಧೇಶ್ಯಂ ಅವರು ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ. ತನಿಖೆ ಆರಂಭಿಸಿದ ಪೊಲೀಸಿರಿಗೆ ಅದು ಅಂಜಲಿಯ ಶವ ಎನ್ನುವುದು ಗೊತ್ತಾಗಿದೆ. ನಂತರ ಪ್ರಕರಣದ ಬೆನ್ನತ್ತಿ ಹೋದಾಗ ಆಕೆಯ ಅಪ್ಪ ಅಮ್ಮನೇ ಕೊಲೆ ಮಾಡಿರುವುದು ತಿಳಿದುಬಂದಿದೆ. ಇದೀಗ ಅವರಿಬ್ಬರನ್ನು ಬಂಧಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net