

| ಡಾ.ಕೆ.ಎಸ್. ಪವಿತ್ರ
‘‘ಡಾಕ್ಟ್ರೇ, ಅಮ್ಮನಿಗೆ 85 ವರ್ಷವಾಗಿತ್ತು ಜತೆಗೆ ಹಾರ್ಟ್ ತೊಂದರೆ ಇತ್ತು. ಆದರೂ ಬಹಳ ಚಟುವಟಿಕೆಯಿಂದ ಇದ್ರ್ರು. ತಿಂಗಳ ಹಿಂದೆ ಅವರು ಇದ್ದಕ್ಕಿದ್ದ ಹಾಗೆ ತೀರಿಕೊಂಡಾಗ ನಮಗ್ಯಾರಿಗೂ ಹೀಗಾಗಬಹುದು ಎಂಬ ಕಲ್ಪನೆಯೇ ಇಲ್ಲ. ನನಗೆ ಇದನ್ನು ಅರಗಿಸಿಕೊಳ್ಳೋಕೇ ಆಗ್ತಿಲ್ಲ. ವಯಸ್ಸಾದ ಮೇಲೆ ಎಲ್ಲರೂ ಒಂದಲ್ಲ ಒಂದು ದಿನ ಹೋಗಲೇಬೇಕು ಎಂಬ ಸತ್ಯ ನನಗೆ ಗೊತ್ತು. ನನಗೀಗ ದೊಡ್ಡ ಮಕ್ಕಳಿದ್ದಾರೆ, ಮೊಮ್ಮಕ್ಕಳಿದ್ದಾರೆ. ಆದರೂ ತಾಯಿಯಿಲ್ಲದ ಜೀವನ ನನಗೆ ಒಂದೊಂದ್ಸಲ ‘ಏಕಿರಬೇಕು?’ ಅನ್ನೋ ಹಂತಕ್ಕೂ ಹೋಗ್ಬಿಡುತ್ತೆ. ಯಾರಾದ್ರೂ ಅಮ್ಮನ ಬಗ್ಗೆ ಕೇಳಿದ್ರೆ ಕಣ್ಣಲ್ಲಿ ನೀರು ತುಂಬ್ಕೊಳುತ್ತೆ. ‘85 ವರ್ಷ ಆಗಿತ್ತು, ತುಂಬು ಜೀವನ ನಡೆಸಿದ್ರು ಅಂದ್ರೂನೂ ನೀನು ಇಷ್ಟು ಹಚ್ಚಿಕೊಂಡಿದ್ದೀಯಲ್ಲ’ ಅಂತ ಇವರೆಲ್ಲ ಹೇಳ್ತಾರೆ. ಏಕೆ ಹೀಗಾಗುತ್ತೆ? ತಾಯಿಯ ಸಾವಿನ ನೋವು ತಡೆದುಕೊಳ್ಳೋದು ಎಲ್ಲರಿಗೂ ಇಷ್ಟು ಕಷ್ಟವೇ? ಅಥವಾ ನನಗೆ ಮಾತ್ರ ಹೀಗಾಗುತ್ತದೆಯೇ?’’
ಈ ಮಹಿಳೆಗಾದ ನೋವು ಹಲವರಿಗೆ ಎದುರಾಗಿರಲು ಸಾಧ್ಯವಿದೆ. ಆತ್ಮೀಯರನ್ನು ಕಳೆದುಕೊಂಡಾಗ ಉಂಟಾಗುವ ಮಾನಸಿಕ ಸ್ಥಿತಿಯನ್ನು ವೈಜ್ಞಾನಿಕವಾಗಿ The process of grief ‘ಶೋಕ ಪ್ರಕ್ರಿಯೆ’ ಎಂದು ಗುರುತಿಸಲಾಗುತ್ತದೆ. ಆತ್ಮೀಯರಾದವರನ್ನು ಕಳೆದುಕೊಂಡಾಗಲೂ ಮನಸ್ಸು ‘ಶೋಕದ ಪ್ರಕ್ರಿಯೆ’ ಯನ್ನು ಹಂತಗಳಲ್ಲಿ ದಾಟಿಯೇ ಸಹಜತೆಗೆ ಮರಳಬೇಕು ಎನ್ನುತ್ತದೆ ಮನೋವಿಜ್ಞಾನ. ಶೋಕದ ತೀವ್ರತೆಯನ್ನು ನಿರ್ಧರಿಸುವ ಮುಖ್ಯ ಅಂಶಗಳಲ್ಲಿ ಒಂದು ಭಾವನಾತ್ಮಕವಾಗಿ ಗತಿಸಿದ ವ್ಯಕ್ತಿಯೊಂದಿಗೆ ನಮಗಿರುವ ಸಂಬಂಧದ ಆಳ. ಇದು ‘ಆಳ’ ಎಂದಾದಷ್ಟೂ, ಸಂಬಂಧ ಬಹಳ ಹತ್ತಿರದ್ದು ಎಂದಷ್ಟೂ, ಶೋಕದ ತೀವ್ರತೆ ಹೆಚ್ಚುತ್ತದೆ. ತಾಯಿಯನ್ನು ಕಳೆದುಕೊಳ್ಳುವ ಸಂದರ್ಭದ ‘ಶೋಕ’ ಏಕೆ ಬಲು ತೀವ್ರ ಎಂಬುದಕ್ಕೆ ಇದು ಸೂಕ್ತವಾದ ಉತ್ತರವೂ ಆಗುತ್ತದೆ.
ಯಾವುದೇ ವಯಸ್ಸಿನಲ್ಲಿಯೇ ಆದರೂ ತಾಯಿಯನ್ನು ಕಳೆದುಕೊಳ್ಳುವುದು ಅಪಾರ ನೋವು ತರಬಲ್ಲದು. ಚಿಕ್ಕಮಕ್ಕಳಿಗೆ ಅದು ಕೇವಲ ‘ತಾಯಿ’ ಎಂಬ ವ್ಯಕ್ತಿಯ ನಷ್ಟವಷ್ಟೇ ಅಲ್ಲ, ಸುರಕ್ಷತೆ-ಭಾವನಾತ್ಮಕವಾದ ರಕ್ಷಣಾತ್ಮಕ ತಾಣದ ಕಳೆದುಕೊಳ್ಳುವಿಕೆಯೂ ಹೌದು. ಮನೋವಿಜ್ಞಾನವಂತೂ ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಳ್ಳುವುದು ಮಗುವಿನ ವ್ಯಕ್ತಿತ್ವದಲ್ಲಿ ತರಬಹುದಾದ ಅಪಾಯಗಳನ್ನು ಒತ್ತಿ ಹೇಳುತ್ತದೆ. ಮಗು ಸರಿಯಾಗಿ ಬೆಳೆದು, ಸ್ವಸ್ಥ ವ್ಯಕ್ತಿತ್ವವನ್ನು ಭವಿಷ್ಯದಲ್ಲಿ ಹೊಂದಬೇಕೆಂದರೆ ತಾಯಿಯ ಜತೆ ಬದುಕಬೇಕು, ತಾಯಿಯ ಆರೋಗ್ಯ ಮಗುವಿನ ಆರೋಗ್ಯ ಎಂಬುದನ್ನು ಗಮನಾರ್ಹವಾಗಿ ಬೋಧಿಸುತ್ತದೆ. ಇದನ್ನು ವಿಜ್ಞಾನ ಓದದೆಯೂ ಹೆಚ್ಚಿನ ಜನ ಒಪ್ಪುತ್ತಾರೆ. ಆದರೆ ‘‘ತಾಯಿಯ ಪ್ರಾಯೋಗಿಕ ಅಗತ್ಯ ಈಗಿಲ್ಲ, ಮಕ್ಕಳು ದೊಡ್ಡವರಾಗಿದ್ದಾರೆ, ಅವರಿಗೇ ಮಕ್ಕಳು-ಮೊಮ್ಮಕ್ಕಳಾಗಿವೆ; ಹೀಗಿರುವಾಗ, ವಯೋಸಹಜವಾಗಿ ಕಾಯಿಲೆಯಿಂದ ತಾಯಿ ಸಾವನ್ನಪ್ಪಿದ್ದರೂ ಮಕ್ಕಳನ್ನು ಶೋಕ ಕಾಡಬಹುದೇ?’’ ಎಂಬ ಪ್ರಶ್ನೆ ಮೊದಲು ಹೇಳಿದಂತಹ ಮಹಿಳೆಯರನ್ನು ಕಂಡಾಗ
ನಮ್ಮೆದುರು ನಿಲ್ಲುತ್ತದೆ. ‘‘ಕಾಡಬಹುದು’’ ಎಂಬಂತಹ ಉತ್ತರವನ್ನೇ ಅಧ್ಯಯನಗಳು ನೀಡುತ್ತವೆ. ಹಠಾತ್ತನೆ ನಡೆಯುವ ಸಾವು ಒಂದು ರೀತಿಯ ನೋವು ತಂದರೆ, ದೀರ್ಘಕಾಲ ನರಳಿ ತಾಯಿ ಮರಣಿಸುವುದು ಮತ್ತೊಂದೇ ರೀತಿಯ ವೇದನೆ ತಂದೊಡ್ಡಬಹುದು. ಭಾವನಾತ್ಮಕ ಹೊಂದಾಣಿಕೆ ಹತ್ತಿರದ್ದು-ದೂರವಾದದ್ದು ಎಂಬ ಅಂಶ ತಾಯಿಯ ಸಾವಿನ ವಿಷಯದಲ್ಲಿ ಮುಖ್ಯವಾಗುವುದಿಲ್ಲ ಎಂಬುದು ಗಮನಾರ್ಹ. ತಾಯಿ-ಮಗಳು ಎಂಬ ಸಂಬಂಧದಲ್ಲಿ ತಾಯಿಯ ಸಾವು ಶೋಕದ ತೀವ್ರತೆ ಹೆಚ್ಚಿಸಬಹುದು. ಗಂಡು ಮಕ್ಕಳಿಗಿಂತ ಹೆಣ್ಣುಮಕ್ಕಳು ಭಾವನಾತ್ಮಕ
ಬಂಧವನ್ನು ಹೆಚ್ಚು ಬೆಳೆಸಿಕೊಳ್ಳುವುದರಿಂದ ಆತ್ಮವಿಶ್ವಾಸದ ಕುಂದುವಿಕೆ, ಅನಾಥ ಭಾವದ ಕಾಡುವಿಕೆ, ವೈಯಕ್ತಿಕ ಬೆಳವಣಿಗೆಯ ನಿರ್ಲಕ್ಷ್ಯ ಇವು ಕಂಡು ಬರಬಹುದು. ಶೋಕದ ಪ್ರಕ್ರಿಯೆಯ ವಿಭಿನ್ನ ಹಂತಗಳನ್ನು ಮನೋವಿಜ್ಞಾನ ವಿವರಿಸುತ್ತದೆ. ನಿರಾಕರಣೆ-ಹೀಗಾಗಲು ಸಾಧ್ಯವೇ ಇಲ್ಲ, ಆಕ್ರೋಶ -ನನಗೇ ಏಕೆ ಈ ದುಃಖ, ಖಿನ್ನತೆ-ತೀವ್ರ ದುಃಖ, ಕೊನೆಯದಾಗಿ ಒಪ್ಪಿಕೊಳ್ಳುವಿಕೆ -ಈ ಹಂತಗಳಲ್ಲಿ ವ್ಯಕ್ತಿಯ ಮನಸ್ಸು ಹಾದು, ಸಾವಿನ ಅಂತಿಮ ಸತ್ಯ ಒಪ್ಪಿಕೊಳ್ಳುತ್ತದೆ. ಮತ್ತೆ ಸಹಜತೆಗೆ ಮರಳುತ್ತದೆ. ಜೀವನ ಮುಂದುವರಿಯುತ್ತದೆ. ಆದರೆ ಎಲ್ಲರ ಮನಸ್ಸೂ ಈ ಹಂತಗಳನ್ನು ನಿರ್ದಿಷ್ಟ ಕ್ರಮದಲ್ಲಿಯೇ ಪಾಲಿಸಬೇಕೆಂದೇನೂ ಇಲ್ಲ! ಪಶ್ಚಾತ್ತಾಪ - ತಪ್ಪಿತಸ್ಥ ಭಾವನೆ-ಖಾಲಿಯಾದ ಭಾವ-ಸಂವೇದನಾರಾಹಿತ್ಯ ಇವು ಏಕಕಾಲದಲ್ಲಿ ಕಾಡುವುದು ಸಾಧ್ಯವಿದೆ. ತಾಯಂದಿರನ್ನು ಕಳೆದುಕೊಂಡಾಗ ಮಹಿಳೆಯರಲ್ಲಿ ಇವು ಹೆಚ್ಚು. ವಿಶೇಷವಾಗಿ ತಮಗಿರುವ ‘ಬೆಂಬಲದ ವ್ಯವಸ್ಥೆ’ಯ Support System ಬಹು ಮುಖ್ಯ ಅಂಗವನ್ನು ಕಳೆದುಕೊಂಡ ಅನುಭವವನ್ನು ಈ ಸಂದರ್ಭದಲ್ಲಿ ಬಹಳಷ್ಟು ಜನ ವಿವರಿಸುತ್ತಾರೆ. ಇದು ಪ್ರಾಯೋಗಿಕವಾಗಿ ಮಕ್ಕಳ ಪಾಲನೆ-ಇತರ ಕಾರ್ಯಗಳಿಗಿಂತ, ತಮ್ಮ ನೋವನ್ನು ಕೇಳುವ, ಸಮಸ್ಯೆಗಳಿಗೆ ಪರಿಹಾರ ಸೂಚಿಸುವ, ಆ ಕ್ಷಣಕ್ಕೆ ತಮ್ಮ ಬಗ್ಗೆ ಕಾಳಜಿ ವಹಿಸುವವರೊಬ್ಬರಿದ್ದಾರೆ ಎಂಬ ಸುರಕ್ಷತೆಯ ಭಾವ ತರುವುದಕ್ಕೆ ಸಂಬಂಧಿಸಿದ್ದು.
ತಾಯಿಯನ್ನು ಕಳೆದುಕೊಳ್ಳುವಿಕೆ ಆಶ್ಚರ್ಯಕರವಾಗಿ ಇತರ ಸಂಬಂಧಗಳ ಕ್ಷೀಣಿಸುವಿಕೆಗೂ ಕಾರಣವಾಗಬಹುದು. ಅಲ್ಲಿಯವರೆಗೆ ಅಮ್ಮನ ಮನೆಗೆಂದು ಹೋಗಿ ಅಲ್ಲಿ ಒಟ್ಟಾಗಿ ಸೇರುವ ಅಕ್ಕ-ತಂಗಿ-ಅಣ್ಣ-ತಮ್ಮ ‘ಅಮ್ಮನಿಲ್ಲ’ ಅಂದಾಕ್ಷಣ ತಮ್ಮ ತಮ್ಮ ಸಂಸಾರ-ಜಂಜಾಟಗಳಲ್ಲಿ ಮುಳುಗಿ ಸಂಬಂಧಗಳು ‘ದೂರ’ ವೆನಿಸುವಂತಾಗಬಹುದು.
ತಾಯಿಯನ್ನು ಕಳೆದುಕೊಳ್ಳುವ ಯಾರಿಗೂ ಎದುರಾಗಬಹುದಾದ ಹಂತಗಳಿವು. ಹೆಚ್ಚಿನ ಜನ ಈ ಹಂತಗಳನ್ನು ಹಾದು, ಆರೋಗ್ಯಕರವಾಗಿ ಹೊರಬರುತ್ತಾರೆ. ಜೀವನ ಮುಂದುವರೆಸುತ್ತಾರೆ. ಮೊದಲೆರಡು ವರ್ಷಗಳ ವಾರ್ಷಿಕ ಆಚರಣೆ ಹೊತ್ತಿಗೆ ದುಃಖ ಮತ್ತೆ ತೀವ್ರವಾಗಿ ಮರುಕಳಿಸುವಂತಾದರೂ, ಕ್ರಮೇಣ ಅದರಿಂದ ಹೊರಬರುವುದು ಅವರಿಗೆ ಸಾಧ್ಯವಾಗುತ್ತದೆ. ಆದರೆ ಕೆಲವರಿಗೆ ಶೋಕದ ತೀವ್ರತೆ ಆರು ತಿಂಗಳುಗಳಿಗೂ ಮೀರಿ ಮುಂದುವರೆಯುತ್ತದೆ. ವ್ಯಕ್ತಪಡಿಸದ, ಅದುಮಿಟ್ಟ ಶೋಕ ಖಿನ್ನತೆಗೆ ದಾರಿಯಾಗುತ್ತದೆ. ದೈನಂದಿನ ಚಟುವಟಿಕೆಗಳಿಗೂ ಅಡ್ಡಿಯಾಗುವಂತೆ ಮಾಡಬಲ್ಲದು.
ನಮ್ಮ ಸಂಸ್ಕೃತಿಯಲ್ಲಿ ನಡೆಸುವ ಅಂತ್ಯಕ್ರಿಯೆಯ ಆಚರಣೆಗಳು, ಶ್ರಾದ್ಧ ಇವುಗಳೆಲ್ಲ ಪರಲೋಕಕ್ಕೆ ನಡೆದ ಜೀವಕ್ಕೆ ಶಾಂತಿ ನೀಡುವುದೋ ಇಲ್ಲವೋ, ಉಳಿದಿರುವ ಮಕ್ಕಳಿಗೆ ಶೋಕವನ್ನು ಹೊರಹಾಕುವ ವಿಸõತ ಅವಕಾಶಗಳನ್ನಂತೂ ನೀಡುತ್ತದೆ. ಶೋಕವೆಂಬುದು ವೈಯಕ್ತಿಕವಾದ ಸಂಗತಿಯೇ ಆದರೂ, ಆ ದಾರಿಯನ್ನು ಒಬ್ಬಂಟಿಯಾಗಿ ಸವೆಸಬೇಕಾಗಿಲ್ಲ. ಹಾಗಾಗಿ ನೆನಪುಗಳು-ಭಾವನೆಗಳು-ಯೋಚನೆ ಗಳನ್ನು ಮರೆಮಾಚಬೇಡಿ, ಅದುಮಿಡಬೇಡಿ. ಅವನ್ನು ಹಂಚಿಕೊಳ್ಳಿ, ಹೊರಹಾಕಿ; ಹಗುರ ಮನಸ್ಸು, ನಿರಾಳ ಭಾವ ನಿಮ್ಮದಾಗುತ್ತದೆ. ಕೃತಜ್ಞತೆಯ ಭಾವದಿಂದ ತಾಯಿಯನ್ನು ನೆನೆಸಿಕೊಳ್ಳುವ, ಸ್ಪೂರ್ತಿ ಪಡೆಯುವ ಬದುಕು ಒದಗುತ್ತದೆ.
ತಾಯಿಯನ್ನು ಕಳೆದುಕೊಂಡ ನೋವನ್ನು ತಾಯಿಯನ್ನು ಮರಳಿ ತಂದು ಪರಿಹರಿಸಲು ಸಾಧ್ಯವಿಲ್ಲವಷ್ಟೆ. ಆದರೆ ಕೆಲವು ಚಟುವಟಿಕೆಗಳ ಮೂಲಕ ಶೋಕದಿಂದ ಹೊರಬರುತ್ತಲೇ, ತಾಯಿಯ ನೆನಪನ್ನು ಸ್ಮರಣೀಯವಾಗಿರಿಸಿಕೊಳ್ಳಲು ಸಾಧ್ಯವಿದೆ.