ಸನ್ನಿ ಲಿಯೋನ್ ಹೆಸರಲ್ಲಿ ಬ್ಯಾಂಕ್​ ಖಾತೆ ತೆರೆದ ವ್ಯಕ್ತಿಗೆ ಸರ್ಕಾರದಿಂದ ಪ್ರತಿ ತಿಂಗಳು 1000 ರೂಪಾಯಿ! ಏಕೆ ಗೊತ್ತಾ? Sunny Leone

Sunny Leone
Published on

Sunny Leone : ಛತ್ತೀಸ್​ಗಢ ರಾಜ್ಯದಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ಮಾಜಿ ನೀಲಿ ತಾರೆ ಹಾಗೂ ಬಾಲಿವುಡ್ ನಟಿ ಸನ್ನಿ ಲಿಯೋನ್ ಹೆಸರಿನಲ್ಲಿ ಬ್ಯಾಂಕ್ ಖಾತೆಯನ್ನು ತೆರೆದು ಪ್ರತಿ ತಿಂಗಳು ಸರ್ಕಾರ ನೀಡುತ್ತಿರುವ 1000 ರೂಪಾಯಿಯನ್ನು ತನ್ನ ಜೇಬಿಗಿಳಿಸುತ್ತಿರುವ ಮಹಾ ವಂಚನೆ ಬಯಲಾಗಿದೆ.

ಛತ್ತೀಸ್‌ಗಢ ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಎಲ್ಲ ಮಹಿಳೆಯರಿಗಾಗಿ 'ಮಹಾತಾರಿ ವಂದನ್ ಯೋಜನೆ' ಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು 1000 ರೂಪಾಯಿಯನ್ನು ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಲಾಗುತ್ತದೆ. ಆದರೆ, ಬಸ್ತಾರ್ ಪ್ರದೇಶದ ತಾಳೂರು ಗ್ರಾಮದ ವೀರೇಂದ್ರ ಜೋಶಿ ಎಂಬ ವ್ಯಕ್ತಿ, ಬಾಲಿವುಡ್ ನಟಿ ಸನ್ನಿ ಲಿಯೋನ್ ಹೆಸರಿನಲ್ಲಿ ಬ್ಯಾಂಕ್​ ಖಾತೆ ತೆರೆದು ಲಾಭ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಯೋಜನೆ ಪ್ರಾರಂಭವಾದಾಗಿನಿಂದ ಫಲಾನುಭವಿಗಳ ಖಾತೆಗೆ ಪ್ರತಿ ತಿಂಗಳು 1,000 ಜಮಾ ಮಾಡಲಾಗಿದೆ. ಇತ್ತೀಚೆಗೆ ಅಧಿಕಾರಿಗಳ ತಪಾಸಣೆ ವೇಳೆ ವೀರೇಂದ್ರ ಜೋಶಿಯ ವಂಚನೆ ಬೆಳಕಿಗೆ ಬಂದಿದೆ.

ಈ ಕುರಿತು ಮಾತನಾಡಿದ ಬಸ್ತಾರ್ ಜಿಲ್ಲಾಧಿಕಾರಿ ಹರೀಶ್ ಎಸ್, ಮಾಹಿತಿ ಬಂದ ತಕ್ಷಣ ಸಂಬಂಧಪಟ್ಟ ಬ್ಯಾಂಕ್ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಯೋಜನೆಯಡಿ ಬಿಡುಗಡೆಯಾದ ಮೊತ್ತವನ್ನು ವಸೂಲಿ ಮಾಡುವ ಜತೆಗೆ ಯೋಜನೆಯ ಲಾಭ ಪಡೆದು ವಂಚನೆ ಮಾಡಿರುವ ಆರೋಪದ ಮೇಲೆ ಎಫ್‌ಐಆರ್‌ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಈ ಯೋಜನೆಯಡಿ ನೋಂದಾಯಿಸಿದ ನಂತರ ಯೋಜನೆಗೆ ಅರ್ಹತೆ ಪಡೆದದ್ದು ಹೇಗೆ ಎಂಬುದರ ಬಗ್ಗೆ ತನಿಖೆ ಆರಂಭಿಸಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಅರ್ಜಿ ನೋಂದಣಿ ಮಾಡಿದ ಅಂಗನವಾಡಿ ಕಾರ್ಯಕರ್ತೆ ಹಾಗೂ ಪರಿಶೀಲನೆ ನಡೆಸದೆ ಅನುಮತಿ ನೀಡಿದ ಮೇಲ್ವಿಚಾರಕಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಘಟನೆಯ ಬಳಿಕ ಪ್ರತಿಪಕ್ಷಗಳು ಯೋಜನೆ ಅನುಷ್ಠಾನದಲ್ಲಿ ಸರ್ಕಾರದ ನಿರ್ಲಕ್ಷ್ಯವನ್ನು ಟೀಕಿಸುತ್ತಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net