ನಟ ವಿಜಯ್​ಗೆ ಕೈ ತೆಗೆಯಿರಿ ಸರ್ ಎಂದ ವಿದ್ಯಾರ್ಥಿನಿ! ವಿಡಿಯೋ ವೈರಲ್, ಅಸಲಿ ಸಂಗತಿ ಇಲ್ಲಿದೆ… ​

Actor Vijay
Published on

ಚೆನ್ನೈ: ಕಾಲಿವುಡ್​ ಸೂಪರ್​ ಸ್ಟಾರ್, ಇಳಯದಳಪತಿ ವಿಜಯ್​ ಬಗ್ಗೆ ವಿಶೇಷವಾಗಿ ಪರಿಚಯಿಸುವ ಅಗತ್ಯವಿಲ್ಲ. ತಮಿಳುನಾಡಿನಲ್ಲಿ ಅವರನ್ನು ದೇವರಂತೆ ಪೂಜಿಸುವ ಹುಚ್ಚು ಅಭಿಮಾನಿಗಳಿದ್ದಾರೆ. ಅಲ್ಲದೆ, ಎಲ್ಲ ಭಾಷೆಯಲ್ಲೂ ವಿಜಯ್​ ಅವರನ್ನು ಆರಾಧಿಸುವ ಅಭಿಮಾನಿಗಳಿದ್ದಾರೆ. ಅವರ ಸಿನಿಮಾ ಬಂದರೆ ಸಾಕು ಹಬ್ಬದಂತೆ ಆಚರಣೆ ಮಾಡುತ್ತಾರೆ. ಸಾಕಷ್ಟು ಸೂಪರ್​ ಡೂಪರ್ ಸಿನಿಮಾಗಳನ್ನು ನೀಡಿರುವ ವಿಜಯ್​, ಇತ್ತೀಚೆಗೆ ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟ ವಿಚಾರ ಎಲ್ಲರಿಗೂ ತಿಳಿದೇ ಇದೆ.

ತಾಜಾ ಸಂಗತಿ ಏನೆಂದರೆ, ಇತ್ತೀಚೆಗೆ ವಿಜಯ್​ಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಜೂನ್ 28 ರಂದು ವಿಜಯ್​ ಅವರ "ತಮಿಳಗ ವೆಟ್ರಿ ಕಜಕಂ" ಪಕ್ಷ ಆಯೋಜನೆ ಮಾಡಿದ್ದ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿಡಿಯೋ ಆಗಿದೆ. 10 ಮತ್ತು ಪ್ಲಸ್ 2 ತರಗತಿಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದವರಿಗೆ ಪ್ರಶಸ್ತಿಯನ್ನು ನೀಡಲಾಯಿತು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯೊಬ್ಬಳನ್ನು ಶಾಲೂ ಹೊದಿಸಿ ಸನ್ಮಾನಿಸಿದ ಬಳಿಕ ವಿಜಯ್​ ಅವರು ಆಕೆಯ ಭುಜದ ಮೇಲೆ ಕೈಹಾಕಿ ಕ್ಯಾಮೆರಾಗೆ ಪೋಸ್​ ನೀಡಲು ಮುಂದಾಗುತ್ತಾರೆ. ಆದರೆ, ಆ ವಿದ್ಯಾರ್ಥಿನಿ ಭುಜದಿಂದ ಕೈ ತೆಗೆಯುವಂತೆ ಹೇಳುತ್ತಾಳೆ. ಬಳಿಕ ವಿಜಯ್ ತಕ್ಷಣ ಭುಜದಿಂದ ಕೈ ಹಿಂದಕ್ಕೆ ಎತ್ತಿಕೊಳ್ಳುವ ದೃಶ್ಯ ವೈರಲ್​ ವಿಡಿಯೋದಲ್ಲಿದೆ. ಈ ವಿಡಿಯೋವನ್ನು ಕೆಲ ನೆಟ್ಟಿಗರು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಅಲ್ಲದೆ, ಸಾಕಷ್ಟು ಪರ-ವಿರೋಧ ಚರ್ಚೆಗಳಿಗೂ ಗ್ರಾಸವಾಗಿದೆ.

ಆದರೆ, ಅಸಲಿ ಸಂಗತಿ ಏನೆಂದರೆ, ವೈರಲ್​ ಆಗಿರುವ ವಿಡಿಯೋವನ್ನು ಪೂರ್ತಿಯಾಗಿ ಪೋಸ್ಟ್​ ಮಾಡದೇ ಅರ್ಧದಲ್ಲೇ ಎಡಿಟ್​ ಮಾಡುವ ಮೂಲಕ ಕೆಲ ಕಿಡಿಗೇಡಿಗಳು ನಟ ವಿಜಯ್​ಗೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡಿದ್ದಾರೆ. ವಿಜಯ್​ ಅಭಿಮಾನಿಗಳು ಪೂರ್ತಿ ವಿಡಿಯೋವನ್ನು ಪೋಸ್ಟ್​ ಮಾಡಿದ್ದಾರೆ. ಭುಜದಿಂದ ಕೈ ತೆಗೆಯುವಂತೆ ಹೇಳಿದ ವಿದ್ಯಾರ್ಥಿನಿ ಮತ್ತು ಇನ್ನೊಂದು ಬದಲಿಯಲ್ಲಿದ್ದ ವಿದ್ಯಾರ್ಥಿನಿ ಇಬ್ಬರು ವಿಜಯ್​ ಕೈಗಳನ್ನು ಬಳಸಿ ಹಿಡಿಯುತ್ತಾರೆ. ಈ ಕಾರಣಕ್ಕೆ ಕೈ ತೆಗೆಯಲು ವಿದ್ಯಾರ್ಥಿನಿ ಹೇಳುತ್ತಾಳಷ್ಟೇ. ಹೀಗಾಗಿ ಎಡಿಟ್​ ಮಾಡಿದ ವಿಡಿಯೋ ನೋಡಿ ತಪ್ಪಾಗಿ ತಿಳಿದುಕೊಳ್ಳಬೇಡಿ ಎಂದು ವಿಜಯ್​ ಅಭಿಮಾನಿಗಳು ಮನವಿ ಮಾಡಿದ್ದಾರೆ.

ಇನ್ನೂ ಸಿನಿಮಾ ವಿಚಾರಕ್ಕೆ ಬಂದರೆ ವಿಜಯ್​ ಅವರು ಕೊನೆಯದಾಗಿ ಲೋಕೇಶ್​ ಕನಗರಾಜ್​ ನಿರ್ದೇಶನದ ಲಿಯೋ ಸಿನಿಮಾದಲ್ಲಿ ಕಾಣಿಸಿಕೊಂಡರು. ಸದ್ಯ ಅವರು ಮಂಗಾತ ಖ್ಯಾತಿಯ ವೆಂಕಟ್ ಪ್ರಭು ನಿರ್ದೇಶನದ ದಿ ಗ್ರೇಟೆಸ್ಟ್​ ಆಫ್​ ಆಲ್​ ಟೈಮ್​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸುಮಾರು 300 ಕೋಟಿ ರೂ. ಬಜೆಟ್​ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾ​ ಸೆಪ್ಟೆಂಬರ್​ 5ರಂದು ತೆರೆಗೆ ಬರಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net