ನಿಶ್ಚಿತಾರ್ಥ ಸುದ್ದಿ ನಿಜ... ಕೊನೆಗೂ ಬಹಿರಂಗವಾಗಿ ಒಪ್ಪಿಕೊಂಡ ರಶ್ಮಿಕಾ ಮಂದಣ್ಣ, ವಿಡಿಯೋ ವೈರಲ್​! Rashmika Mandanna

Rashmika Mandanna
Published on

ಮುಂಬೈ: ರಶ್ಮಿಕಾ ಮಂದಣ್ಣ ( Rashmika Mandanna ) ಬಗ್ಗೆ ಕನ್ನಡಿಗರಿಗೆ ವಿಶೇಷವಾಗಿ ಹೇಳಬೇಕಿಲ್ಲ. ಏಕೆಂದರೆ, ಆಕೆ ಕನ್ನಡತಿಯಾಗಿದ್ದು, ಪ್ಯಾನ್​ ಇಂಡಿಯಾ ನಟಿಯಾಗಿ ಬೆಳೆದಿದ್ದಾರೆ. ಇತ್ತೀಚೆಗೆ, ರಶ್ಮಿಕಾ ಹೆಸರು ಹೆಚ್ಚು ಚಾಲ್ತಿಯಲ್ಲಿದೆ. ಕೇವಲ ಸಿನಿಮಾ ಕಾರಣಕ್ಕಲ್ಲ, ವ್ಯಯಕ್ತಿಕ ಕಾರಣಕ್ಕೂ ರಶ್ಮಿಕಾ ಸುದ್ದಿಯಾಗುತ್ತಿದ್ದಾರೆ.

ಹೌದು, ನಟ ವಿಜಯ್ ದೇವರಕೊಂಡ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆಯೇ ಸಿಕ್ಕಾಪಟ್ಟೆ ವೈರಲ್​ ಆಯಿತು. ಆದರೆ, ಈ ಬಗ್ಗೆ ರಶ್ಮಿಕಾ ಆಗಲಿ ಅಥವಾ ವಿಜಯ್​ ಆಗಲಿ ಎಲ್ಲೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಆದರೆ, ಅವರಿಬ್ಬರ ಕೈಯಲ್ಲಿ ಇರುವ ರಿಂಗ್​ಗಳು ಮಾತ್ರ ನಿಶ್ಚಿತಾರ್ಥಕ್ಕೆ ಸಾಕ್ಷಿಯಂತಿವೆ. ಇದೀಗ ಮೊದಲ ಬಾರಿಗೆ ರಶ್ಮಿಕಾ ಅವರು ಬಹಿರಂಗವಾಗಿ ನಿಶ್ಚಿತಾರ್ಥವನ್ನು ಒಪ್ಪಿಕೊಂಡಿದ್ದಾರೆ.

ನಿಮಗೆ ಗೊತ್ತಿರಬಹುದು ರಶ್ಮಿಕಾ ಮತ್ತು ಆಯುಷ್ಮಾನ್​ ಖುರಾನಾ ನಟನೆಯ ಹಾರರ್​ ಕಾಮಿಡಿ ಸಿನಿಮಾ "ಥಮ್ಮಾ" ಇದೇ ಅಕ್ಟೋಬರ್​ 23ಕ್ಕೆ ಬಿಡುಗಡೆಯಾಗಲಿದೆ. ಹೀಗಾಗಿ ಚಿತ್ರತಂಡ ಪ್ರಚಾರದಲ್ಲಿ ಬಿಜಿಯಾಗಿದೆ. ಇದರ ನಡುವೆ ರಶ್ಮಿಕಾ ಅವರು ಗಲಾಟ್ಟಾ ಪ್ಲಸ್‌ಗೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರು ತಮ್ಮ ನಿಶ್ಚಿತಾರ್ಥ ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಸಂದರ್ಶನದಲ್ಲಿ ನಿರೂಪಕರು ರಶ್ಮಿಕಾ ಅವರನ್ನು ಅಭಿನಂದಿಸುತ್ತಾರೆ. ಈ ವೇಳೆ ರಶ್ಮಿಕಾ, ಒಂದು ಕ್ಷಣ ಆಶ್ಚರ್ಯಗೊಂಡು, ನನ್ನನ್ನೇಕೆ ಅಭಿನಂದಿಸುತ್ತಿದ್ದಾರೆ ಎಂದು ಯೋಚಿಸುತ್ತಾರೆ. ನಿಮ್ಮದೇಯಾದ ಸುಗಂಧ ದ್ರವ್ಯ ಬ್ರಾಂಡ್​ಗಾಗಿ ಎನ್ನುತ್ತಾರೆ. ಅಲ್ಲದೇ, ಮತ್ತೇನಾದರೂ ಇದೆಯೇ? ಎಂದು ಪ್ರಶ್ನೆ ಮಾಡುತ್ತಾರೆ. ಈ ವೇಳೆ ಉತ್ತರ ನೀಡುವ ರಶ್ಮಿಕಾ, ಮೊದಲಿಗೆ ನಗುತ್ತಲೇ ಥ್ಯಾಂಕ್ಸ್​ ಹೇಳುತ್ತಾರೆ. ನಂತರ ಸಾಕಷ್ಟು ವಿಷಯಗಳು ನಡೆಯುತ್ತಿವೆ ಎಂದು ಹೇಳುತ್ತಾರೆ. ಅಲ್ಲದೆ, ನಾನು ನೈತಿಕತೆಯಿಂದ ಅಭಿನಂದೆಗಳನ್ನು ಸ್ವೀಕರಿಸುತ್ತಿದ್ದೇನೆ ಎನ್ನುವ ಮೂಲಕ ನಗುತ್ತಾರೆ. ಈ ಮೂಲಕ ಪರೋಕ್ಷವಾಗಿ ತಮ್ಮ ನಿಶ್ಚಿತಾರ್ಥದ ಬಗ್ಗೆ ಒಪ್ಪಿಕೊಂಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, ಅನೇಕರು ಕಾಮೆಂಟ್​ಗಳ ಸುರಿಮಳೆಗೈದಿದ್ದಾರೆ. ರಶ್ಮಿಕಾ ಅವರ ಮುಖ ನೋಡಿ, ಅದರಲ್ಲೇ ಎಲ್ಲವೂ ಬರೆದಿದೆ, ಆಕೆ ಮೊದಲು ಶುಭಾಶಯಗಳನ್ನು ಕೇಳಿ ಆಘಾತಕ್ಕೊಳಗಾದರು ಆದರೆ, ನಂತರ ಅದನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿದರು, ಮದುವೆ ನಿಶ್ಚಿತಾರ್ಥದ ಸುದ್ದಿ ನಿಜ ಎಂದೆಲ್ಲ ಕಾಮೆಂಟ್​ಗಳನ್ನು ಮಾಡುತ್ತಿದ್ದಾರೆ.

ಅಂದಹಾಗೆ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಪ್ರೀತಿ ಮಾಡುತ್ತಿದ್ದಾರೆ ಎಂಬ ಸುದ್ದಿ ಆಗಾಗ ಬೆಳಕಿಗೆ ಬರುತ್ತಲೇ ಇತ್ತು. ಇಬ್ಬರೂ ಒಟ್ಟಿಗೆ ರಜಾದಿನವನ್ನು ಆಚರಿಸಿದ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ. ಕಳೆದ ಆಗಸ್ಟ್‌ನಲ್ಲಿ, ಇಬ್ಬರೂ ಒಟ್ಟಿಗೆ ನ್ಯೂಯಾರ್ಕ್‌ನಲ್ಲಿ ನಡೆದ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆ ಸಮಯದಲ್ಲಿ, ಇಬ್ಬರೂ ತಾವು ಒಂಟಿಯಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ, ತಮ್ಮ ಸಂಗಾತಿ ಯಾರೆಂದು ಬಹಿರಂಗಪಡಿಸಿರಲಿಲ್ಲ. ಆದರೆ, ಇಬ್ಬರ ನಡೆ-ನುಡಿ ಮಾತ್ರ ಅಭಿಮಾನಿಗಳಿಗೆ ಸ್ಪಷ್ಟವಾಗಿ ಅರ್ಥವಾಗಿತ್ತು. ಈ ಹಿಂದೆ ರಶ್ಮಿಕಾ ಅವರು ವಿಜಯ್​ ಅವರ ಮನೆಗೂ ಭೇಟಿ ನೀಡಿದ್ದರು. ಹೀಗಾಗಿ, ಪ್ರೀತಿಯ ವದಂತಿ ಬಲವಾಗಿ ಹರಡಿತ್ತು. ಅಂತಿಮವಾಗಿ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಮದುವೆ ಕೂಡ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಅಂದಹಾಗೆ, 2018 ರಲ್ಲಿ ಬಿಡುಗಡೆಯಾದ ಗೀತ ಗೋವಿಂದಂ ಚಿತ್ರದ ಮೂಲಕ ಇಬ್ಬರ ನಡುವೆ ಪ್ರೀತಿಯ ಮೊಳಕೆ ಚಿಗುರಿತು. ಡಿಯರ್ ಕಾಮ್ರೇಡ್ ಚಿತ್ರದಲ್ಲೂ ಅವರು ಒಟ್ಟಿಗೆ ಕೆಲಸ ಮಾಡಿದ್ದಾರೆ.

ಅಂದಹಾಗೆ, ಥಮ್ಮಾ ಚಿತ್ರವು ಹಾರರ್ ಕಾಮಿಡಿ ಯುನಿವರ್ಸ್‌ನ ಐದನೇ ಭಾಗವಾಗಿದ್ದು, ಆದಿತ್ಯ ಸರ್ಪೋದರ್ ನಿರ್ದೇಶನದಲ್ಲಿ ಆಯುಷ್ಮಾನ್ ಖುರಾನಾ, ರಶ್ಮಿಕಾ ಮಂದಣ್ಣ, ನವಾಜುದ್ದೀನ್ ಸಿದ್ದಿಕಿ, ಸುನೀಲ್ ಶೆಟ್ಟಿ ಮತ್ತು ಪರೇಶ್ ರಾವಲ್ ಅಭಿನಯಿಸಿದ್ದಾರೆ. ಇದೊಂದು ರೊಮ್ಯಾಂಟಿಕ್ ಹಾರರ್-ಕಾಮಿಡಿ ಚಿತ್ರವಾಗಿದ್ದು, ವಾಂಪೈರ್ ಲವ್ ಸ್ಟೋರಿ ಆಧಾರಿತವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net