ನಿನ್ನನ್ನು ನಾಯಕನನ್ನಾಗಿ ಮಾಡಿದ ಐನ್​ಸ್ಟೈನ್​ನನ್ನು ನೋಡುವ ಆಸೆಯಾಗಿದೆ; ಬಾಬರ್​ ವಿರುದ್ಧ ಮಾಜಿ ಕ್ರಿಕೆಟಿಗ ವಾಗ್ದಾಳಿ

Babar Azam
Published on

ನವದೆಹಲಿ: ಚುಟುಕು ವಿಶ್ವಸಮರ ಆರಂಭವಾಗುವುದಕ್ಕಿಂತ ಮುಂಚಿನಿಂದಲೂ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುವ ಪಾಕಿಸ್ತಾನ ಕ್ರಿಕೆಟ್​ ತಂಡವು ವಿವಾದದ ಕೇಂದ್ರ ಬಿಂದು ಎಂದರೆ ತಪ್ಪಾಗಲಾರದು. ಕ್ರಿಕೆಟ್​ ಶಿಶು ಯುಎಸ್​ಎ ಹಾಗೂ ಭಾರತದ ವಿರುದ್ಧದ ಸೋಲಿನ ಬಳಿಕ ತೀವ್ರ ಅವಮಾನಕ್ಕೆ ಗುರಿಯಾಗಿರುವ ಪಾಕಿಸ್ತಾನ ಕ್ರಿಕೆಟ್​ ತಂಡದೊಳಗೆ ವಿವಾದಗಳ ಸರಣಿ ಶುರುವಾಗಿದೆ. ಮೊದಲು ತಂಡದ ಪ್ರದರ್ಶನದ ಕುರಿತು ಕಿಡಿಕಾರಿದ್ದ ಮಾಜಿ ಕ್ರಿಕೆಟಿಗರು ಆ ಬಳಿಕ ಆಟಗಾರರ ನಡುವಿನ ಒಗ್ಗಟ್ಟಿನ ಬಗ್ಗೆ ಪ್ರಶ್ನೆ ಎತ್ತಿದ್ದರು. ಇದರ ಬೆನ್ನಲ್ಲೇ ಕೋಚ್​ ಗ್ಯಾರಿ ಕರ್ಸ್ಟನ್​​ ಆಟಗಾರರ ನಡುವಿನ ಭಿನ್ನಭಿಪ್ರಾಯದ ಬಗ್ಗೆ ಮಾತನಾಡಿದ್ದರು. ಇದರ ಬೆನ್ನಲ್ಲೇ ನಾಯಕ ಬಾಬರ್​ ಅಜಂ ತಲೆದಂಡದ ಬಗ್ಗೆ ಹಲವರು ಧ್ವನಿ ಎತ್ತಿದ್ದರು.

ಇದೀಗ ಬಾಬರ್​ ಅಜಂ ನಾಯಕತ್ವದ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ಶೋಯೆಬ್​ ಅಖ್ತರ್​ ಬಾಬರ್​ ಅಜಂ ನಾಯಕತ್ವದ ಕುರಿತು ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದಾರೆ. ಇದಲ್ಲದೆ ನಿನ್ನನ್ನು ನಾಯಕನನ್ನಾಗಿ ನೇಮಿಸಿದವರಿಗೆ ಐನ್​ಸ್ಟೈನ್​ ಮೆದುಳಿರಬೇಕು ಎಂದು ವ್ಯಂಗ್ಯವಾಡಿದ್ದಾರೆ.

ಖಾಸಗಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ ಶೋಯೆಬ್​, ಮೊಲಿಗೆ ಬಾಬರ್​ ಅಜಂನನ್ನು ನಾಯಕನನ್ನಾಗಿ ನೇಮಿಸಿದ ಆ ಐನ್​ಸ್ಟೈನ್​ ಯಾರೆಂದು ನನಗೆ ತಿಳಿಯಬೇಕು. ನನಗೆ ಆತನನ್ನು ನೋಡುವ ಆಸೆಯಾಗಿದೆ. ಆತ ನಾಯಕತ್ವಕ್ಕೆ ಅರ್ಹ ವ್ಯಕ್ತಿನಾ ಅಥವಾ ಕ್ಯಾಪ್ಟನ್ಸಿ ಗುಣಗಳನ್ನು ಹೊಂದಿದ್ದಾನೆಯೇ ಎಂದು ಅರಿಯದೆ ಆತನನ್ನು ನಾಯಕನನ್ನಾಗಿ ನೇಮಿಸಲಾಗಿದೆ. ನನ್ನ ಪ್ರಕಾರ ಬಾಬರ್​ ನಾಯಕತ್ವಕ್ಕೆ ಸೂಕ್ತವಲ್ಲ ಎಂದು ಹೇಳಿದ್ದಾರೆ.

ಒಂದು ವೇಳೆ ಬಾಬರ್​ನನ್ನು ನಾಯಕತ್ವದಿಂದ ಕಳೆಗಿಳಿಸಿದರೆ ಆತನಿಗೆ ಕ್ರಮೇಣವಾಗಿ ತಂಡದಿಂದ ಗೇಟ್​ಪಾಸ್​ ಕೊಡಲಾಗುತ್ತದೆ. ಮೊದಲು ಒಬ್ಬ ಆಟಗಾರನಾಗಿ ತಂಡಕ್ಕೆ ಹೇಗೆ ಉಪಕಾರಿಯಾಗಬೇಕೆಂಬುದನ್ನು ತಿಳಿದುಕೊಂಡು ಆಡಲು ಶುರು ಮಾಡು ಎಂದು ಹೇಳಿದ್ದಾರೆ. ಇತ್ತ ಶೋಯೆಬ್​ ಅಖ್ತರ್​ ಐನ್​ಸ್ಟೈನ್​ ಎಂದು ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಅವರನ್ನು ಉಲ್ಲೇಖಿಸಿ ಹೇಳಿದ್ದಾರೆ ಎಂದು ವರದಿಯಾಗಿದೆ. ಈ ಹಿಂದೆ ಬಾಬರ್​ ಹೆಸರನ್ನು ನಾಯಕತ್ವಕ್ಕೆ ಶಿಫಾರಸ್ಸು ಮಾಡಿದ್ದಾಗಿ ಇಮ್ರಾನ್​ ಖಾನ್​ ಕಾರ್ಯಕ್ರಮ ಒಂದರಲ್ಲಿ ಹೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net