ಆ ಒಂದು ಪಂದ್ಯವನ್ನು ನೆನೆಸಿಕೊಂಡರೆ ಈಗಲೂ ನನ್ನ ಮೈ ನಡುಗುತ್ತೆ; ರಶೀದ್​ ಖಾನ್​ರನ್ನು​ ಭಯಬೀಳಿಸಿದ ಆ ದೇಶ ಯಾವುದು ಗೊತ್ತಾ?

Rashid Khan
Published on

ನವದೆಹಲಿ: ಅಂತರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್​ ನಡೆಸುವ ಪ್ರತಿಷ್ಠಿತ ಟೂರ್ನಿಗಳು ಒಂದಿಲ್ಲೊಂದು ಕಾರಣಕ್ಕೆ ಸದಾ ಸದ್ದು ಮಾಡುತ್ತವೆ. ಅದೇ ರೀತಿ 2023ರಲ್ಲಿ ಭಾರತದ ಅತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್​ ಪ್ರಮುಖ ಘಟನೆಗಳಿಗೆ ಸಾಕ್ಷಿಯಾಗಿತ್ತು. ಇದರಲ್ಲಿ ಆಸ್ಟ್ರೇಲಿಯಾ ಪರ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ ಗ್ಲೆನ್​ ಮ್ಯಾಕ್ಸ್​ವೆಲ್​ ಸಿಡಿಸಿದ ದ್ವಿಶತಕ ಈಗಲೂ ಜನರು ನೆನಪಿಸಿಕೊಳ್ಳುತ್ತಾರೆ. ಅವರ ಆ ದ್ವಿಶತಕ ಸೋಲಿನಂಚಿನಲ್ಲಿದ್ದ ಆಸ್ಟ್ರೇಲಿಯಾ ತಂಡವನ್ನು ಗೆಲುವಿನ ದಡ ಸೇರಿಸಿದನ್ನು ನೆನೆಸಿಕೊಂಡರೆ ಈಗಲೂ ಆ ಒಬ್ಬ ಆಟಗಾರನಿಗೆ ಮೈ ನಡುಗುತ್ತದಂತೆ.

ನವೆಂಬರ್​ 07, 2023 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್​ನ 39ನೇ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿ ಅಫ್ಘಾನಿಸ್ತಾನ ತಂಡವು ಆರಂಭಿಕ ಇಬ್ರಾಹಿಂ ಜರ್ದಾನ್​ (129 ರನ್, 143 ಎಸೆತ, 8 ಬೌಂಡರಿ, 3 ಸಿಕ್ಸರ್​) ಶತಕದ ಫಲವಾಗಿ ನಿಗದಿತ 50 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 291 ರನ್​ ಗಳಿಸಿತ್ತು. 292 ರನ್​ಗಳ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ ತಂಡವನ್ನು ಇನ್ನಿಲ್ಲದಂತೆ ಕಾಡಿದ ಅಫ್ಘಾನಿಸ್ತಾನ ಬೌಲರ್​ಗಳು ಎದುರಾಳಿ ತಂಡವನ್ನು 91 ರನ್ ಆಗುವ ವೇಳೆ 7 ವಿಕೆಟ್​ ಕಬಳಿಸಿದ್ದರು. ಇನ್ನೇನು ಆಸ್ಟ್ರೇಲಿಯಾ ಸೋಲುಂಡಿತ್ತು ಎನ್ನುವಾಗ ತಂಡದ ಪಾಲಿಗೆ ಸಂಜೀವಿಯಂತೆ ಬಂದ ಮ್ಯಾಕ್ಸ್​ವೆಲ್​ (201 ರನ್, 128 ಎಸೆತ, 21 ಬೌಂಡರಿ, 10 ಸಿಕ್ಸರ್) ಫಲವಾಗಿ ಆಸೀಸ್​ ಗೆಲುವಿನ ನಗೆ ಬೀರಿತ್ತು.

Glenn Maxwell

ಆಸ್ಟ್ರೇಲಿಯಾ ವಿರುದ್ಧದ ಸೂಪರ್​ 08 ಪಂದ್ಯಕ್ಕೂ ಮುನ್ನ ಈ ಕುರಿತು ಮಾತನಾಡಿರುವ ಅಫ್ಘಾನಿಸ್ತಾನ ಕ್ರಿಕೆಟ್​ ತಂಡದ ನಾಯಕ ರಶೀದ್​ ಖಾನ್​, ಕೆಲವೊಮ್ಮ ನಾನು ಅಂದು ಮ್ಯಾಕ್ಸ್​ವೆಲ್​ ಆಡಿದ ರೀತಿ ನೆನೆಸಿಕೊಂಡರೆ ಒಂದು ಕ್ಷಣ ನನ್ನ ಮೈನಡುಗಲು ಶುರು ಮಾಡುತ್ತದೆ. ನಾವು ನೋಡಿದ ಅತ್ಯುತ್ತಮ ಇನ್ನಿಂಗ್ಸ್​ನಲ್ಲಿ ಇದು ಕೂಡ ಒಂದಾಗಿದೆ. ನನಗೆ ಈಗಲೂ ಅದು ಕನಸಾಗಿ ಕಾಡುತ್ತಿರುತ್ತದೆ ಎಂದು ರಶೀದ್​ ಖಾನ್​ ಹೇಳಿದ್ದಾರೆ.

ಇತ್ತ ರಶೀದ್​ ಖಾನ್​ ಅವರ ಹೇಳಿಕೆ ವೈರಲ್​ ಆಗುತ್ತಿದ್ದು, ಹಲವರು ಮ್ಯಾಕ್ಸ್​ವೆಲ್​ ಅಂದು ತಂಡಕ್ಕೆ ಆಸರೆಯಾದ ರೀತಿಯನ್ನು ನೋಡಿ ಹಾಡಿ ಹೊಗಳುತ್ತಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿನ ಅವರ ಕಳಪೆ ಫಾರ್ಮ್​​ಅನ್ನು ಉಲ್ಲೇಖಿಸಿ ಕೆಲವರು ಅವರನ್ನು ಟೀಕಿಸುತ್ತಿದ್ದಾರೆ. ಭಾನುವಾರ ನಡೆಯುವ ಸೂಪರ್​ 08 ಪಂದ್ಯದಲ್ಲಿ ಯಾವ ತಂಡ ಗೆಲ್ಲಲಿದೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net