

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಸಹಚರರು ಜೈಲು ಪಾಲಾಗಿದ್ದು, ಪೊಲೀಸ್ ಕಸ್ಟಡಿ ಅಂತ್ಯವಾದ ಬೆನ್ನಲ್ಲೇ ಕೋರ್ಟ್ ಅವರಿಗೆ ಜುಲೈ 04ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆಗಿರುವ ನಟ ದರ್ಶನ್ ಹಾಗೂ ಅವರ ಸಹಚರರಾದ ವಿನಯ್, ಧನರಾಜ್ ಹಾಗೂ ಪ್ರದೋಶ್ನನ್ನು ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಿಸಿದ್ದು, ಡಿ ಗ್ಯಾಂಗ್ಗೆ ಜೈಲಿನ ಅಧಿಕಾರಿಗಳು ವಿಚಾರಣಾಧೀನ ಕೈದಿ ನಂಬರ್ ಅನ್ನು ಜೈಲು ಅಧಿಕಾರಿಗಳು ನೀಡಿದ್ದಾರೆ.
ಜೈಲು ಅಧಿಕಾರಿಗಳು ನಟ ದರ್ಶನ್ಗೆ ವಿಚಾರಣಾಧೀನ ಕೈದಿ ನಂಬರ್ ಅನ್ನು ನೀಡಿದ್ದಾರೆ. ವಿಚಾರಣಾಧೀನ (UTP) ಕೈದಿ ನಂಬರ್- 6106 ಅನ್ನು ನೀಡಲಾಗಿದೆ. ದರ್ಶನ್ ಜೊತೆ ನ್ಯಾಯಾಂಗ ಬಂಧನಕ್ಕೆ ಒಳಪಟ್ಟ ಧನರಾಜ್ಗೆ 6107, ವಿನಯ್ಗೆ 6108, ಪ್ರದೂಶ್ಗೆ 6109 ಕೈದಿ ಸಂಖ್ಯೆಯನ್ನು ನೀಡಲಾಗಿದೆ. ಭದ್ರತೆ ದೃಷ್ಟಿಯಿಂದ ನಟ ದರ್ಶನ್ರನ್ನು ವಿಶೇಷ ಬ್ಯಾರಕ್ನಲ್ಲಿ ಇರಿಸಲಾಗಿದ್ದು, ಇತರೆ ಕೈದಿಗಳಿಂದ ಅಪಾಯವಿರುವ ಆರೋಪಿಗಳನ್ನು ಈ ಬ್ಯಾರಕ್ನಲ್ಲಿ ಇಡಲಾಗುತ್ತಿದೆ. ಇದೀಗ ದರ್ಶನ್ ಅನ್ನು ಮೂರನೇ ಬ್ಯಾರಕ್ನಲ್ಲಿ ಇರಿಸಲಾಗಿದೆ.
ಎರಡು ದಿನದ ಹಿಂದೆ ನ್ಯಾಯಾಂಗ ಬಂಧನಕ್ಕೆ ಒಳಪಟ್ಟ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಅವರನ್ನು ಪರಪ್ಪನ ಅಗ್ರಹಾರದ ಮಹಿಳಾ ವಿಭಾಗದ ಡಿ ಬ್ಯಾರಕ್ನಲ್ಲಿ ಇರಿಸಲಾಗಿದೆ. ಪವಿತ್ರಾಗೆ 6024 ಸಂಖ್ಯೆಯನ್ನು ನೀಡಲಾಗಿತ್ತು. ಇಂದು ಪೊಲೀಸ್ ಕಸ್ಟಡಿ ಅಂತ್ಯವಾದ ಆರೋಪಿಗಳಿಗೆ 13 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಜುಲೈ 4 ರವರೆಗೆ ದರ್ಶನ್ ಮತ್ತು ಗ್ಯಾಂಗ್ ಜೈಲಿನಲ್ಲಿರಲಿದೆ.