

ನವದೆಹಲಿ: ಯುಎಸ್ಎ ಹಾಗೂ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆಯುತ್ತಿರುವ ಚುಟುಕು ವಿಶ್ವ ಸಮರದಲ್ಲಿ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡುತ್ತಿದ್ದು, ಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದ್ದು, ರೋಹಿತ್ ಪಡೆ ಪ್ರಶಸ್ತಿ ಬರವನ್ನು ನೀಗಿಸಲಿದೆಯಾ ಎಂದು ಕಾದು ನೋಡಬೇಕಿದೆ. ಇತ್ತ ವಿಶ್ವಕಪ್ ಮುಗಿಯುತ್ತಿದ್ದಂತೆ ಟೀಮ್ ಇಂಡಿಯಾ ಕೋಚ್ ಆಗಿ ರಾಹು್ ದ್ರಾವಿಡ್ ಅವರ ಅವಧಿ ಮುಕ್ತಾಯವಾಗಲಿದ್ದು, ಅವರ ಸ್ಥಾನಕ್ಕೆ ಹೊಸಬರನ್ನು ನೇಮಿಸಲು ಬಿಸಿಸಿಐ ಹುಡಕಾಟ ನಡೆಸುತ್ತಿದೆ.
ಇತ್ತ ಟೀಮ್ ಇಂಡಿಯಾ ನೂತನ ಕೋಚ್ ಆಗಿ ಗೌತಮ್ ಗಂಭೀರ್ ನೇಮಕವಾಗಲಿದ್ದಾರೆ ಎಂದು ಹೇಳಲಾಗಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಎಂದು ತಿಳಿದು ಬಂದಿದೆ. ಕೋಚ್ ಹುದ್ದೆ ಸಂಬಂಧ ಬಿಸಿಸಿಐ ಈಗಾಗಲೇ ಗೌತಮ್ ಗಂಭೀರ್ ಅವರೊಂದಿಗೆ ಹಲವು ಸುತ್ತುಗಳ ಮಾತುಕತೆ ನಡೆಸಿದ್ದು, ಗೌತಮ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇತ್ತ ಈ ಕುರಿತು ಮಾತನಾಡಿರುವ ಗೌತಮ್ ಗಂಭೀರ್ ಈ ರೀತಿಯ ಪ್ರಶ್ನೆಗಳನ್ನು ಯಾಕೆ ಕೇಳುತ್ತಿದ್ದೀರಾ ಎಂದು ಹೇಳುವ ಮೂಲಕ ಸುದ್ದಿಯಾಗಿದ್ದಾರೆ.
ಈ ಕುರಿತು ಮಾತನಾಡಿರುವ ಗೌತಮ್ ನಾನಿನ್ನೂ ಅಷ್ಟು ದೂರ ಯೋಚಿಸಿಲ್ಲ. ನೀವುಗಳು ನನಗೆ ಪ್ರತಿಬಾರಿಯೂ ಕಷ್ಟದ ಪ್ರಶ್ನೆಗಳನ್ನು ಕೇಳುವುದರಿಂದ ನನಗೆ ಉತ್ತರಿಸುವುದು ಕಷ್ಟವಾಗುತ್ತಿದೆ. ಸದ್ಯಕ್ಕೆ ನಾನು ಇಲ್ಲಿರುವುದೇ ನನಗೆ ಸಂತೋಷ ನೀಡಿದೆ. ಐಪಿಎಲ್ನಲ್ಲಿ ಕೆಕೆಆರ್ ಅದ್ಭುತ ಪ್ರಯಾಣವನ್ನು ಮಾಡಿದ್ದು, ಮೊದಲಿಗೆ ಅದನ್ನು ಆನಂದಿಸೋಣ.
ಒಂದು ತಂಡ ಕ್ರೀಡೆಯಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ. ಇದು ಆ ಸಂಸ್ಥೆಯ ಪಾಲಿಗೆ ಅತ್ಯಂತ ಪ್ರಮುಖ ಅಂಶವಾಗಿದ್ದು, ತಂಡದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಒಂದಿಲ್ಲೊಂದು ಪಾತ್ರವನ್ನು ನಿಭಾಯಿಸುವ ಮೂಲಕ ತನ್ನ ಕೊಡುಗೆಯನ್ನು ನೀಡುತ್ತಾನೆ. ಈ ರೀತಿ ಇದ್ದಲ್ಲಿ ತಂಡದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇರುವುದಿಲ್ಲ ಮತ್ತು ಎಲ್ಲರನ್ನೂ ಸಮಾನವಾಗಿ ಕಾಣಬಹುದಾಗಿದೆ ಎಂದು ಹೇಳಿದ್ದಾರೆ.
ಟೀಮ್ ಇಂಡಿಯಾ ಕೋಚ್ ಹುದ್ದೆ ಕೇಳಲಾದ ಪ್ರಶ್ನೆಗೆ ಇದು ತುಂಬಾ ಕಠಿಣವಾಗಿದ್ದು, ಉತ್ತರಿಸಲು ಕಷ್ಟವಾಗುತ್ತಿದೆ ಎಂದು ಹೇಳುವ ಮೂಲಕ ಗೌತಮ್ ಗಂಭೀರ್ ಗೌಪ್ಯತೆಯನ್ನು ಕಾಪಾಡಿಕೊಂಡಿದ್ದಾರೆ. ಟಿ20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ಕೋಚ್ ಯಾರಾಗಲಿದ್ದಾರೆ ಎಂಬ ಅಂತಿಮ ಚಿತ್ರಣ ಹೊರಬೀಳಲಿದೆ.