

ಹೈದರಾಬಾದ್: ಕೆಲವೊಮ್ಮೆ ಆಗಸದಲ್ಲಿ ಭಾರತ ಹಾಗೂ ಕರ್ನಾಟಕ ಭೂಪಟ ಮಾದರಿಯ ಮೋಡಗಳ ಚಿತ್ತಾರ ನೋಡಿ ಅಚ್ಚರಿಪಟ್ಟಿದ್ದೇವೆ. ಗಣಪತಿ, ಕೃಷ್ಣನ ಆಕಾರವೂ ಕಂಡಿದ್ದುಂಟು. ಇವು ಅಚ್ಚರಿಯೆನಿಸಿದರು ಖುಷಿ ಸಂಗತಿಯೂ ಹೌದು.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಇಂಥದ್ದೇ ಒಂದು ಪ್ರಕೃತಿ ವಿಷ್ಮಯ ಬಹಳ ಸದ್ದು ಮಾಡುತ್ತಿದೆ. ತಿರುಪತಿ ವೆಂಕಟೇಶ್ವರ ಭಕ್ತರ ಪಾಲಿಗಂತೂ ಇದು ಖುಷಿಯ ವಿಚಾರವೇ ಸರಿ. ಅಸಂಖ್ಯಾತ ಭಕ್ತರ ಆರಾದ್ಯ ದೈವ ವೆಂಕಟೇಶ್ವರ ನೆಲೆಸಿರುವ ತಿರುಮಲ ಬೆಟ್ಟವು ಥೇಟ್ ತಿರುಪತಿ ತಿಮ್ಮಪ್ಪನ ಮುಖದ ಮಾದರಿಯಲ್ಲೇ ಇರುವುದು ತುಂಬಾ ಅಚ್ಚರಿಗೊಳಿಸಿದೆ.
ವೆಂಕಟೇಶ್ವರ ಮಲಗಿರುವ ಭಂಗಿಯಲ್ಲಿರುವ ಒಂದು ಫೋಟೋ ಹಾಗೂ ತಿರುಮಲ ಬೆಟ್ಟದ ಮತ್ತೊಂದು ಫೋಟೋವನ್ನು ಒಟ್ಟಿಗೆ ಸೇರಿಸಿ ಎರಡು ಸಾಮ್ಯತೆಯನ್ನು ಭಕ್ತರೊಬ್ಬರು ಗುರುತಿಸಿದ್ದಾರೆ. ಈ ಫೋಟೋ ಇದೀಗ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು ಈ ಫೋಟೋ ಹೊಸದೇನಲ್ಲ. ಈ ಹಿಂದೆಯೇ ಜಾಲತಾಣದಲ್ಲಿ ಹರಿದಾಡಿತ್ತು. ಆದರೆ, ಇದೀಗ ಮತ್ತೊಮ್ಮೆ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ರಘು ಹೆಸರಿನ ಟ್ವಿಟರ್ ಬಳಕೆದಾರರು ನಿನ್ನೆಯಷ್ಟೇ ಶೇರ್ ಮಾಡಿಕೊಂಡಿದ್ದು, ಭಗವಾನ್ ವಿಷ್ಣು, ದೈವ ಸ್ವರೂಪ ತಿರುಮಲ ಬೆಟ್ಟದ ರೂಪದಲ್ಲಿದ್ದಾನೆ. ನಿಜಕ್ಕೂ ಇದನ್ನು ನಂಬಲಾಗುತ್ತಿಲ್ಲ ಎಂದು ಅಡಿಬರಹ ಬರೆದುಕೊಂಡಿದ್ದಾರೆ.
ಸದ್ಯ ಫೋಟೋ ಮತ್ತೆ ವೈರಲ್ ಆಗಿದ್ದು, ಸಾವಿರಕ್ಕೂ ಹೆಚ್ಚು ರೀಟ್ವೀಟ್, 5 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ. ನೂರಾರು ನೆಟ್ಟಿಗರು ಫೋಟೋ ಕುರಿತು ಅಚ್ಚರಿಯನ್ನು ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್)