ಆಫ್ರಿಕಾ : ಪೂರ್ವ ಆಫ್ರಿಕಾದ ದರ್ ಎಸ್ ಸಲಾಂನ ತಾಂಜೇನಿಯದಲ್ಲಿ ನಡೆದ ಕಾವೇರಿ ಕನ್ನಡ ಸಂಘದ ಬೆಳ್ಳಿಹಬ್ಬ ಮಹೋತ್ಸವದಲ್ಲಿ ವರನಟ ಡಾ.ರಾಜಕುಮಾರ್ ಬಗ್ಗೆ ಪತ್ರಕರ್ತ ಮಂಜುನಾಥ್ ಚವಾಣ್ ಬರೆದಿರುವ ನಾದಯೋಗಿ ಕೃತಿಯ ಮುಖಪುಟವು ಇತ್ತೀಚೆಗೆ ಬಿಡುಗಡೆಯಾಯಿತು.
ನಾದಯೋಗಿ ಕೃತಿಯ ಮುಖಪುಟವನ್ನು ಕಾವೇರಿ ಕನ್ನಡ ಸಂಘದ ಅಧ್ಯಕ್ಷ ವಿಠ್ಠಲ ಮಲಗೊಂಡ ಬಿಡುಗಡೆ ಮಾಡಿದರು. ಭಾರತೀಯ ಹೈ ಕಮಿಷನ್ ದ್ವಿತೀಯ ಕಾರ್ಯದರ್ಶಿ ಡಾ.ಸೌಮ್ಯ ಮತ್ತಿತರರು ಉಪಸ್ಥಿತರಿದ್ದರು.
ಚವಾಣ್ ಅವರು ಡಾ.ರಾಜ್ ಕುಟುಂಬದ ಆಪ್ತ ವಲಯದವರಾಗಿದ್ದು ತಮ್ಮ ಅನುಭವಗಳನ್ನು ಈ ಪುಸ್ತಕದ ಮೂಲಕ ಅನಾವರಣಗೊಳಿಸಿದ್ದಾರೆ. ಡಾ.ರಾಜ್ ಅಪ್ರತಿಮ ನಟ, ಗಾಯಕ ಜೊತೆಗೆ ಅಪೂರ್ವ ಸಂಗೀತಜ್ಞ ಕೂಡ. ರಂಗ ಭೂಮಿಯಲ್ಲಿ ತಾವು ಕಲಿತ ಕರ್ನಾಟಿಕ್ ಸಂಗೀತದ ಜೊತೆಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಪ್ರಕಾರಗಳನ್ನು ಕಲಿತು ಕಲಾ ಪ್ರೇಮಿಗಳ ಮನ ಮಂದಿರದಲ್ಲಿ ನೆಲೆ ಮಾಡಿದ ನಾದ ಯೋಗಿ. ಕುಂಡಲಿನಿ ಯೋಗದ ಅತೀ ಉತ್ತಮ ಸಾಧಕರಾದ ರಾಜ್ ಅವರ ವ್ಯಕ್ತಿತ್ವ ವರ್ಣನಾತೀತ.
ರಾಜಕುಮಾರ್ ಸಂಗೀತ ಯಾನದ ಕುರಿತಾದ ಸಂದರ್ಶನ , ಒಡನಾಟಗಳನ್ನು ಈ ಪುಸ್ತಕದಲ್ಲಿ ದಾಖಲಿಸಲಾಗಿದ್ದು, ಇದೊಂದು ವಿಭಿನ್ನ ಪ್ರಯೋಗ ಹಾಗೇ ಸಂಗ್ರಹ ಯೋಗ್ಯ ಕೃತಿಯಾಗಿದೆ.