

ಬೆಂಗಳೂರು: ಒಂದು ದಶಕ ಪೂರೈಸಿದ ಸಕಾಲ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಮುಂದಾಗಿರುವ ಸರ್ಕಾರ, ಜನರಿಗೆ ತತ್ಕಾಲ್ ಸೇವೆ ನೀಡಲು ಬಯಸಿದೆ. ಅರ್ಥಾತ್, ಸರ್ಕಾರ ತನ್ನ ಸೇವೆ ನೀಡಲು ನಿಗದಿಪಡಿಸಿಕೊಂಡ ಕಾಲಮಿತಿಯನ್ನು ತತ್ಕಾಲ್ ಅಡಿಯಲ್ಲಿ ಬಂದರೆ ಕಡಿತಗೊಳಿಸಲು ಉದ್ದೇಶಿಸಿದೆ. ಏಳು ದಿನದಲ್ಲಿ ಸಿಗುವ ಸೇವೆಯಲ್ಲಿ 3-4 ದಿನಕ್ಕೆ ಮಿತಿ ಹಾಕುವ ಗುರಿ ಇದೆ.
ಸೋಮವಾರ ವಿಧಾನಸೌಧದಲ್ಲಿ ಸಕಾಲ ದಶಮಾನೋತ್ಸವ ಕಾರ್ಯಕ್ರಮದಲ್ಲಿ ನವೀಕೃತ ಸಕಾಲ ವೆಬ್ಸೈಟ್ ಲೋಕಾರ್ಪಣೆಗೊಳಿಸಿ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ರಾಜ್ಯ ಸರ್ಕಾರದ 99 ಇಲಾಖೆಗಳ 1,115 ಸೇವೆಗಳು ಸಕಾಲ ಸೇವೆಯಲ್ಲಿ ಲಭ್ಯ ಇವೆ. ವಿವಿಧ ಇಲಾಖೆಗಳ ಒಂದೊಂದು ಸೇವೆಗೆ ಒಂದೊಂದು ಕಾಲ ಮಿತಿ ನಿಗದಿಪಡಿಸಲಾಗಿದೆ. ಅರ್ಜಿಗಳು ಕಾಲಮಿತಿಯಲ್ಲಿ ವಿಲೇವಾರಿ ಆಗುತ್ತಿವೆ. ಕೆಲವು ಸಂದರ್ಭಗಳಲ್ಲಿ ಅರ್ಜಿದಾರರಿಗೆ ತುರ್ತಾಗಿ 1-2 ದಿನಗಳಲ್ಲಿ ದಾಖಲೆಗಳು, ಪ್ರಮಾಣಪತ್ರಗಳು ಬೇಕಾಗುತ್ತವೆ. ಅಂತಹ ಅರ್ಜಿಗಳನ್ನು ತ್ವರಿತವಾಗಿ ಸೇವೆ ಒದಗಿಸಲು ತತ್ಕಾಲ್ ಸೇವೆಯನ್ನು ಜಾರಿಗೆ ತರುವ ಉದ್ದೇಶವಿದೆ. ಈ ಕುರಿತು ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗುವುದು ಎಂದರು.
ಯೋಜನೆ ಆರಂಭವಾದ 2012ರ ಏಪ್ರಿಲ್ 2ರಿಂದ ಈ ವರ್ಷದ ಫೆಬ್ರವರಿ 28ರವರೆಗೆ 26.56 ಕೋಟಿ ಅರ್ಜಿಗಳು ಸ್ವೀಕೃತವಾಗಿದ್ದು, 26.41 ಕೋಟಿ ಅರ್ಜಿಗಳು ವಿಲೇವಾರಿಗೊಂಡಿವೆ. ಎಷ್ಟು ಅರ್ಜಿ ವಿಲೇವಾರಿಯಾಗಿದೆ ಎಂಬುದಕ್ಕಿಂತ ಅರ್ಜಿ ಸಲ್ಲಿಸಿದವರ ಉದ್ದೇಶ ಈಡೇರಿದೆಯೇ ಎಂಬುದು ಮುಖ್ಯ. ಈ ಬಗ್ಗೆ ತಿಳಿದುಕೊಳ್ಳಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ವಿವರಿಸಿದರು. ಸಕಾಲ ಸೇವೆಯಡಿ ಕಾಲಮಿತಿಯಲ್ಲಿ ಸೇವೆ ಒದಗಿಸದ ಅಧಿಕಾರಿ ಅಥವಾ ಸಿಬ್ಬಂದಿಗೆ ದಂಡ ವಿಧಿಸಲು ಅವಕಾಶ ಇದೆ. ಆದರೆ ಅದು ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ. ಈ ವಿಚಾರದಲ್ಲಿ ಅಧಿಕಾರಿಗಳು ಗಮನ ಹರಿಸಬೇಕಿದೆ ಎಂದು ಸಚಿವರು ಅಭಿಪ್ರಾಯಪಟ್ಟರು. ಸರ್ಕಾರಿ ಸೇವೆಗಳನ್ನು ಒದಗಿಸುವುದರಲ್ಲಿ ಪಾರದರ್ಶಕತೆ, ಬದ್ಧತೆ ಮತ್ತು ಜವಾಬ್ದಾರಿ ಇರಬೇಕು. ಕಾಲಮಿತಿಯಲ್ಲಿ ಸೇವೆ ಒದಗಿಸಬೇಕು. ಇಲ್ಲದಿದ್ದರೆ ಅದಕ್ಕೆ ಕಾರಣವನ್ನು ತಿಳಿಸುವ ವ್ಯವಸ್ಥೆ ಜಾರಿಗೆ ತರಬೇಕು ಎನ್ನುವ ಉದ್ದೇಶವಿದೆ. ಮುಂದಿನ ದಿನಗಳಲ್ಲಿ ಅದನ್ನು ಜಾರಿಗೆ ತರುವ ಬಗ್ಗೆಯು ರ್ಚಚಿಸಲಾಗುವುದು ಎಂದರು. ಸಕಾಲ ಸೇವೆಗಳ ಕುರಿತು ಪೋಸ್ಟರ್ ಬಿಡುಗಡೆ ಮಾಡಲಾಯಿತು. ಸಕಾಲ ಸೇವೆಗಳ ಜಾರಿಯಲ್ಲಿ ಉತ್ತಮ ಸಾಧನೆ ಮಾಡಿ ಮೊದಲ 3 ಸ್ಥಾನಗಳಲ್ಲಿರುವ ಜಿಲ್ಲೆಗಳ ಡಿಸಿಗಳು, ಅಧಿಕಾರಿಗಳಿಗೆ ಪ್ರಶಂಸನಾ ಪತ್ರಗಳನ್ನು ವಿತರಿಸಲಾಯಿತು.
ಸಕಾಲ ಎರಡು- ಮೂರನೇ ಹಂತದ ಜನರನ್ನು ಪರಿಚಯಿಸುತ್ತಿದ್ದು, ಎಂಡ್ ಟು ಎಂಡ್ ಆನ್ಲೈನ್ ವ್ಯವಸ್ಥೆಗೆ ಬರುತ್ತಿದೆ. ಆಡಳಿತ ಯಂತ್ರದಲ್ಲಿನ ದುರುಪಯೋಗ ತಡೆಯಲು ಇದರಿಂದ ಸಾಧ್ಯ. | ರವಿಕುಮಾರ್ ಮುಖ್ಯಕಾರ್ಯದರ್ಶಿ ಸಕಾಲ ಹ್ಯಾಪಿನೆಸ್ ಇಂಡೆಕ್ಸ್ ವ್ಯವಸ್ಥೆ ರೂಪಿಸಿದ್ದು, ಶೇ.97 ಮಂದಿ ತೃಪ್ತಿ ವ್ಯಕ್ತಪಡಿದಿದ್ದಾರೆ. ಮುಂದಿನ ದಿನಗಳಲ್ಲಿ ಸಕಾಲ ಟಾಸ್ಕ್ ಯೋಜನೆಯನ್ನು ಜಾರಿಗೆ ತರಲಾಗುವುದು | ಪೊನ್ನುರಾಜ್ ಸಕಾಲ ಮಿಷನ್ ನಿರ್ದೇಶಕ ಸಕಾಲ ನಮ್ಮ ಸರ್ಕಾರದ ಫ್ಲಾಗ್ ಶಿಪ್ ಕಾರ್ಯಕ್ರಮ. ಆಡಳಿತ ನಿರ್ವಹಣೆಯಲ್ಲಿ ಬೈಪಾಸ್ ಆಗಬಾರದು, ಅದೇನಿದ್ದರೂ ಜಯದೇವ ಆಸ್ಪತ್ರೆಯಲ್ಲಿರಬೇಕು, ಮಧ್ಯವರ್ತಿ ಹಾವಳಿ ತಡೆಯಲು ತರಲಾದ ಯೋಜನೆ ಇದು. | ಸುರೇಶ್ ಕುಮಾರ್ ಮಾಜಿ ಸಚಿವ ದಶಮಾನೋತ್ಸವ ಅಂಗವಾಗಿ ವಿವಿಧ ಇಲಾಖೆಗಳಿಂದ ಪ್ರಬಂಧ, ಚಿತ್ರಕಲೆ, ಚರ್ಚಾಸ್ಪರ್ಧೆ ಹಾಗೂ ಇನ್ನಿತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು. ಸಾರ್ವಜನಿಕರ ಸಹಭಾಗಿತ್ವವನ್ನು ತೋರಿಸಲು ಸಾಮಾಜಿಕ ಜಾಲತಾಣದಲ್ಲಿ ವಿವಿಧ ಸ್ಪರ್ಧೆ ನಡೆಸಲಾಗುವುದು. | ಬಿ.ಆರ್.ಮಮತಾ ಸಕಾಲ ಅಪರ ಮಿಷನ್ ನಿರ್ದೇಶಕಿ