ಮಸೀದಿಗಳಲ್ಲಿನ ಮೈಕ್​ ವಿರುದ್ಧ ಶ್ರೀರಾಮಸೇನೆ ಗುಡುಗು; ನಿರ್ಬಂಧಿಸದಿದ್ದರೆ ದೇವಸ್ಥಾನಗಳಲ್ಲಿ ಮೈಕ್​ ಹಾಕಿ ಭಜನೆ..

19KWR-Pramod Mutalik
Published on

ಧಾರವಾಡ: ಮುಂಬೈನಲ್ಲಿ ಮಸೀದಿಗಳಲ್ಲಿನ ಲೌಡ್ ಸ್ಪೀಕರ್​ ತೆಗೆಸುವಂತೆ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್​ಎಸ್​) ಮುಖ್ಯಸ್ಥ ರಾಜ್​ ಠಾಕ್ರೆ ಸವಾಲೆಸೆದ ಬೆನ್ನಿಗೇ ಕರ್ನಾಟಕದಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕೂಡ ಮಸೀದಿಗಳಲ್ಲಿನ ಲೌಡ್​ ಸ್ಪೀಕರ್ ವಿರುದ್ಧ ಗುಡುಗಿದ್ದಾರೆ.

ಸರ್ಕಾರವು ಮುಂಬೈನ ಮಸೀದಿಗಳಲ್ಲಿನ ಲೌಡ್ ಸ್ಪೀಕರ್ ತೆಗೆಸುವ ನಿರ್ಧಾರ ತೆಗೆದುಕೊಳ್ಳಬೇಕು. ನಾನು ಪ್ರಾರ್ಥನೆಗೆ ವಿರೋಧಿಯಲ್ಲ, ಆದರೆ ಮಸೀದಿಯಲ್ಲಿ ಲೌಡ್ ಸ್ಪೀಕರ್ ಹಾಕಬಾರದು. ಒಂದು ವೇಳೆ ಸರ್ಕಾರ ಮಸೀದಿಗಳಲ್ಲಿನ ಲೌಡ್​ ಸ್ಪೀಕರ್​ ತೆಗೆಸದಿದ್ದರೆ ಮಸೀದಿ ಮುಂದೆ ಲೌಡ್​ಸ್ಪೀಕರ್​ ಹಾಕಿ ಹನುಮಾನ್ ಚಾಲೀಸ ಬಿತ್ತರಿಸುವುದಾಗಿ ರಾಜ್ ಠಾಕ್ರೆ ಮೊನ್ನೆಯಷ್ಟೇ ಎಚ್ಚರಿಕೆ ನೀಡಿದ್ದರು.

ಇದೀಗ ಕರ್ನಾಟಕದಲ್ಲೂ ಮಸೀದಿಗಳಲ್ಲಿನ ಧ್ವನಿವರ್ಧಕ ನಿರ್ಬಂಧಕ್ಕೆ ಆಗ್ರಹಿಸಿ ಅಭಿಯಾನ ನಡೆಸಲು ಶ್ರೀರಾಮಸೇನೆ ಮುಂದಾಗಿದೆ. ಮಸೀದಿಗಳಲ್ಲಿನ ಮೈಕ್​ ತೆಗೆಸುವ ಕುರಿತಂತೆ ಏಪ್ರಿಲ್ 13ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಇಂದು ಧಾರವಾಡದಲ್ಲಿ ಹೇಳಿಕೆ ನೀಡಿದ್ದಾರೆ.

ಮೊದಲು ಮುಂಬೈಯಲ್ಲಿ ರಸ್ತೆಯಲ್ಲೂ ನಮಾಜ್ ಮಾಡುತ್ತಿದ್ದರು. ಆಗ ಬಾಳಾ ಠಾಕ್ರೆ ಒಂದು ಗುಡುಗು ಹಾಕಿದ್ರು, ಮಾತ್ರವಲ್ಲ ಅದರ ವಿರುದ್ಧ ರಸ್ತೆಯಲ್ಲೇ ಮಹಾ ಆರತಿ ಅಭಿಯಾನ ಮಾಡಿದ್ದರು. ಆಗ ರಸ್ತೆ ನಮಾಜ್ ನಿಂತು ಹೋಯಿತು. ಅದರಿಂದಾಗಿ ಮುಂಬೈಯಲ್ಲಿ ರಸ್ತೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದಲ್ಲಿ ನಮಾಜ್ ನಿಂತಿದೆ. ಅದೇ ಮಾದರಿಯಲ್ಲಿ ಈಗ ರಾಜ್ ಠಾಕ್ರೆ ಗುಡುಗು ಹಾಕಿದ್ದಾರೆ, ಅದು ಯೋಗ್ಯವಾಗಿಯೇ ಇದೆ ಎಂದು ಮುತಾಲಿಕ್ ಹೇಳಿದ್ದಾರೆ.

ಈ ಹಿಂದೆಯೂ ಮೈಕ್ ಬಗ್ಗೆ ಬಾಲಿವುಡ್ ಸಂಗೀತಗಾರರೊಬ್ಬರು ಧ್ವನಿ ಎತ್ತಿದ್ದರು. ಆಗ ಅವರಿಗೆ ಧಮ್ಕಿ ಬಂದಿತ್ತು. ಸರ್ಕಾರ, ಪೊಲೀಸರು, ಮುಸ್ಲಿಂ ಮುಖಂಡರ ಬೇಜಬ್ದಾರಿಯೇ ಇದಕ್ಕೆಲ್ಲ ಕಾರಣ ಎಂದಿರುವ ಮುತಾಲಿಕ್, ರಾಜ್ಯದಲ್ಲಿ ಮಸೀದಿಗಳಲ್ಲಿನ ಮೈಕ್ ನಿಲ್ಲುವವರೆಗೂ ನಮ್ಮ ಹೋರಾಟ ಮುಂದುವರಿಯತ್ತದೆ. ಹಿಂದು ಸಂಘಟಕರು, ಸ್ವಾಮೀಜಿಗಳು ಈ ಹೋರಾಟಕ್ಕೆ ಕೈ ಜೋಡಿಸಬೇಕು ಎಂದಿದ್ದಾರೆ.

ಪ್ರಾರ್ಥನೆಗೆ ನಮ್ಮ ವಿರೋಧವಿಲ್ಲ. ಆದರೆ ಮೈಕ್ ಹಾಕಿ ಪ್ರಾರ್ಥನೆ ಮಾಡುವುದಕ್ಕೆ ವಿರೋಧ ಇದೆ. ಮಂದಿರ, ಮಸೀದಿ, ಚರ್ಚ್ ಎಲ್ಲಿಯೂ ಮೈಕ್ ಬೇಡ. ಆ ಸಂಬಂಧ ಏ. 13ರಂದು ಜಿಲ್ಲಾಧಿಕಾರಿಗಳ ಕಚೇರಿಗಳ ಮುಂದೆ ಧರಣಿ ಮಾಡುತ್ತೇವೆ. ಆ ಬಳಿಕವೂ ಮೈಕ್ ನಿಲ್ಲದೇ ಹೋದಲ್ಲಿ ನಾವೂ ಮೈಕ್ ಅಭಿಯಾನ ಮಾಡುತ್ತೇವೆ. ಸರ್ಕಾರಕ್ಕೆ 15 ದಿನಗಳ ಗಡುವು ಕೊಡುತ್ತೇವೆ. ಅಷ್ಟರಲ್ಲಿ ಮೈಕ್ ಮೇಲೆ ನಿರ್ಬಂಧ ಹೇರದಿದ್ದರೆ ಎಲ್ಲ ಮಠ-ಮಂದಿರಗಳಲ್ಲಿ ಮೈಕ್ ಹಾಕಿ ಭಜನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಹಿಂದೆ ದೇವಸ್ಥಾನಗಳ ಗಂಟೆಗೂ ಆಕ್ಷೇಪ ಬಂದಿತ್ತು. ಪೂಜೆ ಸಮಯದಲ್ಲಿ ಮಾತ್ರ ಗಂಟೆ ಬಾರಿಸಲಾಗುತ್ತದೆ. ಗಂಟೆ ವೈಜ್ಞಾನಿಕವಾಗಿದೆ, ಅದರಿಂದ ಪಾಸಿಟಿವ್ ಎನರ್ಜಿ ಕ್ರಿಯೇಟ್​ ಆಗುತ್ತದೆ. ದೇವಸ್ಥಾನದ ಪೂಜೆ, ಗಂಟೆಯಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂದು ಪ್ರಮೋದ್ ಮುತಾಲಿಕ್ ಪ್ರತಿಪಾದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net