ಕಂಗನಾ-ಮಾಧವನ್ ಹೊಸ ಚಿತ್ರದ ಸೆಟ್​ಗೆ ರಜನಿಕಾಂತ್​ ಭೇಟಿ!; ಅತಿಥಿ ಪಾತ್ರದಲ್ಲಿ 'ತಲೈವಾ'?

Untitled design (98)
Published on

ಚೆನ್ನೈ, ತಮಿಳುನಾಡು: ಬಾಲಿವುಡ್ ಬೆಡಗಿ, ನಟಿ ಕಂಗನಾ ರಣಾವತ್​ ಅಭಿನಯದ 'ತೇಜಸ್'​ ಸಿನಿಮಾ ಇತ್ತೀಚೆಗಷ್ಟೇ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಬಾಕ್ಸ್​ ಆಫೀಸ್​ನಲ್ಲಿ ಭಾರೀ ಹಿನ್ನಡೆಯನ್ನು ಅನುಭವಿಸಿತು. ಈ ಚಿತ್ರವು ಉತ್ತಮ ಪ್ರದರ್ಶನ ಕಾಣದೆ ಹೋಗಿದ್ದು, ನಟಿಗೆ ತೀವ್ರ ಬೇಸರ ತಂದಿತು. ಇದೀಗ ಮತ್ತೊಂದು ಹೊಸ ಚಿತ್ರದ ಚಿತ್ರೀಕರಣದಲ್ಲಿ ತೊಡಗಿರುವ ಕಂಗನಾಗೆ ತಮಿಳು ಚಿತ್ರರಂಗದ ಸೂಪರ್​ಸ್ಟಾರ್​ ರಜನಿಕಾಂತ್​ ತಮ್ಮ ಚಿತ್ರೀಕರಣದ ಸೆಟ್​ಗೆ ಕೊಟ್ಟ ದಿಢೀರ್​ ಭೇಟಿ ಕಂಡು ಭಾರೀ ಅಚ್ಚರಿಗೊಂಡಿದ್ದಾರೆ.

ಸುಮಾರು 8 ವರ್ಷಗಳ ಬಳಿಕ ಮತ್ತೊಮ್ಮೆ ತೆರೆ ಮೇಲೆ ಒಟ್ಟಾಗಿ ನಟಿಸುತ್ತಿರುವ ಬಾಲಿವುಡ್​ನ ತಾರೆಯರಾದ ಆರ್​. ಮಾಧವನ್​ ಮತ್ತು ಕಂಗನಾ ರಣಾವತ್ ​ರೋಮಾಂಚಕಾರಿ ಸ್ಕ್ರಿಪ್ಟ್​​ನ ಒಳಗೊಂಡ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಈ ಸಿನಿಮಾ ಸೈಕಲಾಜಿಕಲ್ ಥ್ರಿಲ್ಲರ್ ಎಂದು ಹೇಳಲಾಗಿದೆ. ಇಂದು ಚೆನ್ನೈನಲ್ಲಿ ಪೂಜಾ ಕಾರ್ಯಕ್ರಮದ ನಂತರ ಚಿತ್ರೀಕರಣ ಪ್ರಾರಂಭವಾಗಿದೆ. ಈ ವೇಳೆಗೆ ರಜನಿಕಾಂತ್ ಚಿತ್ರದ ಸೆಟ್‌ಗಳಿಗೆ ದಿಢೀರ್ ಭೇಟಿ ನೀಡಿ ತಂಡಕ್ಕೆ ಶುಭಕೋರಿದ್ದಾರೆ.

ರಜನಿಕಾಂತ್ ಅವರ ಅನಿರೀಕ್ಷಿತ ಭೇಟಿಯಿಂದ ಆಶ್ಚರ್ಯಚಕಿತರಾದ ನಟಿ ಕಂಗನಾ, ತಲೈವಾ ಅವರನ್ನು ಭಾರತೀಯ ಚಿತ್ರರಂಗದ ದೇವರು ಎಂದು ಕೊಂಡಾಡಿದ್ದಾರೆ. ಟ್ರೈಡೆಂಟ್ ಫಿಲಂಸ್ ಮತ್ತು ಅಹಿಂಸಾ ಎಂಟರ್‌ಟೈನ್‌ಮೆಂಟ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಲಿದ್ದು, ಈ ಸಿನಿಮಾಗೆ ಇನ್ನೂ ಹೆಸರಿಟ್ಟಿಲ್ಲ. ಚಿತ್ರವನ್ನು 'ತಲೈವಿ' ಖ್ಯಾತಿಯ ನಿರ್ದೇಶಕ ವಿಜಯ್ ನಿರ್ದೇಶಿಸಲಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net