

ನವದೆಹಲಿ: ಪ್ಯಾರಾ ಅಥ್ಲೀಟ್ ನೀರಜ್ ಯಾದವ್ ಉದ್ದೀಪನ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಇದರಿಂದಾಗಿ ಇತ್ತೀಚೆಗೆ ಹಾಂಗ್ಝೌ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಅವರು ಗೆದ್ದಿದ್ದ ಅವಳಿ ಚಿನ್ನದ ಪದಕ ಕೈತಪ್ಪುವ ಭೀತಿ ಎದುರಾಗಿದೆ. ಇದರಿಂದಾಗಿ ಭಾರತ ತಂಡ ಕೂಡ ಕ್ರೀಡಾಕೂಟದ ಪದಕಪಟ್ಟಿಯಲ್ಲಿ ಒಂದು ಸ್ಥಾನ ಕುಸಿತ ಕಾಣುವ ಅಪಾಯದಲ್ಲಿದೆ.
ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕ (ನಾಡಾ) ಹಾಂಗ್ರೆೌಗೆ ಪ್ರಯಾಣಿಸುವುದಕ್ಕೆ 6 ದಿನ ಮುನ್ನ ಬೆಂಗಳೂರಿನಲ್ಲಿ ನಡೆಸಿದ "ಸ್ಪರ್ಧೆ ಹೊರತಾದ' ಉದ್ದೀಪನ ಪರೀೆಯಲ್ಲಿ ನೀರಜ್ ಯಾದವ್ ವಿಫಲರಾಗಿದ್ದಾರೆ. ಅವರ ಸ್ಯಾಂಪಲ್ನಲ್ಲಿ ಅನಬೋಲಿಕ್ ಸ್ಟೀರಾಯ್ಡ್ ಪತ್ತೆಯಾಗಿದೆ. ಇದರಿಂದಾಗಿ ಅವರು, ಅಕ್ಟೋಬರ್ 22ರಿಂದ 28ರವರೆಗೆ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಗೆದ್ದಿದ್ದ ಅವಳಿ ಚಿನ್ನ ಕೈತಪ್ಪುವ ಸಾಧ್ಯತೆಗಳಿವೆ. ನೀರಜ್ ಯಾದವ್ ಜಾವೆಲಿನ್ ಎಸೆತದ ಎಫ್55 ಮತ್ತು ಡಿಸ್ಕಸ್ ಥ್ರೋ ಸ್ಪರ್ಧೆಗಳಲ್ಲಿ ಚಿನ್ನ ಗೆದ್ದಿದ್ದರು.
ಭಾರತ ತಂಡ ಕ್ರೀಡಾಕೂಟದಲ್ಲಿ 29 ಚಿನ್ನ, 31 ಬೆಳ್ಳಿ, 51 ಕಂಚಿನ ಸಹಿತ ಒಟ್ಟು 111 ಪದಕ ಗೆದ್ದು ಪದಕಪಟ್ಟಿಯಲ್ಲಿ 5ನೇ ಸ್ಥಾನ ಅಲಂಕರಿಸಿತ್ತು. ಆದರೆ 29ರಲ್ಲಿ 2 ಚಿನ್ನ ನಷ್ಟವಾದರೆ, ಭಾರತದ ಚಿನ್ನ ಗಳಿಕೆ 27ಕ್ಕಿಳಿಯಲಿದೆ. ಇದರಿಂದಾಗಿ 29 ಚಿನ್ನ, 30 ಬೆಳ್ಳಿ, 36 ಕಂಚು ಗೆದ್ದಿದ್ದ ಇಂಡೋನೇಷ್ಯಾ 5ನೇ ಸ್ಥಾನಕ್ಕೇರಲಿದ್ದು, ಭಾರತ 6ನೇ ಸ್ಥಾನಕ್ಕೆ ಕುಸಿಯಲಿದೆ.
39 ವರ್ಷದ ನೀರಜ್ ಹಾಂಗ್ರೆೌನಲ್ಲೂ 2 ಬಾರಿ ಉದ್ದೀಪನ ಪರೀಕ್ಷೆ ಎದುರಿಸಿದ್ದಾರೆ. ಅದರ ವರದಿ ಕ್ಲೀನ್ ಆಗಿದ್ದರೆ ನೀರಜ್ ಪದಕ ನಷ್ಟದಿಂದ ಬಚಾವ್ ಆಗುವ ಸಾಧ್ಯತೆಗಳೂ ಇವೆ ಎನ್ನಲಾಗಿದೆ. ಯಾಕೆಂದರೆ ನಾಡಾ ನಡೆಸಿರುವ ಉದ್ದೀಪನ ಪರೀಕ್ಷೆಯ ವೇಳೆ ಸ್ಯಾಂಪಲ್ ಅದಲುಬದಲಾಗಿರುವ ಸಾಧ್ಯತೆಗಳಿವೆ. ನೀರಜ್ ಜತೆ 6 ಕ್ರೀಡಾಪಟುಗಳನ್ನು ಜತೆಯಾಗಿ ಉದ್ದೀಪನ ಪರೀಕ್ಷೆಗೆ ಒಳಪಡಿಸಲಾಗಿತ್ತು ಎಂದು ಪ್ಯಾರಾ ಅಥ್ಲೆಟಿಕ್ಸ್ ಕೋಚ್ ಎಸ್. ಸತ್ಯನಾರಾಯಣ ತಿಳಿಸಿದ್ದಾರೆ. 7ನೇ ವಯಸ್ಸಿಗೆ ಪೋಲಿಯೊ ಪೀಡಿತರಾದ ಬಳಿಕ ಪಾರ್ಶ್ವವಾಯುವಿಗೆ ತುತ್ತಾಗಿರುವ ನೀರಜ್ ಈ ಮುನ್ನ 2005ರಿಂದ 2012ರವರೆಗೆ ವೀಲ್ಚೇರ್ ಟೆನಿಸ್ ಆಟಗಾರರಾಗಿದ್ದರು.