

ನವದೆಹಲಿ: ಟೀಮ್ ಇಂಡಿಯಾದ ದಿಗ್ಗಜ ಬ್ಯಾಟರ್ ರಾಹುಲ್ ದ್ರಾವಿಡ್ 1999&2003ರಲ್ಲಿ ಆಟಗಾರ ಮತ್ತು 2007ರಲ್ಲಿ ನಾಯಕನಾಗಿ ಸಾಧ್ಯವಾಗದ ಏಕದಿನ ವಿಶ್ವಕಪ್ ಗೆಲುವನ್ನು 2023ರಲ್ಲಿ ಕೋಚ್ ಆಗಿ ಸಾಧಿಸುವ ಸನಿಹದಲ್ಲಿದ್ದಾರೆ. ಆದರೆ, ಗ್ಯಾರಿ ಕರ್ಸ್ಟನ್ರಂತೆ (2011) ವಿಶ್ವಕಪ್ ಗೆಲುವಿನೊಂದಿಗೆ ಹುದ್ದೆಯಿಂದ ನಿರ್ಗಮಿಸುವರೇ ಅಥವಾ ವಿಶ್ವಕಪ್ ಫೈನಲ್ ಫಲಿತಾಂಶ ಏನೇ ಇದ್ದರೂ ತರಬೇತುದಾರನಾಗಿ ಮುಂದುವರಿಯುವರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವಿಶ್ವಕಪ್ ನಂತರವೂ ಹುದ್ದೆಯಲ್ಲಿ ಮುಂದುವರಿಯುವ ಅಥವಾ ಪದತ್ಯಾಗ ಮಾಡುವ ಕುರಿತು ದ್ರಾವಿಡ್ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎನ್ನಲಾಗುತ್ತಿದೆ.
2021ರ ನವೆಂಬರ್ನಲ್ಲಿ ಭಾರತ ತಂಡದ ಕೋಚ್ ಆಗಿ ಅಧಿಕಾರ ಸ್ವೀಕರಿಸಿದ್ದ ದ್ರಾವಿಡ್, ಹಿಂದಿನ 2 ಐಸಿಸಿ ಟೂರ್ನಿಗಳಲ್ಲಿ ನಿರಾಸೆ ಮೂಡಿಸಿದ್ದರು. 2022ರ ಟಿ20 ವಿಶ್ವಕಪ್ ಸೆಮಿಫೈನಲ್ ಮತ್ತು 2023ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲಿ ಭಾರತ ಎಡವಿತ್ತು. ಆದರೆ ತವರಿನ ವಿಶ್ವಕಪ್ನಲ್ಲಿ ಭಾರತ ಸಂಪೂರ್ಣ ಬದಲಾದ ತಂಡದಂತೆ ಪ್ರಾಬಲ್ಯ ಮೆರೆಯುತ್ತಿದೆ. ದ್ವಿಪಕ್ಷೀಯ ಸರಣಿಗಳ ಯಶಸ್ಸನ್ನು ಐಸಿಸಿ ಟೂರ್ನಿಯಲ್ಲೂ ಮರುಕಳಿಸಿದೆ. ಆದರೆ ದ್ರಾವಿಡ್ ಹುದ್ದೆಯಲ್ಲಿ ಮುಂದುವರಿಯುವುದು ಅಥವಾ ಹೊರನಡೆಯುವುದು ಈಗ ಅವರ ನಿರ್ಧಾರವನ್ನೇ ಅವಲಂಬಿಸಿದೆ ಎನ್ನಲಾಗಿದೆ.
ವಿಶ್ವಕಪ್ ಬೆನ್ನಲ್ಲೇ ನಡೆಯಲಿರುವ ಆಸೀಸ್ ವಿರುದ್ಧದ ಟಿ20 ಸರಣಿಯಲ್ಲಿ ಎನ್ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಹಂಗಾಮಿ ಕೋಚ್ ಆಗಿ ಕಾರ್ಯನಿರ್ವಹಿಸಿದ್ದು, ವರ್ಷಾಂತ್ಯದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಮುನ್ನ ದ್ರಾವಿಡ್ ಭವಿಷ್ಯದ ಬಗ್ಗೆ ಬಿಸಿಸಿಐ ಸ್ಪಷ್ಟ ಚಿತ್ರಣ ಕಂಡುಕೊಳ್ಳಬೇಕಾಗಿದೆ.
ಬಿಸಿಸಿಐ ಮನಗೆದ್ದ ವಿಶ್ವಕಪ್ ಯಶಸ್ಸು
ದ್ರಾವಿಡ್ ಮತ್ತು ಇತರ ತರಬೇತಿ ಸಿಬ್ಬಂದಿಯ ಗುತ್ತಿಗೆ ಅವಧಿ ಹಾಲಿ ವಿಶ್ವಕಪ್ಗೆ ಕೊನೆಗೊಳ್ಳಲಿದೆ. ವಿಶ್ವಕಪ್ ಶುರುವಾಗುವವರೆಗೂ ಬಿಸಿಸಿಐ ವಲಯದಲ್ಲಿ ದ್ರಾವಿಡ್ರನ್ನು ಮುಂದುವರಿಸುವ ಬಗ್ಗೆ ಒಲವು ಇರಲಿಲ್ಲ. ಯಾಕೆಂದರೆ ಅವರ ಕೋಚಿಂಗ್ ಸ್ಟೈಲ್ ಅವರಿಗೆ ಇಷ್ಟವಾಗಿರಲಿಲ್ಲ. ಆದರೆ ವಿಶ್ವಕಪ್ನಲ್ಲಿ ಭಾರತ ತಂಡದ ಪ್ರಾಬಲ್ಯವನ್ನು ಕಂಡ ಬಳಿಕ ಬಿಸಿಸಿಐ ಅಧಿಕಾರಿಗಳ ನಿರ್ಧಾರ ಬದಲಾಗಿದ್ದು, ಅವರನ್ನು ವಿಶ್ವಕಪ್ ನಂತರವೂ ಮುಂದುವರಿಸುವತ್ತ ಒಲವು ಮೂಡಿದೆ ಎನ್ನಲಾಗಿದೆ. ದ್ರಾವಿಡ್ ಹುದ್ದೆಯಲ್ಲಿ ಮುಂದುವರಿಯಲು ನಿರಾಕರಿಸಿದರೂ, ತಂಡದ ಇತರ ತರಬೇತಿ ಸಿಬ್ಬಂದಿಯನ್ನಾದರೂ ಉಳಿಸಿಕೊಳ್ಳಲು ಬಿಸಿಸಿಐ ಒಲವು ತೋರಿದೆ ಎನ್ನಲಾಗಿದೆ.