ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ಕಾನನದ ನಡುವಿನ ಸುಂದರ ರಮಣೀಯ ಪುಣ್ಯಭೂಮಿ ನಾಲ್ಕೂರು ಗ್ರಾಮದ ಕಜ್ಕೆಯಲ್ಲಿ ಶ್ರೀ ವಿಶ್ವಕರ್ಮ ಜಗದ್ಗುರು ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿ ನೇತೃತ್ವದಲ್ಲಿ ಮಹಾಮಾತೆ ಶ್ರೀ ಅನ್ನಪೂರ್ಣೇಶ್ವರಿಯ ಶಿಲಾಮಯ ದೇಗುಲ ನಿರ್ಮಾಣಗೊಳ್ಳುತ್ತಿದ್ದು ಫೆ.21ರಂದು ಸಕಲ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಲೋಕಾರ್ಪಣೆಗೊಳ್ಳಲಿದೆ.

ಅಯೋಧ್ಯೆಯ ಶಿಲ್ಪಿ ಅರುಣ್ ಯೋಗಿರಾಜ್ ಅವರಿಂದ ವಿಗ್ರಹ ಕೆತ್ತನೆ
ಆನಂದ ಆಚಾರ್ಯ ಸುರತ್ಕಲ್ ವಾಸ್ತುಶಿಲ್ಪಿಯಾಗಿ ದೇವಸ್ಥಾನದಲ್ಲಿ ಸೇವೆ ಸಲ್ಲಿಸಿದ್ದಾರೆ. ಶಿಲಾಶಿಲ್ಪಿಯಾಗಿ ಮೊಳಹಳ್ಳಿ ರಾಘವೇಂದ್ರ ಆಚಾರ್ಯ, ಕಾಷ್ಠಶಿಲ್ಪಿಯಾಗಿ ಶ್ರೀಧರ ಆಚಾರ್ಯ ತೊಡಗಿಸಿಕೊಂಡಿದ್ದಾರೆ. ಅಯೋಧ್ಯೆಯ ಶ್ರೀರಾಮ ದೇವರ ಮೂರ್ತಿ ರಚಿಸಿದ ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್ ಮಹಾಮಾತೆ ಶ್ರೀ ಅನ್ನಪೂರ್ಣೇಶ್ವರಿಯ ಶಿಲಾ ವಿಗ್ರಹ ರಚಿಸಿದ್ದಾರೆ. ಶ್ರೀಗಣಪತಿ ದೇವರ ವಿಗ್ರಹವನ್ನು ಪ್ರಕಾಶ ಆಚಾರ್ಯ ಮೈಸೂರು ಮತ್ತು ಆದಿಶಂಕರಾಚಾರ್ಯರ ವಿಗ್ರಹವನ್ನು ಅತ್ತೂರಿನ ರಾಮಚಂದ್ರ ಆಚಾರ್ಯ ಕೆತ್ತಿದ್ದಾರೆ.
ಆದಿಶಂಕರರು ಭಿಕ್ಷೆ ಪಡೆದ ಸ್ಥಳ
ಆದಿಶಂಕರಾಚಾರ್ಯರು ಕಾಲ್ನಡಿಗೆಯಲ್ಲಿ ಕೇರಳದಿಂದ ಕೊಲ್ಲೂರಿಗೆ ಸಂಚರಿಸುವಾಗ ಮಧ್ಯಾಹ್ನದ ಹೊತ್ತು ಅರಣ್ಯದಿಂದ ಸುತ್ತುವರಿದಿರುವ ಇಲ್ಲಿ ಭಿಕ್ಷೆ ಪಡೆದಿದ್ದರು. ಸಹಸ್ರಾರು ವರ್ಷಗಳಿಂದ ಸಾನ್ನಿಧ್ಯ ಸುಪ್ತವಾಗಿದ್ದು ಜಾಗವು ಖಾಸಗಿಯವರಲ್ಲಿ ಇತ್ತು. ಇದೀಗ ಕಜ್ಕೆಯವರಾದ ಕೃಷ್ಣಯ್ಯ ಶೆಟ್ಟಿ ಮತ್ತು ಶ್ರೀಧರ ಕಾಮತ್ ಎಂಬುವರು ದೇವಸ್ಥಾನ ನಿರ್ಮಾಣಕ್ಕೆ 2 ಎಕರೆ ಜಾಗ ದಾನವಾಗಿ ನೀಡಿದ್ದಾರೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮದ ಕಜ್ಕೆಯಲ್ಲಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಸುಂದರ ಭವ್ಯ ದೇವಸ್ಥಾನ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಶ್ರೀ ವಿಶ್ವಕರ್ಮ ಜಗದ್ಗುರು ಸುಜ್ಞಾನಪ್ರಭು ಪೀಠ, ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠ ಅರೆಮಾದನಹಳ್ಳಿಯ ಶಾಖಾ ಮಠವು ಕಜ್ಕೆಯಲ್ಲಿ ನಿರ್ಮಾಣಗೊಂಡಿದ್ದು, ಶ್ರೀವಿಶ್ವಕರ್ಮ ಜಗದ್ಗುರು ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಭಕ್ತರನ್ನು ಹರಸುತ್ತಿದ್ದಾರೆ. ಶ್ರೀಮಠದ ಪಕ್ಕದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ಜತೆಗೆ ಶ್ರೀ ಗಣಪತಿ ದೇವರು, ಆದಿಶಂಕರಾಚಾರ್ಯರ ಶಿಲಾ ಬಿಂಬ ಪ್ರತಿಷ್ಠಾಪನೆ ಹಾಗೂ ನಾಗದೇವರ ಸನ್ನಿಧಿಯ ಪ್ರತಿಷ್ಠಾಪನೆ ನೆರವೇರಲಿದೆ.
ಫೆ.13ರಿಂದ ಆರಂಭಗೊಂಡು 21ರ ತನಕ ಶಿಲಾ ಬಿಂಬ ಪ್ರತಿಷ್ಠಾಪನೆ ಮತ್ತು ಮಹಾ ಕುಂಭಾಭಿಷೇಕ ನಡೆಯಲಿದೆ. ಶ್ರೀ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪಡುಕುತ್ಯಾರು ಇಲ್ಲಿನ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಸಹಿತ ನಾಡಿನ ವಿವಿಧ ಗುರುಗಳು, ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು, ಸಮಾಜದ ಗಣ್ಯರು ಪುಣ್ಯಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಅಧ್ಯಕ್ಷತೆಯ ದೇವಸ್ಥಾನ ನಿರ್ಮಾಣ ಸಮಿತಿ ಮತ್ತು ಮಹಾಕುಂಭಾಭಿಷೇಕ ಸಮಿತಿಯ ಜತೆಗೆ, ಕಾರ್ಯಾಧ್ಯಕ್ಷರು, ಸ್ವಾಗತ ಸಮಿತಿ, ಸಮಿತಿಗಳ ಪದಾಧಿಕಾರಿಗಳು, ವಿವಿಧ ಉಪಸಮಿತಿಗಳ ಪ್ರಮುಖರು, ಸಂಘ-ಸಂಸ್ಥೆಗಳ ಸದಸ್ಯರು ಸೇರಿ ಎಲ್ಲರೂ ಶ್ರಮಿಸುತ್ತಿದ್ದಾರೆ.
ಅಂದು ಆದಿಶಂಕರಾಚಾರ್ಯರು ಕಾಲಿಟ್ಟ ಕಜ್ಕೆ ಈಗ ಶ್ರೀ ಅನ್ನಪೂರ್ಣೇಶ್ವರಿಯ ಪುಣ್ಯ ಕ್ಷೇತ್ರವಾಗಿದೆ. ಸಹಸ್ರಾರು ವರ್ಷಗಳಿಂದ ಭೂಗತವಾಗಿದ್ದ ಕ್ಷೇತ್ರಕ್ಕೆ ಮರುಚೈತನ್ಯ ನೀಡುವ ಸುಯೋಗ ನನ್ನ ಪಾಲಿಗೆ ಒದಗಿ ಬಂದಿದೆ. ಕಜ್ಕೆಯ ಕೃಷ್ಣಯ್ಯ ಶೆಟ್ಟಿ ಮತ್ತು ಶ್ರೀಧರ ಕಾಮತ್ ಜಮೀನು ದಾನ ನೀಡಿದ್ದಾರೆ. ಭಕ್ತಾದಿಗಳ ಸಹಕಾರದಿಂದ ಭವ್ಯ ದೇಗುಲ ನಿರ್ಮಾಣಗೊಂಡಿದೆ. ಎಲ್ಲ ಕಾರ್ಯವು ಸುಗಮವಾಗಿ ನಡೆಯುತ್ತಿರುವುದನ್ನು ಕಂಡು ಸಂತಸವಾಗಿದೆ.
-ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿ
ಶ್ರೀ ವಿಶ್ವಕರ್ಮ ಜಗದ್ಗುರು ಸುಜ್ಞಾನಪ್ರಭು ಪೀಠಾಧೀಶ
ಸುತ್ತಲೂ ಅರಣ್ಯದಿಂದ ಸುತ್ತುವರಿದಿರುವ ಕಜ್ಕೆಯ ಶ್ರೀದೇವಿಯ ನೆಲೆಯನ್ನು ಗುರುತಿಸಿ ಇಂದು ಭವ್ಯ ದೇಗುಲ ನಿರ್ಮಾಣವಾಗಲು ಕಾರಣರಾದವರು ಜಗದ್ಗುರು ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿ. ದೇವಸ್ಥಾನ ನಿರ್ಮಾಣ ಸಮಿತಿಯ ಜತೆಗೆ ಭಕ್ತ ವೃಂದದ ಪರಿಶ್ರಮದಿಂದ ಭವ್ಯ ಕ್ಷೇತ್ರ ನಿರ್ಮಾಣಗೊಂಡಿದೆ.
-ಕೃಷ್ಣಯ್ಯ ಶೆಟ್ಟಿ, ಶ್ರೀಧರ ಕಾಮತ್
ಸ್ಥಳ ದಾನಿಗಳು