More

  ನಿಯಮಾವಳಿ ಮೀರಿ ಮದರಸ ಕಟ್ಟಡ ನಿರ್ಮಾಣ: ಎಲ್ಲೂರು ಗ್ರಾಮಸಭೆಯಲ್ಲಿ ಆರೋಪ

  ಪಡುಬಿದ್ರಿ: ಕುಂಜೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಮದರಸ ವಿಚಾರದಲ್ಲಿ ಹಿಂದಿನ ಆಡಳಿತ ಮಂಡಳಿ ತೆಗೆದುಕೊಂಡಿದ್ದ ನಿರ್ಧಾರವನ್ನು ನಾವು ಮುಂದುವರಿಸಿದ್ದೇವೆ. ಈ ಬಗ್ಗೆ ಜನರಿಂದ ದೂರು, ಅಹವಾಲು ಬಂದರೆ ಪರಿಶೀಲಿಸುತ್ತೇವೆ. ಗ್ರಾಮದಲ್ಲಿ ಜಾತಿ, ಮತ, ಭೇದ ಮರೆತು ಸೇವೆ ನೀಡಲು ನಾವು ಬದ್ಧರಿದ್ದೇವೆ ಎಂದು ಎಲ್ಲೂರು ಗ್ರಾಪಂ ಅಧ್ಯಕ್ಷ ರವಿರಾಜ ರಾವ್ ಭರವಸೆ ನೀಡಿದರು.

  ಎಲ್ಲೂರು ಗ್ರಾಪಂ ಸಭಾಭವನದಲ್ಲಿ ಸೋಮವಾರ ಗ್ರಾಪಂನ 2023-24ನೇ ಸಾಲಿನ ಪ್ರಥಮ ಗ್ರಾಮಸಭೆಯಲ್ಲಿ ಮಾತನಾಡಿದರು.

  ಕುಂಜೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಮದರಸ ಬಗ್ಗೆ ಸ್ಥಳೀಯರಿಂದ ಆಕ್ಷೇಪಗಳಿದ್ದರೂ ಅವರನ್ನು ಕತ್ತಲಲ್ಲಿಟ್ಟು ಗ್ರಾಪಂ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದೆ. ಆಕ್ಷೇಪ ವ್ಯಕ್ತಪಡಿಸಿದವರಿಗೆ ನೋಟಿಸ್ ನೀಡದೆ ಏಕಪಕ್ಷೆಯವಾಗಿ ನಿರ್ಧಾರ ತೆಗೆದುಕೊಂಡು ಗ್ರಾಪಂ ಪರವಾನಗಿ ನೀಡಿದೆ. ಅಲ್ಲಿ ನಿಯಮಾವಳಿ ಮೀರಿ ಕಟ್ಟಡ ನಿರ್ಮಾಣಗೊಳ್ಳುತ್ತಿದೆ ಎಂಬ ಆರೋಪಗಳಿವೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಗ್ರಾಮಸ್ಥ ರಾಕೇಶ್ ಶೆಟ್ಟಿ ಆಗ್ರಹಿಸಿದರು.

  ಪಿಡಿಒ ಪ್ರದೀಪ್ ಉತ್ತರಿಸಿ, ಮದರಸ ಕಟ್ಟಡ ನಿರ್ಮಾಣಕ್ಕೆ ತಾಪಂ ಇಒ ಕೋರ್ಟ್ ಆದೇಶದಂತೆ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ವಾರ್ಡ್ ಸದಸ್ಯರ ಒಪ್ಪಿಗೆ ಪಡೆದು ಷರತ್ತುಬದ್ಧ ಅನುಮತಿ ನೀಡಿದ್ದಾರೆ. ಈ ಬಗ್ಗೆ ಹಿಂದೆ ಬಂದಿದ್ದ ದೂರಿನ ಆಧಾರದಲ್ಲಿ ಸ್ಥಳಕ್ಕೆ ಹೋಗಿ ಪರಿಶೀಲಿಸಿದ್ದು, ಅಲ್ಲಿ ಷರತ್ತು ಉಲ್ಲಂಘನೆ ಗಮನಕ್ಕೆ ಕಂಡುಬಂದಿಲ್ಲ. ಮುಂದೆ ಕಾಮಗಾರಿ ಮುಗಿಸಿ ಡೋರ್ ನಂಬರ್ ಪಡೆಯಲು ಬಂದಾಗ ಮತ್ತೆ ಪರಿಶೀಲಿಸುತ್ತೇವೆ. ನಿಯಮ ಉಲ್ಲಂಘಿಸಿದಲ್ಲಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

  ಕುಂಜೂರು ವ್ಯಾಸರಾಯರ ಮನೆಗೆ ತೆರಳುವ ರಸ್ತೆ ಬದಿಯಲ್ಲಿರುವ ಖಾಸಗಿ ಲೇಔಟ್‌ನಿಂದ ಆಗುತ್ತಿರುವ ಸಮಸ್ಯೆ, ರಸ್ತೆಯಲ್ಲೇ ಕೊಳಚೆ ನೀರು ಹರಿಯುತ್ತಿರುವ ವಿಚಾರವನ್ನು ಸ್ಥಳೀಯರು ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ಅಧಿಕೃತವಾಗಿ ಪತ್ರ ಮುಖೇನ ದೂರು ನೀಡಿದಲ್ಲಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಪಿಡಿಒ ಭರವಸೆ ನೀಡಿದರು.

  ಜನರಿಗೆ ಕಿರಿಕಿರಿ

  ಪೆಜತ್ತಕಟ್ಟೆಯಲ್ಲಿ ದಾರುಲ್ ಇಸ್ಲಾಂ ಸಂಸ್ಥೆಯ ಹೆಸರಲ್ಲಿ ಅನಾಥಾಶ್ರಮ ನಡೆಯುತ್ತಿದೆ. ಅಲ್ಲಿ ಕೆಲವೊಮ್ಮೆ ಮೈಕ್ ಬಳಸುತ್ತಾರೆ, ಜನ ಸೇರಿಸಿ ಪ್ರಾರ್ಥನೆ ನಡೆಸುತ್ತಾರೆ, ಇದರಿಂದ ಜನರಿಗೆ ಕಿರಿಕಿರಿಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದರು. ಮದರಸಾ ಕಟ್ಟಡದ ಬಗ್ಗೆ ಸಾರ್ವಜನಿಕರಲ್ಲಿರುವ ಗೊಂದಲ ನಿವಾರಣೆಗಾಗಿ ಆಡಳಿತ ಮಂಡಳಿಗೆ ನೋಟಿಸ್ ಕೊಟ್ಟು, ಅವರಲ್ಲಿ ಮಾಹಿತಿ ಪಡೆದು ಆರಂಭದಲ್ಲೇ ಸಮಸ್ಯೆ ಇತ್ಯರ್ಥ ಪಡಿಸುವಂತೆ ನಾಗೇಶ್ ರಾವ್ ಸಲಹೆ ನೀಡಿದರು. ಈ ಬಗ್ಗೆ ಅಧಿಕೃತವಾಗಿ ಯಾವುದೇ ದೂರುಗಳು ಬಂದಿಲ್ಲ. ಮೈಕ್ ಅಳವಡಿಸಲು ಪೊಲೀಸ್ ಇಲಾಖೆ ಅನುಮತಿ ಪಡೆಯಬೇಕಿದ್ದು, ಅನಧಿಕೃತವಾಗಿ ಮೈಕ್ ಬಳಕೆ ಮಾಡುತ್ತಿರುವ ಬಗ್ಗೆ ದೂರು ಬಂದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗುವುದು. ಸ್ಥಳೀಯರಿಗೆ ಸಮಸ್ಯೆಗಳಾಗುತ್ತಿದ್ದಲ್ಲಿ ಪರಿಶೀಲಿಸಲಾಗುವುದು ಎಂದು ಪಿಡಿಒ ತಿಳಿಸಿದರು.

  ಗಣೇಶ್ ನಾಯ್ಕ ನೋಡಲ್ ಅಧಿಕಾರಿಯಾಗಿದ್ದರು. ಮುದರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಸುಬ್ರಹ್ಮಣ್ಯ ರಾವ್, ಶಿಕ್ಷಣ ಸಂಯೋಜಕ ಶಂಕರ್, ಗ್ರಾಮ ಆಡಳಿತಾಧಿಕಾರಿ ಶ್ರೀಕಾಂತ್, ಉಪವಲಯ ಅರಣ್ಯಾಧಿಕಾರಿ ಜೀವನ್‌ದಾಸ್ ಶೆಟ್ಟಿ, ಮೆಸ್ಕಾಂ ಇಲಾಖೆ ಮೇಲ್ವಿಚಾರಕ ಶಂಕರ್, ಶಿಶು ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಫಿಲೋಮಿನಾ ಇಲಾಖಾ ಮಾಹಿತಿ ನೀಡಿದರು. ಉಪಾಧ್ಯಕ್ಷೆ ಉಷಾ ದಯಾನಂದ್, ಸದಸ್ಯರಾದ ಜಯರಾಮ ದೇವಾಡಿಗ, ಯಶವಂತ್ ಶೆಟ್ಟಿ, ವಸಂತಿ ಮಧ್ವರಾಜ್, ದೀಪಾ ಶೆಟ್ಟಿ, ಪ್ರಮೀಳಾ, ಶೋಭಾ ಶೆಟ್ಟಿ, ಶಾಂತಿ ಆಚಾರ್ಯ, ವಸಂತಿ, ಸಂತೋಷ್ ಶೆಟ್ಟಿ, ಹರೀಶ್ ಮೂಲ್ಯ, ದಯಾನಂದ ಶೆಟ್ಟಿಗಾರ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಮಂಜುನಾಥ ಆಚಾರ್ಯ ವಂದಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts