More

    1008 ವರ್ಷಗಳಿಂದ ಆರದ ಅಗ್ನಿ: ನಾಥ ಹಲವರಿ ಮಠದಲ್ಲಿ ಹೊಡಸಲು ಧುನಿ ಕುಂಡವಾಗಿ ಬದಲಾಯಿತು

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

    ನಾಥ ಪಂಥ ದೇವಸ್ಥಾನಗಳಲ್ಲಿ ಧುನಿ ಕುಂಡ ಪ್ರಧಾನ. ಭಕ್ತರಿಗೆ ಧುನಿ ಕುಂಡದ ಭಸ್ಮವೇ ಪ್ರಸಾದ. ಧುನಿ ಕುಂಡ ಇದ್ದರೆ ಅದು ನಾಥ ಪಂಥಕ್ಕೆ ಸೇರಿದ ದೇವಸ್ಥಾನ ಎನ್ನುವುದನ್ನು ಸೂಚಿಸುತ್ತದೆ. ಆದರೆ, ಅಗ್ನಿಕುಂಡಕ್ಕಾಗಿ ಹೊಡಸಲು ಬೆಂಕಿಯೇ ಧುನಿ ಕುಂಡವಾಗಿ ಕಳೆದ 1008 ವರ್ಷದಿಂದ ಆರದಂತೆ ಕಾಪಾಡಿಕೊಂಡು ಬರುತ್ತಿರುವ ಅಚ್ಚರಿಯೊಂದು ಬೈಂದೂರು ತಾಲೂಕಿನಲ್ಲಿದೆ.

    ಬೈಂದೂರು ತಾಲೂಕು ಯಡಮೊಗೆ ಹಲವರಿ ಮಠದಲ್ಲಿ 1008 ವರ್ಷದಿಂದ ಧುನಿ ಬೆಂಕಿ ಆರದಂತೆ ಕಾಪಾಡಿಕೊಂಡು ಬರಲಾಗಿದೆ. ನಾಥ ಪಂಥದ ಎಲ್ಲ ಮಠಗಳ್ಲೂ ಧುನಿ ಕುಂಡ ಆರೋದಿಲ್ಲ. ಹಲವರಿ ಮಠದಲ್ಲಿ ಹೊಡಸಲು ಬೆಂಕಿಯನ್ನೇ ಧುನಿ ಕುಂಡಕ್ಕೆ ಬಳಸಿಕೊಂಡಿದ್ದು ವಿಶೇಷ. ನಾಥಪಂಥ 10 ಮತ್ತು 11ನೇ ಶತಮಾನದಲ್ಲಿ ಆಚರಣೆಗೆ ಬಂದಿದ್ದು, ಶೈವ ಸಂಪ್ರದಾಯದ ರೂಪ. ಆದಿಗುರು ಶ್ರೀ ಶಂಕರಾಚಾರ್ಯರು ನಾಥ ಪಂಥದ ಅಘೋರಿಗಳನ್ನು ಶಿಷ್ಯರಾಗಿ ಸ್ವೀಕರಿಸಿ ದೇಶದಾದ್ಯಂತ ಸಂಚರಿಸಿ, ನಾಲ್ಕು ಪೀಠ ಸ್ಥಾಪನೆ ಮಾಡಿದ್ದರು.

    ಗೋರಕ್ಷನಾಥರ ಶಿಷ್ಯ ಗಂಭೀರನಾಥಜೀ ಖ್ಯಾತಿ

    ನಾಥಪಂಥ ಮೂಲಗುರು ಗೋರಕ್ಷನಾಥರ ಶಿಷ್ಯ ಯೋಗಿರಾಜ ಗುರು ಗಂಭೀರನಾಥಜೀ ಯಡಮೊಗೆಗೆ ಬಂದು ತಪಸ್ಸಿಗೆ ಕುಳಿತಿದ್ದರು. ಪಶ್ಚಿಮ ಘಟ್ಟದ ದಟ್ಟಡವಿ ಮಧ್ಯೆ ಯೋಗಿರಾಜ ಗುರು ಕಠಿಣ ವ್ರತಾ ನಿರತರಾಗಿದ್ದಾಗ ಅವರನ್ನು ಚಳಿಯಿಂದ ರಕ್ಷಿಸಲು ಶಿಷ್ಯರು ಹೊಡಸಲು (ಚಳಿಗಾಲದಲ್ಲಿ ಕಟ್ಟಿಗೆಗೆ ಬೆಂಕಿಹಾಕಿ ಸುತ್ತಲೂ ಕೂತು ಚಳಿಕಾಯುವ ವಿಧಾನ, ಕ್ಯಾಂಪ್ ಫಯರ್ ರೀತಿ) ಹಾಕಿದ್ದರು. ಇದೇ ಬೆಂಕಿ ಈಗ ಹಲವರಿ ಮಠದ ಧುನಿ ಕುಂಡವಾಗಿದೆ. ಅದಕ್ಕೀಗ 1008 ವರ್ಷ.

    ಯಡಮೊಗೆಯಲ್ಲಿ ನಾಥ ಪಂಥದ ಪ್ರಧಾನ ದೇವರ ಭವ್ಯ ಶಿಲಾಮಯ ಮಂದಿರ ತಲೆಯೆತ್ತುತ್ತಿದ್ದು, ಐದು ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣ ಅಭಿವೃದ್ಧಿ ಕೆಲಸ ನಡೆಯುತ್ತಿದೆ.

    ಶ್ವಾನ ಮಾರ್ಜಾಲಕ್ಕೂ ಸಮಾಧಿ

    ಹಲವಾರು ಗುರುಗಳು, ಹಲವಾರು ನಾಥ ಪಂಥ ಸಾಧಕರು ಬಂದುಹೋಗಿರುವುದೇ ಹಲವರಿ ಮಠ ಎಂಬ ಹೆಸರು ಬರಲು ಕಾರಣ. ಹಲವರಿ ಮಠದಲ್ಲಿ 20ಕ್ಕೂ ಮಿಕ್ಕಿ ಸಮಾಧಿಗಳಿದ್ದು, ನಾಥ ಪಂಥದವರು ದತ್ತಾತ್ರೇಯ ಸ್ವಾಮಿ ಭಕ್ತರಾಗಿದ್ದು, ಶ್ವಾನ ದತ್ತಾತ್ರೇಯರ ವಾಹನವಾಗಿದ್ದರಿಂದ ಅದಕ್ಕೂ ವಿಶೇಷ ಸ್ಥಾನ. ಹಲವರಿ ಮಠದ ಗುರು ದೇಹತ್ಯಾಗ ಮಾಡಿದ ನಂತರ ಮಠದ ಬಳಿ ಸಮಾಧಿ ಕಟ್ಟಲಾಗಿದ್ದು, ಸಮಾಧಿಯ ಒಂದು ಬದಿ ಶ್ವಾನ ಹಾಗೂ ಮತ್ತೊಂದು ಬದಿ ಮಾರ್ಜಾಲದ ಸಮಾಧಿ ಇದೆ.

    1008 ವರ್ಷಗಳಿಂದ ಆರದ ಅಗ್ನಿ: ನಾಥ ಹಲವರಿ ಮಠದಲ್ಲಿ ಹೊಡಸಲು ಧುನಿ ಕುಂಡವಾಗಿ ಬದಲಾಯಿತು

    ಒಬ್ಬರೇ ಯೋಗಿಗೆ ಮೂರು ಕಡೆ ಸಮಾಧಿ..!

    ನಾಥ ಪಂಥದ ಮೂಲಗುರು ಗೋರಕ್ಷನಾಥರ ಶಿಷ್ಯ ಯೋಗಿರಾಜ ಗುರು ಗಂಭೀರನಾಥಜೀ ಯಡಮೊಗೆಗೆ ಬಂದ ಮೊದಲ ನಾಥ ಪಂಥದ ಯೋಗಿ. ಯೋಗಿರಾಜರ ಪ್ರಾಣತ್ಯಾಗದ ನಂತರ ಅವರ ಸಮಾಧಿ ಹಲವರಿ ಮಠ, ಕೊಡಚಾದ್ರಿ ಮತ್ತು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಇದೆ. ಒಬ್ಬರ ಸಮಾಧಿ ಮೂರು ಕಡೆ ಹೇಗಾಯಿತು ಎನ್ನೋದು ಅಚ್ಚರಿ.

    ಗುರುಗಳು ಜಲಸಮಾಧಿಯಾಗುತ್ತಿದ್ದರು

    12ವರ್ಷಕ್ಕೊಮ್ಮೆ ಮಠದ ಗುರುವನ್ನು ಬದಲಾಯಿಸಲಾಗುತ್ತದೆ. ಬದಲಾವಣೆ ಸಮಯಕ್ಕೆ ಸರಿಯಾಗಿ ತ್ರಯಂಬಕೇಶ್ವರದಿಂದ ಸಾಧು, ಸಂತರು ಪಾದಯಾತ್ರೆಯಲ್ಲಿ ಮಠಕ್ಕೆ ಬಂದು ಹೊಸ ಯೋಗಿಯನ್ನು ನೇಮಕ ಮಾಡುತ್ತಾರೆ. ಉಡುಪಿ ಹಾಗೂ ವಿಟ್ಲದಲ್ಲಿ ನಾಥ ಪಂಥ ಮಠವಿದ್ದು, ಅಲ್ಲಿಯ ಪಾರುಪತ್ಯ ನೇಮಕ ಕದ್ರಿ ಗುರುಗಳಿಂದ ನಡೆಯುತ್ತದೆ. ಹಿಂದೆ ಕದ್ರಿಯಲ್ಲಿ 12 ವರ್ಷ ಪೂರೈಸಿದ ನಂತರ ಗುರುಗಳು ಜಲಸಮಾಧಿ ಆಗುತ್ತಿದ್ದರೂ ಎನ್ನಲಾಗುತ್ತಿದ್ದು, ಈಗ ಜಲಸಮಾಧಿ ವಿಧಿ ನೆರವೇರಿಸಲಾಗುತ್ತದೆ. ಅವಧಿ ಪೂರೈಸಿದ ಗುರು ಮತ್ತಾವ ಮಠಕ್ಕೂ ಮುಖ್ಯಸ್ಥರಾಗಲು ಆಗೋದಿಲ್ಲ.

    ಹಿಂದಿನ ಯೋಗಿಗಳು ಅಗಲಿದ ನಂತರ ಹಲವರಿಮಠಕ್ಕೆ ನಿಯುಕ್ತನಾಗಿ ಬಂದಿದ್ದು, ನಾಥಪಂಥದ ಆರಾಧ್ಯದೈವ ಕಾಲಭೈರವೇಶ್ವರ ದೇವಸ್ಥಾನ, ಗೋಶಾಲೆ, ತೀರ್ಥಮಂಟಪ, ಸಂಪರ್ಕ ವ್ಯವಸ್ಥೆ ಹಿನ್ನೆಲೆಯಲ್ಲಿ 5 ಕೋಟಿ ಯೋಜನೆ ಸಿದ್ಧಪಡಿಸಿದ್ದೇವೆ. ದೇವಸ್ಥಾನದ ಕೆಲಸ ಶೇ.70ರಷ್ಟು ಸಂಪೂರ್ಣವಾಗಿದೆ. ದೇವಸ್ಥಾನ ನಿರ್ಮಾಣಕ್ಕೆ ನಾಥಪಂಥದವರಲ್ಲದವರೂ ಕೈಜೋಡಿಸುತ್ತಿದ್ದಾರೆ.
    -ಮಹಂತ ಯೋಗಿ ಜಗದೀಶ್ವರ ಜೀ, ಹಲವರಿಮಠ ಯಡಮೊಗೆ

    2014ರಲ್ಲಿ ಶ್ರೀ ಕ್ಷೇತ್ರಕ್ಕೆ ಬಂದ ಝುಂಡಿಯ ಪ್ರಕಾರ ಅದು 84ನೇ ಝುಂಡಿ. 1008 ವರ್ಷಗಳ ಹಿಂದೆಯೇ ಈ ಪ್ರದೇಶಕ್ಕೆ ಹಠಯೋಗಿಗಳ ಆಗಮನವಾಗಿತ್ತೆಂದು ಹೇಳಲಾಗುತ್ತಿದೆ. ಅಂದರೆ ಹತ್ತನೇ ಶತಮಾನದಿಂದಲೇ ಯಡಮಗೆಯಲ್ಲಿ ನಾಥ ಪಂಥದ ಪ್ರಚಾರ ಶುರುವಾಗಿತ್ತೆಂದು ನಂಬಬಹುದು. ಇಲ್ಲಿರುವ ಸುಮಾರು 20ಕ್ಕೂ ಹೆಚ್ಚು ಯೋಗಿಗಳ ಸಮಾಧಿಗಳು ಅದನ್ನು ಪುಷ್ಟೀಕರಿಸುತ್ತವೆ. ನಾಥಪಂಥದ ಯಾವುದೇ ಪೀಠಾಧಿಪತಿಗೂ ಕಾನ್ ಪಾಟ್ ಆಗಿರುತ್ತದೆ.
    -ಕೇಶವ ಕೋಟೇಶ್ವರ, ಪ್ರಧಾನ ಕಾರ್ಯದರ್ಶಿ

    1008 ವರ್ಷಗಳಿಂದ ಆರದ ಅಗ್ನಿ: ನಾಥ ಹಲವರಿ ಮಠದಲ್ಲಿ ಹೊಡಸಲು ಧುನಿ ಕುಂಡವಾಗಿ ಬದಲಾಯಿತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts