ನಿಮ್ಮ ಸಮಸ್ಯೆ ಏನೆಂದು ಹೇಳದೆ ನಿಂದಿಸಬೇಡಿ: ಟ್ರೋಲರ್​ಗಳ ಬಗ್ಗೆ ರಶ್ಮಿಕಾ ಅಸಮಾಧಾನ

Rashmika Mandanna
Published on

ನವದೆಹಲಿ: ನಟಿ ರಶ್ಮಿಕಾ ಮಂದಣ್ಣ ಹಲವು ಕಾರಣಕ್ಕೆ ಆಗಾಗ್ಗೇ ಹಲವು ಟೀಕೆಗಳಿಗೆ ಕಾರಣವಾಗುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ನಿರಂತರ ಟ್ರೋಲ್​ಗೆ ಒಳಗಾಗುತ್ತಲೇ ಇರುತ್ತಾರೆ. ಈ ಬಗ್ಗೆ ಕೆಲ ತಿಂಗಳುಗಳ ಹಿಂದೆ ರಶ್ಮಿಕಾ ಟ್ರೋಲ್ ಮಾಡುವವರ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು. ಸಾಮಾಜಿಕ ಜಾಲತಾಣದಲ್ಲಿ ನಿರಂತರ ಟ್ರೋಲ್ ಮಾಡುವವರ ವಿರುದ್ಧ ಪತ್ರವೊಂದನ್ನು ಬರೆದು ಬೇಸರು ತೋಡಿಕೊಂಡಿದ್ದರು.

ಇದೀಗ ರಶ್ಮಿಕಾ ಮತ್ತೊಮ್ಮೆ ಟ್ರೋಲ್​ ವಿಚಾರವಾಗಿ ಮಾತನಾಡುತ್ತಾ, ನಾವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಸಮಸ್ಯೆಗಳನ್ನೇ ಹುಡುಕಿ ಕೆಲವರು ಟ್ರೋಲ್ ಮಾಡುತ್ತಾರೆ. ಇದು ಒಂದು ಹಂತವನ್ನು ಮೀರುತ್ತಿದ್ದಂತೆ ಮಾನಸಿಕ ಪರಿಣಾಮ ಬೀರುತ್ತದೆ. ಹೀಗಾಗಿ ಟ್ರೋಲ್ ಮೂಲಕ ಯಾರನ್ನೂ ನಿಂದನೆ ಮಾಡಬಾರದು. ನಿಮಗೆ ನನ್ನಿಂದ ಏನಾದರು ಸಮಸ್ಯೆ, ತೊಂದರೆ ಆದಲ್ಲಿ ಅದನ್ನು ನೇರವಾಗಿ ಹೇಳಿಬಿಡಿ ಎಂದು ರಶ್ಮಿಕಾ ಮಂದಣ್ಣ ಹೇಳಿಕೊಂಡಿದ್ದಾರೆ.

‘ನನ್ನ ಕೆಲಸದ ಮೂಲಕ ನಿಮ್ಮೆಲ್ಲರನ್ನು ರಂಜಿಸಲು ಪರಿಶ್ರಮ ಪಡುತ್ತಿದ್ದೇನೆ. ಈ ನಿಟ್ಟಿನಲ್ಲಿ ನಾನು ಹೆಚ್ಚು ಯೋಚಿಸುತ್ತೇನೆ. ನನ್ನ ಕೆಲಸದ ಮೂಲಕ ಯಾವತ್ತೂ ನೀವೆಲ್ಲರೂ ಹೆಮ್ಮೆ ಪಡುವಂತೆ ಇರಲು ಪ್ರಯತ್ನಿಸುತ್ತೇನೆ. ಆದರೆ ಕೆಲವೊಂದು ವಿಚಾರಕ್ಕೆ ನನ್ನನ್ನು ಅನೇಕರು ಟ್ರೋಲ್ ಮಾಡುತ್ತಿದ್ದಾರೆ. ಇದು ಅತೀವ ಬೇಸರ ತರಿಸಿದೆ.’

‘ಇಷ್ಟು ದಿನ ಎಲ್ಲವನ್ನೂ ಸಹಿಸಿಕೊಂಡು ಮೌನವಾಗಿದ್ದೆ. ಆದರೆ ನನಗೆ ತೊಂದರೆಯಾದಾಗ ಮಾತನಾಡಬೇಕಿತ್ತು. ನಾನು ಸಿನಿಮಾ ರಂಗಕ್ಕೆ ಆಗಮಿಸಿದಾಗಿನಿಂದ ನನ್ನನ್ನು ಒಂದಲ್ಲಾ ಒಂದು ಕಾರಣಕ್ಕೆ ಕೆಲವರು ದ್ವೇಷ ಮಾಡುತ್ತಲೇ ಬರುತ್ತಿದ್ದಾರೆ. ಆರಂಭದಲ್ಲಿ ನಾನು ಹಲವು ಟ್ರೋಲ್, ಟೀಕೆಗಳನ್ನು ಸಹಿಸಿಕೊಂಡಿದ್ದೇನೆ. ಆದರೆ ಈಗ ಪತ್ರಿಯೊಂದು ಟ್ರೋಲ್​ಗೂ ನನ್ನನ್ನೇ ತೂಗಿ ಹಾಕಲಾಗುತ್ತಿದೆ. ನಾನು ಆಯ್ಕೆ ಮಾಡಿಕೊಂಡಿರುವ ಕ್ಷೇತ್ರ ವಿಭಿನ್ನವಾದುದು. ಇಲ್ಲಿ ನಿಮಗೆ ನಾನು ಇಷ್ಟ ಇಲ್ಲ ಎಂದ ಮಾತ್ರಕ್ಕೆ, ನನ್ನ ಬಗ್ಗೆ ಸುಳ್ಳನ್ನೇ ಹಬ್ಬಿಸಬಹುದು ಎಂಬ ಮನಸ್ಥಿತಿ ಸರಿಯಲ್ಲ.’ ಎಂದು ರಶ್ಮಿಕಾ ಈ ಹಿಂದೆ ಬರೆದುಕೊಂಡಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net