ಬೆಂಗಳೂರು: ಇತ್ತೀಚೆಗೆ ಉಡುಪಿ ಜಿಲ್ಲೆಯ ಕಾಪುವಿನಲ್ಲಿರುವ ಕೊರಗಜ್ಜನ ಸನ್ನಿಧಿಗೆ ಸ್ಯಾಂಡಲ್ವುಡ್ ನಟಿ ಪ್ರೇಮಾ ಭೇಟಿ ನೀಡಿ ಪ್ರಾರ್ಥಿಸಿಕೊಂಡಿದ್ದರು. ಈ ವೇಳೆ ತಾನು ಎರಡನೇ ಮದುವೆಯಾಗುವುದಕ್ಕೆ ಪ್ರೇಮಾ ಕೊರಗಜ್ಜನಲ್ಲಿ ಅಪ್ಪಣೆ ಕೇಳಿದ್ದಾರೆ ಎಂಬ ಸುದ್ದಿ ಸಾಕಷ್ಟು ವೈರಲ್ ಆಗಿತ್ತು. ಇದೀಗ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಪ್ರೇಮಾ, ಕಂಕಣ ಭಾಗ್ಯ ಕೂಡಿ ಬಂದಾಗ ಮದುವೆ ಆಗುತ್ತದೆ. ಆಗ ಎಲ್ಲರಿಗೂ ಹೇಳಿಯೇ ವಿವಾಹವಾಗುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನಟಿ ಪ್ರೇಮಾ ಕೊರಗಜ್ಜನ ಸನ್ನಿಧಿಗೆ ಭೇಟಿ ಕೊಟ್ಟ ವಿಡಿಯೋ ವೈರಲ್ ಆಗಿತ್ತು. ಕೊರಗಜ್ಜನ ಬಳಿ ಮದ್ವೆಗೆ ಅಪ್ಪಣೆ ಕೇಳಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಇದೀಗ ಪ್ರೇಮಾ ಮಾತನಾಡುತ್ತಾ, ನಾವು ಸಂಬಂಧಿಕರೊಬ್ಬರ ಮದುವೆಗೆ ತೆರಳಿದ್ದೆವು. ಈ ವೇಳೆ ನಾವು ದೈವ ಸನ್ನಿಧಿಗೆ ಹೋಗಿದ್ದು ನಿಜ. ಆದರೆ ಮದುವೆಗೆ ಅಪ್ಪಣೆ ಕೇಳುವುದಕ್ಕೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರೇಮಾ ಮದುವೆ ಆಗಲು ಅನುಮತಿ ಕೇಳಲು ಹೋಗಿದ್ದಾರೆ ಎನ್ನುವ ಸುಳ್ಳು ಸುದ್ದಿಯನ್ನು ಕೆಲವರು ಹಬ್ಬಿಸಿದ್ದಾರೆ. ಅಷ್ಟಕ್ಕೂ ನಾನು ಓಡಿ ಹೋಗಿ ಮದುವೆ ಆಗುವುದಿಲ್ಲ. ಎಲ್ಲರಿಗೂ ಹೇಳಿಯೇ ವಿವಾಹ ಆಗುತ್ತೇನೆ ಎಂದು ಪ್ರೇಮಾ ಪ್ರತಿಕ್ರಿಯಿಸಿದ್ದಾರೆ.