ಧಾರವಾಡದ ಮಧ್ಯಮ ವರ್ಗದ ಜನರ ಮನೆಗಳೇ ಇವರ ಟಾರ್ಗೆಟ್; ಬಯಲಾಯ್ತು 'ನಿಧಿ' ಗ್ಯಾಂಗ್​ನ ಕರಾಳ ಸಂಚು!

ನಿಧಿ ಗ್ಯಾಂಗ್
Published on

ಧಾರವಾಡ: ಮೋಸ ಹೋಗುವವರು ಇರುವಲ್ಲಿವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ. ಈ ಮಾತಿಗೆ ತಾಜಾ ಉದಾಹರಣೆ ಎಂದರೆ ಧಾರವಾಡಕ್ಕೆ ಎಂಟ್ರಿ ಕೊಟ್ಟಿರುವ ಈ ಖತರ್ನಾಕ್ ನಿಧಿ ಗ್ಯಾಂಗ್. ಏನಿದು ನಿಧಿ ಗ್ಯಾಂಗ್? ಅಮಾಯಕರನ್ನು ಹೇಗೆ ಮೋಸ ಮಾಡುತ್ತಾರೆ ಎಂಬುದಕ್ಕೆ ಉತ್ತರ ಇಲ್ಲಿದೆ.

ನಿಧಿ ಗ್ಯಾಂಗ್​ನ ಟಾರ್ಗೆಟ್ ಮಧ್ಯಮ ವರ್ಗದ ಜನರ ಹಳೆಯ ಮನೆಗಳು. ನಿಮ್ಮದು ತುಂಬಾ ಹಳೆಯ ಮನೆ. ಈ ಮನೆ ಕೆಳಗೆ ನಿಧಿ ಇದೆ. ನಾವು ಹುಡುಕಿ ಕೊಡುತ್ತೇವೆ ಎಂದು ಈ ಗ್ಯಾಂಗ್ ಹೇಳುತ್ತದೆ. ಇವರ ವಂಚನೆಯ ಮಾತುಗಳಿಗೆ ಮರುಳಾಗಿ, ನಿಧಿಯ ಆಸೆಯಿಂದ ಜನರು ಗ್ಯಾಂಗ್ ಹೇಳಿದಂತೆ ಕೇಳುತ್ತಾರೆ ಎಂದು ಗೊತ್ತಾಗುತ್ತಿದ್ದಂತೆ ಪೂಜೆ ಮಾಡಬೇಕು ಎಂದು ಹೇಳುತ್ತಾರೆ. ಇದಕ್ಕೆ ಸಾಕಷ್ಟು ಖರ್ಚಾಗುತ್ತದೆ ಎಂದು ಹೇಳಿ ಮೊದಲು ದುಡ್ಡು ಪಡೆದುಕೊಂಡು ನಿಧಿ ಗ್ಯಾಂಗ್ ಪರಾರಿಯಾಗುತ್ತದೆ.

ನಿಧಿ ಆಸೆ ತೋರಿಸಿ ವಂಚನೆ ಮಾಡಿದ್ದ ಘಟನೆ ನವಲಗುಂದ ತಾಲೂಕಿನ ಐಯಟ್ಟಿ ಗ್ರಾಮದಲ್ಲಿ ನಡೆದಿತ್ತು. ಈ ಬಗ್ಗೆ ಸಂಶಯ ಬಂದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಎಚ್ಚೆತ್ತ ಪೊಲೀಸರು ನಿಧಿ ಗ್ಯಾಂಗ್ ವಿರುದ್ಧ ಕಾರ್ಯಾಚರಣೆಗೆ ಇಳಿದಿದ್ದಾರೆ. ಸದ್ಯ ಬೈಲಹೊಂಗಲ ಮೂಲದ ನಾಗಯ್ಯ, ಧಾರವಾಡ ನುಗ್ಗಿಕೇರಿಯ ಮಾರುತಿ ಎಂಬುವವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈಗಾಗಲೇ ಇಬ್ಬರು ಬಂಧಿಸಿ ಜೈಲಿಗಟ್ಟಿರುವ ಪೊಲೀಸರು, ಇವರ ಹಿಂದೆ ಇನ್ನೂ ಅನೇಕರು ಇರುವ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಧಾರವಾಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇಂಥವರು ಯಾರೇ ಬಂದರೂ ನಂಬಿ ಮೋಸ ಹೋಗಬೇಡಿ. ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಎಂದು ಜಿಲ್ಲಾ ಎಸ್​ಪಿ ಲೋಕೇಶ ಜಗಲಾಸರ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net