VIDEO | ಸಿದ್ದರಾಮಯ್ಯ ಹಳೆ ಸಿನಿಮಾ ಇದ್ದಂತೆ… ಮೋದಿ ಹೊಸ ಸಿನಿಮಾ; ಮಾಜಿ ಸಿಎಂ ವಿರುದ್ಧ ಜಗ್ಗೇಶ್ ವಾಗ್ದಾಳಿ!

ಜಗ್ಗೇಶ್
Published on

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಒಂದು ಸರಿಯಾದ ಕ್ಷೇತ್ರ ಇಲ್ಲ. ಇಲ್ಲಿಂದ ಅಲ್ಲಿ, ಅಲ್ಲಿಂದ ಇಲ್ಲಿ ಎಂದು ಓಡಾಡಿಕೊಂಡಿದ್ದಾರೆ. ಪ್ರಾಣಿ ಬಲಿ ಕೊಡುವಾಗ ಕಿರುಚುವ ಪರಿಸ್ಥಿತಿ ಸಿದ್ದರಾಮಯ್ಯ ಅವರದ್ದಾಗಿದೆ. ಇದು ನಮ್ಮ ಗುಣವನ್ನು ನಾವೇ ಪ್ರದರ್ಶನ ಮಾಡಿ ನಮ್ಮ ಮರ್ಯಾದೆ ಕಳೆದುಕೊಳ್ಳುವುದು ಅಂದರೆ ಇದುವೇ ಎಂದು ಸಿದ್ದರಾಮಯ್ಯ ವಿರುದ್ಧ ರಾಜ್ಯಸಭಾ ಸದಸ್ಯ ಜಗ್ಗೇಶ್ ವಾಗ್ದಾಳಿ ನಡೆಸಿದ್ದಾರೆ.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದರಾಮಯ್ಯ ಅವರಿಗೆ ಎಲ್ಲೂ ಜಾಗ ಇಲ್ಲದಂತಾಗಿದೆ. ಆದರೂ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ ಎಂದರು.

ಸಿದ್ದರಾಮಯ್ಯ ಹಳೆ ಸಿನಿಮಾ ಇದ್ದಂತೆ. ಆದರೆ ಹೊಸ ಸಿನಿಮಾ ಪ್ರಧಾನಿ ನರೇಂದ್ರ ಮೋದಿ. ಜನರಿಗೆ ಸಿದ್ದರಾಮಯ್ಯ ಅವರನ್ನು ಆಡಳಿತ ನೋಡಿ ಸಾಕಾಗಿದೆ. ಜನರೇ ಬದಲಾವಣೆ ಬಯಸುತ್ತಿದ್ದಾರೆ. ಮೋದಿಯಿಂದಾಗಿ ಪ್ರತಿಯೊಂದು ಗ್ರಾಮಕ್ಕೂ ಕುಡಿಯುವ ನೀರಿನ ಸಂಪರ್ಕ, ಬಯಲು ಮುಕ್ತ ಶೌಚಾಲಯ ಸಾಧ್ಯವಾಗಿದೆ.

ದರಿದ್ರ ದೇಶ ಪಾಕಿಸ್ತಾನ ಮಗ್ಗಲು ಮುಳ್ಳಾಗಿದೆ. ಮತ್ತೊಂದೆಡೆ ಚೀನಾ ಇದೆ. ಇದೆಲ್ಲವನ್ನೂ ಪ್ರಧಾನಿ‌ ಮೋದಿ ನಿಭಾಯಿಸುತ್ತಿದ್ದಾರೆ. ಸಿದ್ದರಾಮಯ್ಯ ಇಲ್ಲಿ ಮಾತನಾಡುವ ಬದಲು ಬಾರ್ಡರ್‌ಗೆ ತೆರೆಳಿ ಮಾತನಾಡಲಿ ಎಂದು ಜಗ್ಗೇಶ್ ಸವಾಲೆಸೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net