

ದೇವನಹಳ್ಳಿ: ಹೊಸ ವರ್ಷದಂದು ಆಂಧ್ರ ಪ್ರದೇಶದ ಅನಂತಪುರ ಮೂಲದ ಮುತ್ಯಾಲಪ್ಪ(40) ಎಂಬಾತನನ್ನು ಬರ್ಬರವಾಗಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಗಳು ಅನಂತಪುರದಲ್ಲಿ ಕೊಲೆ ಮಾಡಿ ನಂತರ ದೇವನಹಳ್ಳಿ ತಾಲೂಕಿನ ವೆಂಕಟಗಿರಿಕೋಟೆ ಬಳಿ ಮೃತದೇಹವನ್ನು ಎಸೆದಿದ್ದರು. ಸಾಕಷ್ಟು ಆಯಾಮಗಳಲ್ಲಿ ತನಿಖೆ ನಡೆಸಿ ಇದೀಗ ಮೂವರು ಆರೋಪಿಗಳನ್ನು ಆಂಧ್ರದಿಂದ ಬಂಧಿಸಿ ಪೊಲೀಸರು ಕರೆತಂದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ತನಿಖೆಯಿಂದ ಇದೀಗ ಆರೋಪಿ ನಾಗೇಶ್, ಎರಡೂವರೆ ಸಾವಿರ ರೂಪಾಯಿಗೆ ಬಾಲಕನೊಬ್ಬನಿಗೆ ಸುಪಾರಿ ನೀಡಿದ್ದ ಎಂಬ ಸಂಗತಿ ಹೊರಬಿದ್ದಿದೆ. ವೃತ್ತಿಯಲ್ಲಿ ವಕೀಲನಾಗಿರುವ ನಾಗೇಶ್, ಹಳೇ ದ್ವೇಶಕ್ಕೆ ಸಪಾರಿ ಪ್ಲಾನ್ ಮಾಡಿದ್ದ. ಈತನಿಗೆ ಸೋಮಶೇಖರ್ ಎಂಬಾತ ಸಹಕರಿಸಿದ್ದು, ಕೊಲೆಯಾದ ಮತ್ಯಾಲಪ್ಪನನ್ನು ಪುಸಲಾಯಿಸಿ ಕರೆತಂದಿದ್ದ. ನಂತರ ಅನಂತಪುರದಲ್ಲಿ ರಾಡ್ನಿಂದ ಹೊಡೆದು ಕೊಲೆ ಮಾಡಿದ್ದಾರೆ.
ಗುರುತು ಸಿಗಬಾರದೆಂದು ನಾಗೇಶ್, ಮೃತದೇಹದ ಮುಖವನ್ನು ಮಚ್ಚಿನಿಂದ ಕೊಚ್ಚಿದ್ದಾನೆ. ಫಿಂಗರ್ ಪ್ರಿಂಟ್ ಸಿಗಬಾರದೆಂದು ಕೈ ಬೆರಳನ್ನ ಕತ್ತರಿಸಿದ್ದ. ಆದರೆ ಪೊಲೀಸರಿಗೆ ಕೊಲೆಯಾದ ಮತ್ಯಾಲಪ್ಪನ ಒಂದು ಬೆರಳು ಲಭಿಸಿತ್ತು. ಇದು ಆರೋಪಿಗಳನ್ನು ಪತ್ತೆ ಮಾಡಲು ಸಹಕಾರಿಯಾಗಿದೆ.
ಕೊಲೆಯಾದ ಮುತ್ಯಾಲಪ್ಪನ ಮೇಲೆ ವಿವಿಧ ಠಾಣೆಗಳಲ್ಲಿ 50ಕ್ಕೂ ಹೆಚ್ಚು ಕಳ್ಳತನ ಕೇಸ್ ದಾಖಲಾಗಿದೆ. ಅನಂತಪುರದ ಹಲವೆಡೆ ಮತ್ಯಾಲಪ್ಪ ಹಲವು ಕಳ್ಳತನ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಅಂತೆಯೇ 10 ವರ್ಷದ ಹಿಂದಿನ ಸಣ್ಣ ಗಲಾಟೆಯೊಂದರಲ್ಲಿ ನಾಗೇಶ್ ಮತ್ತು ಮತ್ಯಾಲಪ್ಪನ ನಡುವೆ ವೈರತ್ವ ಬೆಳೆದಿದ್ದೇ ಕೊಲೆಗೆ ಕಾರಣವಾಗಿದೆ. ಸದ್ಯ ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.