

ಮಧ್ಯಪ್ರದೇಶ: ಕ್ರಿಕೆಟಿಗ ರಿಷಬ್ ಪಂತ್ ಆರೋಗ್ಯ ಚೇತರಿಸಿ, ಶೀಘ್ರದಲ್ಲಿ ಮೈದಾನಕ್ಕೆ ಮರಳುವಂತಾಗಲಿ ಎಂದು ಟೀಂ ಇಂಡಿಯಾ ಆಟಗಾರರು ಉಜ್ಜೈನಿಯ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥಿಸಿಕೊಂಡಿದ್ದಾರೆ. ಸೂರ್ಯಕುಮಾರ್ ಯಾದವ್, ಕುಲ್ದೀಪ್ ಯಾದವ್, ವಾಷಿಂಗ್ಟನ್ ಸುಂದರ್ ಪೂಜೆ ಸಲ್ಲಿಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೇವೆ. ಅವರು ಮತ್ತೆ ಕ್ರಿಕೆಟ್ಗೆ ಮರಳುವುದು ತಂಬಾ ಮುಖ್ಯವಾಗುತ್ತದೆ ಎಂದರು.
ಕಳೆದ ಡಿ.30ರಂದು ಮುಂಜಾನೆ BMW ಕಾರಿನಲ್ಲಿ ಟೀಂ ಇಂಡಿಯಾದ ವಿಕೆಟ್ ಕೀಪರ್ ಪಂತ್ ಮನೆಗೆ ತೆರಳುವಾಗ ಮಾರ್ಗಮಧ್ಯೆ ಉತ್ತರಾಖಂಡ್‌ನ ರೂರ್ಕಿ ಬಳಿ ಅವರ ಕಾರು ಡಿವೈಡರ್‌ಗೆ ಡಿಕ್ಕಿ(accident) ಹೊಡೆದಿತ್ತು. ಅಪಘಾತಕ್ಕೀಡಾದ ಕ್ಷಣಾರ್ಧದಲ್ಲೇ ಕಾರು ಹೊತ್ತಿ ಉರಿದಿತ್ತು. ಈ ಘಟನೆಯಲ್ಲಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ರಿಷಬ್ ಪಂತ್, ಗಂಭೀರ ಗಾಯಗೊಂಡಿದ್ದರು. ತಲೆ, ಮಂಡಿ, ಬೆನ್ನು, ಕಾಲಿಗೆ ಗಾಯವಾಗಿತ್ತು.
ಮೊಣಕಾಲು ಮತ್ತು ಬಲಗಾಲಿನ ಮಂಡಿಯ ಲಿಗಮೆಂಟ್(ಅಸ್ಥಿರಜ್ಜು) ಚಿಕಿತ್ಸೆಗಾಗಿ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ರಿಷಬ್ ಪಂತ್ ಅವರನ್ನು ಡೆಹ್ರಾಡೂನ್‌ನಿಂದ ಮುಂಬೈಗೆ ಸ್ಥಳಾಂತರಿಸಿತ್ತು. ಶಸ್ತ್ರಚಿಕಿತ್ಸೆಯ ಬಳಿಕ ಟ್ವೀಟ್ ಮಾಡಿದ್ದ ಪಂತ್, ನಾನು ಆರೋಗ್ಯವಾಗಿದ್ದೇನೆ. ನನ್ನ ಚೇತರಿಕೆಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು ಎಂದಿದ್ದರು. (ಏಜೆಸ್ಸೀಸ್)