

ತೆಲಂಗಾಣ: ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮ (ಟಿಎಸ್ಆರ್ಟಿಸಿ) ನೌಕರರು ಪ್ರತಿಭಟನೆ ನಡೆದ ಬೆನ್ನಿಗೇ ಮಹತ್ವದ ಮಸೂದೆಯೊಂದಕ್ಕೆ ಅಂಗೀಕಾರ ಸಿಕ್ಕಿದೆ. ಈ ಮೂಲಕ ಅಲ್ಲಿನ ಸಾರಿಗೆ ಸಂಸ್ಥೆ ಸರ್ಕಾರದೊಂದಿಗೆ ವಿಲೀನಗೊಂಡಂತಾಗಿದೆ.
ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮ (ಸರ್ಕಾರಿ ಸೇವೆಗೆ ನೌಕರರನ್ನು ವಿಲೀನಗೊಳಿಸುವುದು) ಮಸೂದೆ 2023 ಇದಕ್ಕೆ ತೆಲಂಗಾಣ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಅನುಮೋದನೆ ಸಿಕ್ಕಿದೆ ಎಂಬುದಾಗಿ ಇಂದು ಅಲ್ಲಿನ ರಾಜ್ಯಪಾಲೆ ತಮಿಳ್ಸಾಯಿ ಸೌಂದರರಾಜನ್ ತಿಳಿಸಿದ್ದಾರೆ. ಈ ಮಸೂದೆಯನ್ನು ತಾವು ಅಂಗೀಕರಿಸಿದ್ದಾಗಿ ಆಕೆ ತಿಳಿಸಿದ್ದಾರೆ.
ಮಸೂದೆಯನ್ನು ಜಾರಿಗೊಳಿಸಲು ಅನುಮೋದನೆ ನೀಡುವಂತೆ ಟಿಎಸ್ಆರ್ಟಿಸಿ ನೌಕರರು ರಾಜಭವನಕ್ಕೆ ತೆರಳಿ ಆಗ್ರಹ ವ್ಯಕ್ತಪಡಿಸಿದ್ದ ಒಂದು ದಿನದಲ್ಲೇ ಈ ಬೆಳವಣಿಗೆ ನಡೆದಿದೆ.
ತೆಲಂಗಾಣ ಸಂಪುಟ ಇದಕ್ಕೆ ಸೋಮವಾರವೇ ಅನುಮೋದನೆ ನೀಡಿದ್ದು, ಇದೀಗ ರಾಜ್ಯಪಾಲರ ಅಂಕಿತವೂ ಸಿಕ್ಕಂತಾಗಿದೆ. ಪರಿಣಾಮವಾಗಿ ಟಿಎಸ್ಆರ್ಟಿಸಿ ತೆಲಂಗಾಣ ರಾಜ್ಯ ಸರ್ಕಾರದೊಂದಿಗೆ ವಿಲೀನಗೊಳ್ಳಲಿದ್ದು, ಅದರ 43 ಸಾವಿರ ನೌಕರರು ಸರ್ಕಾರಿ ನೌಕರಿ ವ್ಯಾಪ್ತಿಗೆ ಬರಲಿದ್ದಾರೆ. -ಏಜೆನ್ಸೀಸ್