ಪಾಕ್​ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಮ್​ ಇಂಡಿಯಾಗೆ ಶಾಕ್​; ಗಾಯಕ್ಕೆ ತುತ್ತಾದ ಪ್ರಮುಖ ಆಟಗಾರ

Team India
Published on

ನ್ಯೂಯಾರ್ಕ್​: ಇಲ್ಲಿನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಹಾಗೂ ಪಾಕ್​ ನಡುವಿನ ಹೈವೋಲ್ಟೇಜ್​ ಕದನವನ್ನು ವೀಕ್ಷಿಸಲು ಕ್ರೀಡಾಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ಉಭಯ ತಂಡಗಳಿಗೂ ಈ ಪಂದ್ಯ ಮಹತ್ವದಾಗಿದೆ. ಒಂದೆಡೆ ಗೆಲುವಿನ ಮೂಲಕ ಟೂರ್ನಿಯಲ್ಲಿ ಶುಭಾರಂಭ ಕಂಡಿರುವ ಭಾರತ ತನ್ನ ಗೆಲುವಿನ ಓಟವನ್ನು ಮುಂದುವರೆಸಲು ಸಜ್ಜಾಗಿರುವ ನಡುವೆಯೇ ಅಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.

ಭಾರತ ಹಾಗೂ ಐರ್ಲೆಂಡ್​ ನಡುವಿನ ಪಂದ್ಯದಲ್ಲಿ ಬ್ಯಾಟಿಂಗ್​ ಮಾಡುವ ವೇಳೆ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ ಭುಜಕ್ಕೆ ಚೆಂಡು ತಗುಲಿ ಗಾಯಗೊಂಡಿದ್ದರು. ರಿಟೈರ್ಡ್​ ಹರ್ಟ್​ ಆಗಿ ಮೈದಾನದಿಂದ ಹೊರ ನಡೆದಿದ್ದ ರೋಹಿತ್​ ಬಳಿಕ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದರು. ಚೇತರಿಸಿಕೊಂಡ ಬಳಿಕ ನೆಟ್ಸ್​ನಲ್ಲಿ ಅಭ್ಯಾಸ ನಡೆಸುತ್ತಿದ್ದ ರೋಹಿತ್​ ಶರ್ಮಾ ಈಗ ಮತ್ತೊಮ್ಮೆ ಗಾಯಕ್ಕೆ ತುತ್ತಾಗಿದ್ದಾರೆ ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ.

ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ನೆಟ್ಸ್​ನಲ್ಲಿ ಅಭ್ಯಾಸ ನಡೆಸುವ ವೇಳೆ ರೋಹಿತ್​ ಶರ್ಮಾ ಹೆಬ್ಬರಳಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ. ಕೂಡಲೇ ಅಭ್ಯಾಸ ನಿಲ್ಲಿಸಿದ ರೋಹಿತ್​ ಶರ್ಮಾ ಅಭ್ಯಾಸ ನಿಲ್ಲಿಸಿ ತ್ವರಿತವಾಗಿ ವೈದ್ಯಕೀಯ ಚಿಕಿತ್ಸೆ ಪಡೆಯಲು ತೆರಳಿದ್ದಾರೆ. ಈ ಗಾಯದ ಸುದ್ದಿ ಬೆನ್ನಲ್ಲೇ ರೋಹಿತ್ ಶರ್ಮಾ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರಾ ಎಂಬ ಸುದ್ದಿ ಕ್ರೀಡಾ ವಲಯದಲ್ಲಿ ಹರಿದಾಡಲು ಶುರು ಮಾಡಿದೆ.

Rohit Sharma

ಏಕೆಂದರೆ ಭಾರತ ಮತ್ತು ಪಾಕ್ ನಡುವಣ ಪಂದ್ಯವು ಭಾನುವಾರ ನಡೆಯಲಿದ್ದು, ಅದಕ್ಕೂ ಮುನ್ನ ಹಿಟ್​ಮ್ಯಾನ್ ಸಂಪೂರ್ಣವಾಗಿ ಚೇತರಿಸಿಕೊಳ್ಳಬೇಕಿದೆ. ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ರೋಹಿತ್​ ಶರ್ಮಾ ಬೆರಳು ಸ್ವಲ್ಪ ಊದಿಕೊಂಡಿದೆ ಎಂದು ತಿಳಿದು ಬಂದಿದೆ. ಆದರೆ ಪಾಕ್ ವಿರುದ್ಧದ ಪಂದ್ಯದ ವೇಳೆಗೆ ಈ ಗಾಯದ ನೋವು ಸಂಪೂರ್ಣವಾಗಿ ಕ್ಷೀಣಿಸಿದರೆ ಮಾತ್ರ ಕಣಕ್ಕಿಳಿಯಲಿದ್ದಾರೆ.

ಹೀಗಾಗಿ ನ್ಯೂಯಾರ್ಕ್​ನ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಣ ಹೈವೊಲ್ಟೇಜ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಣಕ್ಕಿಳಿಯಲಿದ್ದಾರಾ ಅಥವಾ ಉಪನಾಯಕ ಹಾರ್ದಿಕ್ ಪಾಂಡ್ಯ ಭಾರತ ತಂಡವನ್ನು ಮುನ್ನಡೆಸಲಿದ್ದಾರಾ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net