ಶ್ರೀಲಂಕಾ ವಿರುದ್ಧ ಬಾಂಗ್ಲಾಗೆ ರೋಚಕ ಜಯ; ಸೂಪರ್​ 8 ಹಾದಿ ಮತ್ತಷ್ಟು ಕಠಿಣ

Bangladesh
Published on

ಡಲ್ಲಾಸ್​: ಇಲ್ಲಿನ ಗ್ರ್ಯಾಂಡ್​ ಪ್ರೈರೀ ಕ್ರೀಡಾಂಗಣದಲ್ಲಿ ನಡೆದ ಟಿ-20 ವಿಶ್ವಕಪ್​ನ 15ನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ ರೋಚಕ ಜಯ ಸಾಧಿಸಿದ್ದು, ಸೂಪರ್​-8 ಪ್ರವೇಶಿಸುವ ಶ್ರೀಲಂಕಾ ಹಾದಿ ಮತ್ತಷ್ಟು ಕಠಿಣವಾಗಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಶ್ರೀಲಂಕಾ ಪಾಥುಮ್​ ನಿಸ್ಸಾಂಕ (47 ರನ್, 28 ಎಸೆತ, 7 ಬೌಂಡರಿ, 1 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಫಲವಾಗಿ 9 ವಿಕೆಟ್​ ನಷ್ಟಕ್ಕೆ 20 ಓವರ್​ಗಳಲ್ಲಿ 124 ರನ್​ ಗಳಿಸಲಷ್ಟೇ ಶಕ್ತವಾಯಿತು. ಬಾಂಗ್ಲದೇಶ ಪರ ಮುಸ್ತಾಫಿಜುರ್​ ರೆಹಮಾನ್​ (4-0-17-3), ರಿಶಾದ್​ ಹೊಸೈನ್​ (4-0-22-3), ಟಸ್ಕಿನ್​ ಅಹ್ಮದ್​ (4-0-25-2), ತನ್ಜಿಮ್ ಹಸನ್ ಸಾಕಿಬ್ (4-0-24-1) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

ಇನ್ನೂ ಸುಲಭ ಗುರಿ ಬೆನ್ನತ್ತಿದ್ದ ಬಾಂಗ್ಲಾದೇಶ ತಂಡವು ಟವಿಡ್ ಹೃದಯ್ (40 ರನ್, 20 ಎಸೆತ, 1 ಬೌಂಡರಿ, 4 ಸಿಕ್ಸರ್), ಲಿಟನ್​ ದಾಸ್​ (36 ರನ್, 38 ಎಸೆತ, 2 ಬೌಂಡರಿ, 1 ಸಿಕ್ಸರ್) ಫಲವಾಗಿ ಗೆಲುವಿನ ದಡ ಸೇರಿತ್ತು. ಸಾಧಾರಣ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಒಂದು ಹಂತದಲ್ಲಿ 11.3 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 91 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ದಿಢೀರ್ ಪತನ ಕಂಡು 17.4 ಓವರ್‌ಗಳಲ್ಲಿ 113 ರನ್‌ಗಳಿಗೆ ಎಂಟು ವಿಕೆಟ್ ಕಳೆದುಕೊಂಡಿತ್ತು.

ಆದರೆ ಕೊನೆಯ ಹಂತದಲ್ಲಿ ಅಜೇಯ 16 ರನ್‌ಗಳ ಕೊಡುಗೆ ನೀಡಿದ ಮಹಮುದುಲ್ಲಾ ತಂಡವನ್ನು ಗೆಲುವಿನ ದಡ ಸೇರಿಸಲು ನೆರವಾದರು. ಇನ್ನೂ ಒಂದು ಓವರ್ ಬಾಕಿ ಉಳಿದಿರುವಂತೆಯೇ ಬಾಂಗ್ಲಾದೇಶ ಎಂಟು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಶ್ರೀಲಂಕಾ ಪರ ನುವಾನ್​ ತುಷಾರಾ (4-0-18-4), ವನಿಂದು ಹಸರಂಗಾ (4-0-32-2), ಮತೀಶ್ ಪಥಿರಾಣಾ (4-0-27-1), ಧನಂಜಯ್​ ಡಿ ಸಿಲ್ವಾ (2-0-11-1) ಮಹೀಶ್​ ತೀಕ್ಷ್ಣ (4-0-25-0), ದಸುನ್​ ಶನಕಾ (1-0-11-0) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

ಸತತ ಎರಡನೇ ಸೋಲಿಗೆ ಗುರಿಯಾಗಿರುವ ಶ್ರೀಲಂಕಾ, 'ಸೂಪರ್ 8'ರ ಹಂತಕ್ಕೆ ಪ್ರವೇಶಿಸುವುದು ಮತ್ತಷ್ಟು ಕಠಿಣವೆನಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲೂ ಲಂಕಾ ಆರು ವಿಕೆಟ್ ಅಂತರದ ಸೋಲಿಗೆ ಶರಣಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net