ನವದೆಹಲಿ: ಟಿ20 ವಿಶ್ವಕಪ್ ಬೇಟೆಗೆ ಟೀಮ್ ಇಂಡಿಯಾ ಸಜ್ಜಾಗಿದೆ. ರೋಹಿತ್ ಪಡೆ ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದೆ. ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ಪಂದ್ಯ ನಡೆಯಲಿದೆ. ಐರ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಲು ಟೀಮ್ ಇಂಡಿಯಾ ಎದುರು ನೋಡುತ್ತಿದೆ. ಬಲಿಷ್ಠ ಭಾರತಕ್ಕೆ ಸವಾಲೊಡ್ಡಲು ಐರ್ಲೆಂಡ್ ಕೂಡ ಹವಣಿಸುತ್ತಿದೆ. ತಂಡದ ಬ್ಯಾಟಿಂಗ್ ಘಟಕ ಬಲಿಷ್ಠವಾಗಿದ್ದು, ಪಂದ್ಯ ಕುತೂಹಲಕರವಾಗಿರುವುದು ಖಚಿತ. ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಯಾರಿರುತ್ತಾರೆ ಎಂಬ ಕುತೂಹಲವಿದೆ. ಆ ಕುತೂಹಲ ತಣಿಸುವ ಉತ್ತರ ಇಲ್ಲಿದೆ.
ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ನಡುವಿನ ಪಂದ್ಯ ನಸ್ಸೌ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಲಂಕಾ ಕೇವಲ 77 ರನ್‌ಗಳಿಗೆ ಕುಸಿಯಿತು. ಆದರೆ, ಈ ಗುರಿಯನ್ನು ತಲುಪಲು ಹರಿಣಗಳ ಪಡೆ ಸಹ ಹೆಣಗಾಡಿತು. 16.2 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಈ ಪಂದ್ಯದಲ್ಲಿ ವೇಗಿಗಳಾದ ಎನ್ರಿಚ್ ನೋಕಿಯಾ, ಕಗಿಸೊ ರಬಾಡ ಹಾಗೂ ಸ್ಪಿನ್ನರ್‌ಗಳಾದ ಕೇಶವ್ ಮಹಾರಾಜ್ ಹಾಗೂ ಲಂಕಾದ ವನಿಂದು ಹಸರಂಗ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು.
ಆಫ್ರಿಕಾ ಮತ್ತು ಲಂಕಾ ನಡುವಿನ ಪಂದ್ಯದಿಂದಾಗಿ ಐರ್ಲೆಂಡ್ ವಿರುದ್ಧ ಭಾರತ ತಂಡದ ಪ್ಲೇಯಿಂಗ್ ಇಲೆವೆನ್ ತೀವ್ರ ಕುತೂಹಲ ಮೂಡಿಸಿದೆ. ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ವಿಫಲವಾದ ಕಾರಣ ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಡಗೌಟ್‌ಗೆ ಸೀಮಿತವಾಗಬಹುದು. ಅಗ್ರ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಜೊತೆಗೆ ನಾಯಕ ರೋಹಿತ್ ಇನ್ನಿಂಗ್ಸ್ ಆರಂಭಿಸುವುದು ಖಚಿತವಾಗಿದೆ. ಅಭ್ಯಾಸ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ವಿಫಲವಾಗಿರುವುದರಿಂದ ರಿಷಬ್ ಪಂತ್ ವಿಕೆಟ್ ಕೀಪರ್ ಆಗಿ ಆಡಲಿದ್ದಾರೆ ಎನ್ನಬಹುದು.
ಪಂತ್ ಜೊತೆಗೆ ಸೂರ್ಯಕುಮಾರ್ ಯಾದವ್ ಮತ್ತು ಶಿವಂ ದುಬೆ ಮಧ್ಯಮ ಕ್ರಮಾಂಕದ ಭಾರವನ್ನು ಹೊರಲಿದ್ದಾರೆ. ರವೀಂದ್ರ ಜಡೇಜಾ ಜೊತೆಗೆ ಉಪನಾಯಕ ಹಾರ್ದಿಕ್ ಪಾಂಡ್ಯ ಫಿನಿಶರ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಮುಖ್ಯ ಸ್ಪಿನ್ನರ್ ಆಗಿ ಕುಲದೀಪ್ ಯಾದವ್, ವೇಗಿಗಳಾಗಿ ಜಸ್ಪ್ರೀತ್ ಬುಮ್ರಾ ಮತ್ತು ಅರ್ಶದೀಪ್ ಸಿಂಗ್ ಕಣಕ್ಕೆ ಇಳಿಯುವುದು ಖಚಿತ. ಆದರೆ ಮತ್ತೊಂದು ಸ್ಥಾನಕ್ಕಾಗಿ ಮೂವರು ಆಟಗಾರರ ನಡುವೆ ಪೈಪೋಟಿ ಏರ್ಪಟ್ಟಿದೆ. ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಾಲ್ ಮತ್ತು ಅಕ್ಷರ್ ಪಟೇಲ್ ಯಾರನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಈಗಾಗಲೇ ಜಡ್ಡು ಮತ್ತು ಕುಲದೀಪ್ ರೂಪದಲ್ಲಿ ಇಬ್ಬರು ಎಡಗೈ ಬೌಲರ್‌ಗಳಿದ್ದು, ಹೆಚ್ಚುವರಿ ಸ್ಪಿನ್ನರ್ ಅಗತ್ಯವಿದ್ದರೆ, ಚಹಲ್ ಅವರನ್ನು ಆಡುವ ಹನ್ನೊಂದರೊಳಗೆ ಸೇರಿಸಿಕೊಳ್ಳಬಹುದು. ಲಂಕಾ-ಆಫ್ರಿಕಾ ಪಂದ್ಯದಲ್ಲಿ ನಸ್ಸೌ ಪಿಚ್ ವೇಗಿಗಳಿಗೆ ಸ್ವಲ್ಪ ಅನುಕೂಲಕರವಾಗಿತ್ತು. ಹಾಗಾಗಿ ಹೆಚ್ಚುವರಿ ವೇಗಿ ಬೇಕಿದ್ದರೆ ರೋಹಿತ್, ಸಿರಾಜ್ ಕಡೆಗೆ ವಾಲಬಹುದು. ಪ್ಲೇಯಿಂಗ್ ಇಲೆವೆನ್ನಲ್ಲಿ ಐವರು ಸ್ಪೆಷಲಿಸ್ಟ್ ಬೌಲರ್ ಗಳಿರುವುದು ಖಚಿತವಾಗಿದೆ. ಭಾರತದ ಅಂತಿಮ ತಂಡದಲ್ಲಿ ಬೇರೆ ಯಾರಾದರೂ ಸ್ಥಾನ ಪಡೆದರೆ ಒಳ್ಳೆಯದು ಎಂದು ನೀವು ಭಾವಿಸಿದರೆ ಕಾಮೆಂಟ್ ಮಾಡಿ.
ಭಾರತ ತಂಡ (ಅಂದಾಜು): ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ಶಿವಂ ದುಬೆ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್ / ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್.