ನವದೆಹಲಿ: ಭಾರತ ತಂಡದ ನಾಯಕ ರೋಹಿತ್ ಶರ್ಮ ಟಿ20 ವಿಶ್ವಕಪ್ ಹೋರಾಟಕ್ಕೆ ಸಿದ್ಧರಾಗಿದ್ದಾರೆ. ಮೊದಲ ಪಂದ್ಯದಿಂದಲೇ ತಂಡದ ಶಕ್ತಿ ಪ್ರದರ್ಶಿಸುವ ಸಂಕಲ್ಪ ತೊಟ್ಟಿದ್ದಾರೆ. ಸತತ ಗೆಲುವಿನೊಂದಿಗೆ ಎದುರಾಳಿಗಳನ್ನು ನಡುಗಿಸಲು ನಿರ್ಧರಿಸಿದ್ದಾರೆ. ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕೊನೆಯ ಕ್ಷಣದಲ್ಲಿ ಟ್ರೋಫಿ ಕೈತಪ್ಪಿದ ಕೊರಗಿನಲ್ಲಿರುವ ಹಿಟ್‌ಮ್ಯಾನ್, ಟಿ20 ವಿಶ್ವಕಪ್ ಗೆದ್ದು ಆ ಕೊರಗನ್ನು ನೀಗಿಸಿಕೊಳ್ಳುವ ತವಕದಲ್ಲಿದ್ದಾರೆ.
ಇಂದು (ಜೂನ್ 05) ಐರ್ಲೆಂಡ್ ವಿರುದ್ಧದ ನಡೆಯಲಿರುವ ಮೊದಲ ಲೀಗ್ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಲು ರೋಹಿತ್ ಎದುರು ನೋಡುತ್ತಿದ್ದಾರೆ. ಇದಕ್ಕಾಗಿ ಈಗಾಗಲೇ ಕಠಿಣ ಅಭ್ಯಾಸ ಸಹ ನಡೆಸುತ್ತಿದ್ದಾರೆ. ಫಿಟ್‌ನೆಸ್ ಹೆಚ್ಚಿಸಿಕೊಳ್ಳುವ ಜತೆಗೆ ಬ್ಯಾಟಿಂಗ್‌ನಲ್ಲಿಯೂ ಸುಧಾರಣೆ ಮಾಡಿಕೊಳ್ಳುತ್ತಿದ್ದಾರೆ. ಎದುರಾಳಿ ಬೌಲರ್‌ಗಳ ಮೇಲೆ ದಾಳಿ ನಡೆಸಲು ನಿರ್ಧರಿಸಿದ್ದಾರೆ.
ಇಂದಿನ ಪಂದ್ಯ ನ್ಯೂಯಾರ್ಕ್‌ನಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ರೋಹಿತ್ ಮಹತ್ವದ ಹೇಳಿಕೆ ನೀಡಿದ್ದಾರೆ. ಎಷ್ಟೇ ಪ್ರಯತ್ನಿಸಿದರೂ ಕೇಳುವುದಿಲ್ಲ, ಬೇರೇನೂ ಮಾಡಲು ಸಾಧ್ಯವಿಲ್ಲ ಎಂದು ಬೇಸರ ಹೊರಹಾಕಿದ್ದಾರೆ. ಅಷ್ಟಕ್ಕೂ ಹಿಟ್‌ಮ್ಯಾನ್ ಈ ರೀತಿ ಹೇಳಲು ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕಾರಣ.
ಹೌದು, ಈ ಮೆಗಾ ಟೂರ್ನಮೆಂಟ್‌ನ ನಂತರ ದ್ರಾವಿಡ್ ಮುಖ್ಯ ಕೋಚ್ ಆಗಿ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಿ, ಟೀಮ್ ಇಂಡಿಯಾವನ್ನು ತೊರೆಯಲಿದ್ದಾರೆ. ಅವರ ಬದಲಿಗೆ ಹೊಸ ಕೋಚ್‌ಗಾಗಿ ಬಿಸಿಸಿಐ ಹುಡುಕಾಟ ನಡೆಸುತ್ತಿದೆ. ಮತ್ತೊಮ್ಮೆ ಅರ್ಜಿ ಸಲ್ಲಿಸಿದರೆ ಕೋಚ್ ಆಗುವ ಅವಕಾಶವಿದ್ದರೂ, ತಾನು ಅರ್ಜಿ ಸಲ್ಲಿಸುವುದಿಲ್ಲ ಮತ್ತು ಕೋಚ್ ಆಗಿ ಟಿ20 ವಿಶ್ವಕಪ್ ನನ್ನ ಕೊನೆಯ ಟೂರ್ನಿ ಎಂದು ದ್ರಾವಿಡ್ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೋಹಿತ್, ಇನ್ನು ಕೆಲವು ವರ್ಷಗಳ ಕಾಲ ತಂಡದೊಂದಿಗೆ ಇರಲು ದ್ರಾವಿಡ್ ಅವರ ಬಳಿ ಕೇಳಿದರು ಅವರು ಮನಸ್ಸು ಬದಲಿಸುತ್ತಿಲ್ಲ ಎಂದಿದ್ದಾರೆ.
ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗೆ ನಾನು ಉತ್ತಮ ಬಾಂಧವ್ಯ ಹೊಂದಿದ್ದೇನೆ. ಅವರು ನನ್ನ ಮೊದಲ ಕ್ಯಾಪ್ಟನ್. ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ ಪರ ಹಲವು ಪಂದ್ಯಗಳಲ್ಲಿ ಆಡಿದ್ದೇನೆ. ನನಗಷ್ಟೇ ಅಲ್ಲ, ತಂಡದ ಎಲ್ಲ ಆಟಗಾರರಿಗೂ ದ್ರಾವಿಡ್ ದೊಡ್ಡ ಮಾದರಿ. ಅವರನ್ನು ತಂಡದೊಂದಿಗೆ ಇರಲು ಮತ್ತು ಇನ್ನೂ ಕೆಲವು ವರ್ಷಗಳ ಕಾಲ ಕೋಚ್ ಆಗಿ ನಮ್ಮನ್ನು ಮುನ್ನಡೆಸಲು ಮನವಿ ಮಾಡಿದ್ದೇನೆ. ತಂಡವನ್ನು ಬಿಟ್ಟು ಹೋಗಬೇಡಿ, ಕೋಚ್ ಆಗಿ ಮುಂದುವರಿಯುವಂತೆ ಮನವರಿಕೆ ಮಾಡಿದೆ. ಆದರೆ, ಅದಕ್ಕೆ ಡ್ರಾವಿಡ್ ಅವರು ಒಪ್ಪಲಿಲ್ಲ ಎಂದು ರೋಹಿತ್ ಭಾವುಕರಾದರು.
Rohit Sharma said – "My equation with Rahul Dravid is very good. He is my first Captain. I played under him, He is such a big role model for all of us. I try to convince him to continue as coach. I will not be able to see him go". (Got emotional). pic.twitter.com/d7ZfAI7fS0
— Tanuj Singh (@ImTanujSingh) June 4, 2024
ರೋಹಿತ್ ಹೇಳಿಕೆಯ ಮೂಲಕ ನಾವು ಹಿಟ್‌ಮ್ಯಾನ್ ಮತ್ತು ದ್ರಾವಿಡ್ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಬಹುದು. ರೋಹಿತ್ ಕಾಮೆಂಟ್ ನೋಡಿದ ನೆಟ್ಟಿಗರು ಕೋಚ್-ಕ್ಯಾಪ್ಟನ್ ನಡುವೆ ಈ ರೀತಿಯ ಬಾಂದವ್ಯ ತುಂಬಾ ಅಪರೂಪ ಅಂತಿದ್ದಾರೆ. ಇವರ ಜೋಡಿ ಅಮೋಘವಾಗಿದ್ದು, ದ್ರಾವಿಡ್ ಇನ್ನೂ ಕೆಲವು ವರ್ಷ ಕೋಚ್ ಆಗಿ ಮುಂದುವರಿದರೆ ಉತ್ತಮ ಎಂದು ಹೇಳುತ್ತಿದ್ದಾರೆ. (ಏಜೆನ್ಸೀಸ್)
ನಿಜವಾಯ್ತು ರಾಜಗುರು ಭವಿಷ್ಯ: ವಿಜಯವಾಣಿಗೆ ನೀಡಿದ ವರ್ಷಭವಿಷ್ಯದಲ್ಲಿ ಉಲ್ಲೇಖ
ಸರ್ಕಾರ ರಚನೆ ಕಸರತ್ತು ಜೋರು: ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಕೈಯಲ್ಲಿ ಮುಂದಿನ ಸರ್ಕಾರದ ಕೀಲಿಕೈ