

ಬದಿಯಡ್ಕ: ನೀರ್ಚಾಲು ಸಮೀಪದ ಕಾನತ್ತಿಲ ಗದ್ದೆಯಲ್ಲಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಮಕ್ಕಳು ಶುಕ್ರವಾರ ಕೆಸರಿನಲ್ಲಿ ಮಿಂದು ಸಂಭ್ರಮಿಸಿದರು. ಗದ್ದೆ ಬೇಸಾಯದ ಜ್ಞಾನವನ್ನು ಮಕ್ಕಳಲ್ಲಿ ಮೂಡಿಸುವ ಸಲುವಾಗಿ ಶಿಕ್ಷಕ ವೃಂದದ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಉಳುಮೆ ಮಾಡಿದ ಗದ್ದೆಗೆ ಬೇಕಾಗಿರುವ ಹಟ್ಟಿಗೊಬ್ಬರವನ್ನು ಮಕ್ಕಳು ಬುಟ್ಟಿಯಲ್ಲಿ ತುಂಬಿಸಿ ಗದ್ದೆಗೆ ಹಾಕಿದರು.
ನಾಗರಪಂಚಮಿಯ ವಿಶೇಷ ದಿನದಲ್ಲಿ ಪ್ರಕೃತಿ ಪೂಜನೆಯೊಂದಿಗೆ ಮಣ್ಣಿನ ಫಲವತ್ತತೆಯ ಅನಿವಾರ್ಯತೆಯನ್ನು ಹಿರಿಯರ ಅನುಭವ ನುಡಿಗಳಿಂದ ಕೇಳಿ ತಿಳಿದುಕೊಂಡರು.
ಶ್ರೀರಾಮಚಂದ್ರಾಪುರ ಮಠದ ಬತ್ತದ ಬುತ್ತಿಯಡಿಯಲ್ಲಿ ಡಾ.ವೈ.ವಿ.ಕೃಷ್ಣಮೂರ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾನತ್ತಿಲ ದಿ. ಮಹಾಲಿಂಗ ಭಟ್ಟರ ಗದ್ದೆಯಲ್ಲಿ ಕಾರ್ಯಕ್ರಮ ನಡೆಯಿತು. ರಾಜಗೋಪಾಲ ಕಾನತ್ತಿಲ ಹಾಗೂ ಸರೋಜ ಕಾನತ್ತಿಲ ಸಹಕರಿಸಿದರು. ಅನುಭವಪೂರ್ಣ ಬತ್ತದ ಬುತ್ತಿಯನ್ನು ಅಣಿಗೊಳಿಸುವಲ್ಲಿ ಸಂಚಾಲನಾ ಸಮಿತಿಯ ಸದಸ್ಯರೂ, ಪಾಲಕರು ಹಾಗೂ ಸ್ಥಳೀಯರು ಸಹಕಾರವನ್ನಿತ್ತರು.