ಕಾಯಂ ವೈದ್ಯಾಧಿಕಾರಿ ನೇಮಕಕ್ಕೆ ಗ್ರಾಮಸ್ಥರ ಆಗ್ರಹ

Kdb_Govt-Hospital
Published on

ವಿಜಯವಾಣಿ ಸುದ್ದಿಜಾಲ ಕಡಬ

ಕೊೖಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಾಲ್ಕೈದು ವರ್ಷಗಳಿಂದ ಖಾಲಿ ಇರುವ ವೈದ್ಯಾಧಿಕಾರಿ ಹುದ್ದೆಯನ್ನು ಶೀಘ್ರ ಭರ್ತಿಗೊಳಿಸಬೇಕು. ನೇಮಕವಾಗದಿದ್ದರೆ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ ಘಟನೆ ರಾಮಕುಂಜ ಗ್ರಾಮಸಭೆಯಲ್ಲಿ ನಡೆದಿದೆ. ಗ್ರಾ.ಪಂ.ಅಧ್ಯಕ್ಷೆ ಸುಚೇತಾ ಬರೆಂಬೆಟ್ಟು ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಆರೋಗ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡುತ್ತಿದ್ದ ವೇಳೆ ವಿಷಯ ಪ್ರಸ್ತಾಪಿಸಿದ ಎಸ್.ಕೆ.ಸಿದ್ದೀಕ್, ನಾಲ್ಕೈದು ವರ್ಷಗಳಿಂದ ಕೊೖಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಹುದ್ದೆ ಖಾಲಿ ಇದೆ ಎಂದರು. ಇದಕ್ಕೆ ಪೂರಕವಾಗಿ ಮಾತನಾಡಿದ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಧರ್ಮಪಾಲ ರಾವ್, ಆತೂರಿನಲ್ಲಿರುವ ಕೊೖಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವ್ಯವಸ್ಥಿತವಾದ ಕಟ್ಟಡವಿದೆ. 7 ಗ್ರಾಮಗಳ ವ್ಯಾಪ್ತಿಯೂ ಇದೆ. ಆದರೆ ವೈದ್ಯರಿಲ್ಲದೆ ಗ್ರಾಮಸ್ಥರು ತೊಂದರೆ ಪಡುವಂತೆ ಆಗಿದೆ ಎಂದರು. ಇದಕ್ಕೆ ಲಕ್ಷ್ಮೀ ನಾರಾಯಣ ರಾವ್ ಆತೂರು, ಚಿತ್ತರಂಜನ್ ಬದೆಂಜ ಸಹಿತ ಹಲವು ಗ್ರಾಮಸ್ಥರು ಬೆಂಬಲ ಸೂಚಿಸಿ ಕಾಯಂ ವೈದ್ಯಾಧಿಕಾರಿ ನೇಮಕ ಮಾಡಬೇಕೆಂದು ಆಗ್ರಹಿಸಿದರು.

ಈ ಬಗ್ಗೆ ಚರ್ಚೆ ನಡೆದು ಕೊೖಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯಾಧಿಕಾರಿ ನೇಮಕ ಮಾಡುವಂತೆ ಸಂಬಂಧಿಸಿದ ಇಲಾಖೆಗೆ ಮನವಿ ಮಾಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ವೈದ್ಯಾಧಿಕಾರಿ ನೇಮಕವಾಗದಿದ್ದರೆ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ಶಿಥಿಲಗೊಂಡಿರುವ ಶಾಲಾ ಕಟ್ಟಡ

ರಾಮಕುಂಜ ಸರ್ಕಾರಿ ಹಿ.ಪ್ರಾ.ಶಾಲೆಯ ಕಟ್ಟಡ ಶಿಥಿಲಗೊಂಡಿದೆ ಎಂದು ಲಕ್ಷ್ಮೀನಾರಾಯಣ ರಾವ್, ಧರ್ಮಪಾಲ ರಾವ್, ಸಿದ್ದೀಕ್ ಎಸ್.ಕೆ.ವಿಷಯ ಪ್ರಸ್ತಾಪಿಸಿ ಹೊಸ ಕಟ್ಟಡ ರಚನೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಪ್ರಶಾಂತ್ ಆರ್.ಕೆ., ಉದ್ಯೋಗ ಖಾತ್ರಿ ಯೋಜನೆಯಡಿ ರಾಮಕುಂಜ ಶಾಲೆಗೆ ಶೌಚಗೃಹ, ಆವರಣ ಗೋಡೆ ಮಾಡಿಕೊಡಲಾಗಿದೆ. ಶಾಲಾ ಕಟ್ಟಡಕ್ಕೆ ದೊಡ್ಡ ಮೊತ್ತದ ಅನುದಾನ ಬೇಕಿರುವುದರಿಂದ ಪಂಚಾಯಿತಿಯಿಂದ ಸಾಧ್ಯವಿಲ್ಲ ಎಂದರು. ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖಾವಾರು ಮಾಹಿತಿ ನೀಡಿದರು.

ಗ್ರಾ.ಪಂ. ಉಪಾಧ್ಯಕ್ಷ ಕೇಶವ ಗಾಂಧಿಪೇಟೆ, ಸದಸ್ಯರಾದ ಮಾಲತಿ ಎನ್.ಕೆ., ಸುಜಾತ ಕೆ., ಭಾರತಿ ಎಂ., ಭವಾನಿ, ಜಯಶ್ರೀ, ರೋಹಿಣಿ ಬಿ., ಕುಶಾಲಪ್ಪ ಎಂ., ವಸಂತ ಪಿ., ಪ್ರದೀಪ ಬಿ., ಅಬ್ದುಲ್ ರಹಿಮಾನ್, ಯತೀಶ್‌ಕುಮಾರ್, ಪ್ರಶಾಂತ ಆರ್.ಕೆ. ಚರ್ಚೆಯಲ್ಲಿ ಪಾಲ್ಗೊಂಡರು. ಸಿಬ್ಬಂದಿ ದುರ್ಗಾಪ್ರಸಾದ್ ವರದಿ ವಾಚಿಸಿದರು. ಪಿಡಿಒ ಮೋಹನ್‌ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಲಲಿತಾ ವಂದಿಸಿದರು.

ಕುಮ್ಕಿ ಭೂಮಿ ಲೀಸ್‌ಗೆ ಆಕ್ಷೇಪ

ಕುಮ್ಕಿ ಭೂಮಿ ಲೀಸ್‌ಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಯುತ್ತಿದೆ. ಇದು ಜಾರಿಗೊಂಡಲ್ಲಿ ಕುಮ್ಕಿ ಭೂಮಿಯನ್ನು ರೈತರಿಂದ ಕಸಿದುಕೊಂಡಂತೆ ಎಂದು ಚಿತ್ತರಂಜನ್ ಅವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮ ಆಡಳಿತಾಧಿಕಾರಿ ಸತೀಶ್ ಅವರು, ಇದು ಸರ್ಕಾರದ ಹಂತದಲ್ಲಿ ಆಗುವಂತದ್ದು. ಆದರೆ ಈ ಬಗ್ಗೆ ಯಾವುದೇ ಸುತ್ತೋಲೆ ಬಂದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net