ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದ ಇಬ್ಬರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಯಿಂದ ನೋಟೀಸ್!

notice
Published on

ಗಂಗಾವತಿ: ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಟೀಕೆಯನ್ನು ಒಳಗೊಂಡ ಸ್ಟೇಟಸ್ಅನ್ನು ಈ ಶಿಕ್ಷಕ ಶಿಕ್ಷಕಿಯರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಿಂದಾಗಿ ಅವರೀಗ ನೋಟೀಸ್ ಒಂದನ್ನು ಪಡೆದಿದ್ದಾರೆ.  

ಈ ಘಟನೆ ಗಂಗಾವತಿಯಲ್ಲಿ ನಡೆದಿದ್ದು ನಗರದ ಇಂದಿರಾನಗರ ಶಾಲೆಯ ಶಿಕ್ಷಕಿ ನಳಿನಾಕ್ಷಿ ಮತ್ತು ಅಮರ ಭಗತ್ ಸಿಂಗ್ ನಗರದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಪತ್ರೆಪ್ಪ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತಪಡಿಸಿ ಸ್ಟೇಟಸ್ ಹಾಕಿದ್ದರು. ಇವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೋಟಿಸ್ ನೀಡಿದ್ದಾರೆ.

ಕಾಂಗ್ರೆಸ್, ಚುನಾವಣೆಗೂ ಮುನ್ನ ಗ್ಯಾರಂಟಿಗಳನ್ನು ಘೋಷಿಸಿದ್ದು, ಅಧಿಕಾರಕ್ಕೆ ಬಂದ ನಂತರ ಒಂದೊಂದಾಗಿ ಜಾರಿಗೊಳಿಸುತ್ತಿದ್ದಾರೆ. ಈ ಕುರಿತಾಗಿ ಆಕ್ಷೇಪ ವ್ಯಕ್ತಪಡಿಸಿರುವ ಶಿಕ್ಷಕ ಪತ್ರೇಪ್ಪ ಹಾಗೂ ಶಿಕ್ಷಕಿ ನಳಿನಾಕ್ಷಿ, ಗ್ಯಾರಂಟಿ ಹಟಾವೊ, ದೇಶ್ ಬಚಾವೋ ಎಂದು ಸ್ಟೇಟಸ್ ಹಾಕಿದ್ದರು. ಅದರೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶಕ್ಕಾಗಿ ಮಾಡಿದ ಕೆಲಸ ಕಾರ್ಯಗಳನ್ನು ಯಾರು ಪ್ರಶ್ನಿಸುತ್ತಾರೋ ಅವರನ್ನು ಕುಳ್ಳಿರಿಸಿಕೊಂಡು ಮಾಹಿತಿ ನೀಡುವಂತೆ 200 ಯೋಜನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಈ ಮೂಲಕ ಅವರಿಬ್ಬರು ಬಿಜೆಪಿ ಪರವಾಗಿ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದರು.

ಶಿಕ್ಷಕ ಶಿಕ್ಷಕಿ ಸಾಮಾಜಿಕ ಜಾಲತಾಣದ ಹಾಕಿರುವ ಸ್ಟೇಟಸ್ ಕುರಿತು ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಗಿತ್ತು. ಇದನ್ನು ಗಮನಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಡಿಡಿಪಿಐ, ಇಬ್ಬರಿಗೂ ಕೆಸಿಎಸ್ಆರ್ ನಿಯಮ ಉಲ್ಲಂಘಿಸಿದ ಕುರಿತು ನಿಮಗೆ ಯಾಕೆ ನೋಟಿಸ್ ನೀಡಬಾರದು ಎಂದು ಕಾರಣ ಕೇಳಿ ನೋಟಿಸ್ ಕಳಿಸಿದ್ದಾರೆ. ತಕ್ಷಣವೇ ನೋಟಿಸ್ ಗೆ ಉತ್ತರಿಸದೇ ಇದ್ದರೆ ಏಕಮುಖವಾಗಿ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net